ADVERTISEMENT

ಮಹಿಳೆ ರಕ್ಷಣೆ, ಸಬಲೀಕರಣಕ್ಕೆ ಬಿಜೆಪಿ ಆದ್ಯತೆ: ಸಪ್ನಾ ಕಣಮುಚನಾಳ  

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2024, 16:18 IST
Last Updated 23 ಏಪ್ರಿಲ್ 2024, 16:18 IST
ವಿಜಯಪುರ ನಗರದ ಬಿಜೆಪಿ‌ ಚುನಾವಣಾ ಕಾರ್ಯಾಲಯದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಬಿಜೆಪಿ ಮಹಿಳಾ‌ ಮೊರ್ಚಾದ ಜಿಲ್ಲಾ ನೂತನ ಪದಾಧಿಕಾರಿಗಳ‌ ಪದಗ್ರಹಣ ಸಮಾರಂಭದಲ್ಲಿ ಸಪ್ನಾ ಕಣಮುಚನಾಳ ಮಾತನಾಡಿದರು
ವಿಜಯಪುರ ನಗರದ ಬಿಜೆಪಿ‌ ಚುನಾವಣಾ ಕಾರ್ಯಾಲಯದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಬಿಜೆಪಿ ಮಹಿಳಾ‌ ಮೊರ್ಚಾದ ಜಿಲ್ಲಾ ನೂತನ ಪದಾಧಿಕಾರಿಗಳ‌ ಪದಗ್ರಹಣ ಸಮಾರಂಭದಲ್ಲಿ ಸಪ್ನಾ ಕಣಮುಚನಾಳ ಮಾತನಾಡಿದರು   

ವಿಜಯಪುರ: ದೇಶದಲ್ಲಿ ಮಹಿಳೆಯರ ರಕ್ಷಣೆ ಹಾಗೂ ಸಬಲೀಕರಣಕ್ಕಾಗಿ ಬಿಜೆಪಿ ಪ್ರಥಮಾದ್ಯತೆ ನೀಡಿ ಹಲವಾರು ಮಹಿಳಾಪರ ಯೋಜನೆಗಳನ್ನು ಅನುಷ್ಠಾನಕ್ಕೆ ತಂದು ಮಹಿಳಾ‌ ಸಶಕ್ತಿಕರಣಗೊಳಿಸಲು ಶ್ರಮಿಸುತ್ತಿದೆ ಎಂದು ಬಿಜೆಪಿ ಮಹಿಳಾ ಮೊರ್ಚಾ ಜಿಲ್ಲಾ ಘಟಕದ ಅಧ್ಯಕ್ಷೆ ಸಪ್ನಾ ಕಣಮುಚನಾಳ ಹೇಳಿದರು.

ನಗರದ ಬಿಜೆಪಿ‌ ಚುನಾವಣಾ ಕಾರ್ಯಾಲಯದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಬಿಜೆಪಿ ಮಹಿಳಾ‌ ಮೊರ್ಚಾದ ಜಿಲ್ಲಾ ನೂತನ ಪದಾಧಿಕಾರಿಗಳ‌ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರ್ಕಾರವು ಮಹಿಳಾ ಸಬಲೀಕರಣಕ್ಕೆ ಕಳೆದ 10 ವರ್ಷಗಳಲ್ಲಿ ಗರಿಷ್ಠ ಆದ್ಯತೆ ನೀಡಿದೆ. ಶೇ 33ರಷ್ಟು ಮಹಿಳಾ ಮೀಸಲಾತಿ, ತ್ರಿವಳಿ ತಲಾಖ್ ರದ್ದು, ಮಹಿಳಾ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ಸೇರಿ ಮಹಿಳಾ ರಕ್ಷಣೆಗೆ ಅನೇಕ ಕಾನೂನಾತ್ಮಕ ಕ್ರಮಗಳನ್ನು ತೆಗೆದುಕೊಂಡಿದ್ದಾರೆ ಎಂದರು.

ರಾಜ್ಯದಲ್ಲಿ ಉಜ್ವಲ ಯೋಜನೆಯಡಿ 35.57 ಲಕ್ಷ ಗ್ಯಾಸ್ ಸಂಪರ್ಕ, ಜಲ ಜೀವನ್‍ನಡಿ ಕರ್ನಾಟಕದಲ್ಲಿ 70.12 ಲಕ್ಷ ಮನೆಗಳಿಗೆ ನಳ ನೀರಿನ ಸಂಪರ್ಕ, ಕರ್ನಾಟಕದಲ್ಲಿ 48 ಲಕ್ಷಕ್ಕಿಂತ ಹೆಚ್ಚು ಶೌಚಾಲಯಗಳ ನಿರ್ಮಾಣ ಹೀಗೆ ಸಾಕಷ್ಟು ಯೋಜನೆಗಳನ್ನು ಅನುಷ್ಠಾನಗೊಳಿಸಿದೆ ಎಂದು ಹೇಳಿದರು.

ADVERTISEMENT

ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಕಳೆದ 10 ವರ್ಷಗಳಲ್ಲಿ 51.6 ಕೋಟಿ ಜನ್ ಧನ್ ಖಾತೆಗಳನ್ನು ತೆರೆಯಲಾಗಿದೆ. ಇದರಲ್ಲಿ 28 ಕೋಟಿ ಮಹಿಳಾ ಖಾತೆಗಳಿವೆ. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಶೇ 70ರಷ್ಟು ಮನೆಗಳನ್ನು ಮಹಿಳೆಯರಿಗೇ ಕೊಡಲಾಗುತ್ತಿದೆ ಎಂದರು.

ಈ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ‌ ಗೆಲ್ಲಲು ಮಹಿಳೆಯರ ಪಾತ್ರ ದೊಡ್ಡದಿದೆ. ಎಲ್ಲರೂ ಬಿಜೆಪಿಯ ಸಾಧನೆಗಳನ್ನು ಪ್ರತಿ ಮನೆಮನೆಗೆ ತಲುಪಿಸಿ‌ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ‌ ಅವರ ಗೆಲುವಿಗೆ ಶ್ರಮಿಸೋಣ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ್‌ ಕುಚಬಾಳ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಹಿಳೆಯರು ರಾಜಕೀಯವಾಗಿ ಮೇಲೆ‌ ಬರಲು ಶೇ 33 ರಷ್ಟು ಮೀಸಲಾತಿಯನ್ನು ಬಿಜೆಪಿ ಕಲ್ಪಿಸಿದೆ. ಮಹಿಳೆಯರು ಎಲ್ಲಾ ರಂಗಗಳಲ್ಲೂ ಮುಂದೆ ಬರಬೇಕೆಂಬ ವಿಚಾರ ಬಿಜೆಪಿ ಪಕ್ಷದ್ದಾಗಿದೆ ಎಂದರು.

ಬಿಜೆಪಿ ಬೆಳಗಾವಿ ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರಕಾಶ ಅಕ್ಕಲಕೋಟ ಮಾತನಾಡಿ, ಪಕ್ಷದ ಜವಾಬ್ದಾರಿ ವಹಿಸಿಕೊಂಡ ಎಲ್ಲಾ ಮಹಿಳಾ‌ ಪದಾಧಿಕಾರಿಗಳು ತಮ್ಮ ಮನೆ ಸುತ್ತಮುತ್ತಲಿನ‌ ಕನಿಷ್ಠ 50 ಮಹಿಳೆಯರಿಗೆ ಬಿಜೆಪಿಯ ಜನಪರ, ಮಹಿಳಾಪರ‌ ಯೋಜನೆಗಳ ಪರಿಚಯ ಮಾಡಿಕೊಟ್ಟು ದೇಶದ ಸಮಗ್ರ ಅಭಿವೃದ್ಧಿಗೆ ಬಿಜೆಪಿ ಅಭ್ಯರ್ಥಿಯ ಗೆಲುವು ಅವಶ್ಯಕ ಎಂಬುದನ್ನು ಮನವರಿಕೆ ಮಾಡಿಕೊಡಬೇಕು ಎಂದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಳುಗೌಡ ಪಾಟೀಲ್, ಈರಣ್ಣ ರಾವೂರ, ಸಾಬೂ ಮಾಶ್ಯಾಳ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.