ADVERTISEMENT

ವಿಜಯಪುರ: ಬಿಜೆಪಿ ಕಾರ್ಯಕರ್ತರು ಪೊಲೀಸ್‌ ವಶ, ಬಿಡುಗಡೆ

ಗ್ಯಾರಂಟಿಗೆ ಎಸ್‍ಸಿಪಿ-ಟಿಎಸ್‍ಪಿ ಅನುದಾನ ಬಳಕೆ; ಬಂಜಾರ ಅಭಿವೃದ್ಧಿ ನಿಗಮಕ್ಕೆ ಮುತ್ತಿಗೆ ಯತ್ನ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2025, 5:50 IST
Last Updated 9 ಆಗಸ್ಟ್ 2025, 5:50 IST
ವಿಜಯಪುರ ಜಿಲ್ಲಾ ಬಿಜೆಪಿ ಘಟಕದಿಂದ ಶುಕ್ರವಾರ ನಡೆದ ಪ್ರತಿಭಟನೆಯಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ಗುರುಲಿಂಗಪ್ಪ ಅಂಗಡಿ ಮಾತನಾಡಿದರು 
ವಿಜಯಪುರ ಜಿಲ್ಲಾ ಬಿಜೆಪಿ ಘಟಕದಿಂದ ಶುಕ್ರವಾರ ನಡೆದ ಪ್ರತಿಭಟನೆಯಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ಗುರುಲಿಂಗಪ್ಪ ಅಂಗಡಿ ಮಾತನಾಡಿದರು    

ವಿಜಯಪುರ: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗೆ ಮೀಸಲಿರಿಸಿದ ಎಸ್‍ಸಿಪಿ-ಟಿಎಸ್‍ಪಿ ಅನುದಾನವನ್ನು ರಾಜ್ಯ ಕಾಂಗ್ರೆಸ್‌ ಸರ್ಕಾರವು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿದೆ ಎಂದು ಆರೋಪಿಸಿ ಬಿಜೆಪಿ ಜಿಲ್ಲಾ ಘಟಕದಿಂದ ಶುಕ್ರವಾರ ಪ್ರತಿಭಟನೆ ನಡೆಯಿತು.

ಪ್ರತಿಭಟನಾಕಾರರು ಬಂಜಾರಾ ಅಭಿವೃದ್ಧಿ ನಿಗಮದ ಜಿಲ್ಲಾ ಕಚೇರಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದರು. ಈ ವೇಳೆ ತಡೆಯಲು ಮುಂದಾದ ಪೊಲೀಸರೊಂದಿಗೆ ವಾಗ್ವಾದ ನಡೆಸಿದರು. ಪೊಲೀಸರ ಭದ್ರತೆಯ ನಡುವೆಯೂ ನಿಗಮದ ಕಚೇರಿಗೆ ಮುತ್ತಿಗೆ ಹಾಕಲು ಮುಂದಾದ 40ಕ್ಕೂ ಅಧಿಕ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು, ಬಳಿಕ ಬಿಡುಗಡೆ ಮಾಡಿದರು.

ರಾಜ್ಯ ಸರ್ಕಾರ ದಲಿತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ, ಬಿಜೆಪಿ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. 

ADVERTISEMENT

ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಮಾತನಾಡಿ, ಉಳಿದ ವರ್ಗದವರಿಗೆ ಗ್ಯಾರಂಟಿ ಯೋಜನೆಗೆ ಸರ್ಕಾರದ ಖಜಾನೆಯಿಂದ ಅನುದಾನ ಬಿಡುಗಡೆಯಾಗುತ್ತಿದೆ. ಆದರೆ, ದಲಿತರಿಗೆ ಎಸ್‍ಸಿಪಿ-ಟಿಎಸ್‍ಪಿ ಹಣವನ್ನೇ ಗ್ಯಾರಂಟಿ ಯೋಜನೆಗೆ ನೀಡಿದರೆ ಹೇಗೆ? ಇದು ಅವೈಜ್ಞಾನಿಕ ಅಷ್ಟೇ ಅಲ್ಲ ಅನ್ಯಾಯವೂ ಸಹ ಹೌದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಗುರುಲಿಂಗಪ್ಪ ಅಂಗಡಿ ಮಾತನಾಡಿ, ರಾಜ್ಯ ಸರ್ಕಾರ ದಲಿತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿದೆ, ಕೇವಲ ಮಾತಿನಲ್ಲಿ ದಲಿತಪರ ಎಂದು ಹೇಳುತ್ತಿದೆ ಹೊರತು, ದಲಿತ ಸಮುದಾಯಗಳ ಅಭಿವೃದ್ಧಿ ಯೋಜನೆಯ ಹಣವನ್ನು ದುರುಪಯೋಗ ಮಾಡಿ ದಲಿತ ವಿರೋಧಿ ಎಂಬುದನ್ನು ಕಾಂಗ್ರೆಸ್ ಸಾಬೀತುಪಡಿಸಿದೆ ಎಂದು ದೂರಿದರು.

ಬಿಜೆಪಿ ಮುಖಂಡ ಮಹೇಂದ್ರಕುಮಾರ ನಾಯಕ ಮಾತನಾಡಿ, ಕಾಂಗ್ರೆಸ್ ದಲಿತ ವಿರೋಧಿ ಇಂದು ನಿನ್ನೆಯದಲ್ಲ, ಕೇವಲ ಬಾಯಿಮಾತಿನಲ್ಲಿ ದಲಿತಪರ ಎಂದು ಹೇಳುವ ಕಾಂಗ್ರೆಸ್‍ಗೆ ದಲಿತರ ಮೇಲೆ ಎಳ್ಳಷ್ಟೂ ಕಾಳಜಿ ಇಲ್ಲ ಎಂದು ಆರೋಪಿಸಿದರು.

ಬಿಜೆಪಿ ಎಸ್.ಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ, ಪ್ರಮುಖರಾದ  ರವಿ ವಗ್ಗೆ, ಮಂಜುನಾಥ ಮೀಸೆ, ಭರತ ಕೋಳಿ, ಎಸ್.ಎ.ಪಾಟೀಲ, ಶಿಲ್ಪಾ ಕುದರಗುಂಡ, ಬಸವರಾಜ ಬೈಚಬಾಳ, ಉಮೇಶ ಕೋಳಕೂರ, ಸಾಬು ಮಾಶ್ಯಾಳ, ಶ್ರೀಹರಿ ಗೊಳಸಂಗಿ ಸಂಜಯಪಾಟೀಲ್ ಕನಮಡಿ, ವಿಜಯ ಜೋಶಿ, ವಿಕಾಸ್ ಪದಕಿ, ಮಲ್ಲಿಕಾರ್ಜುನ ದೇವರಮನಿ, ಗುರು ತಳವಾರ, ಸಿದ್ದು ಮಖಣಾಪೂರ, ಮಲ್ಲಮ್ಮ ಜೋಗೂರ, ರಾಜಕುಮಾರ ಸಗಾಯಿ, ಅಶೋಕ ರಾಠೋಡ, ವಿನೋದಕುಮಾರ ಮಣೂರ, ಪ್ರಶಾಂತ ಪವಾರ, ವಿನೋದ ಕೋಳೂರ, ಶರತಸಿಂಗ್ ರಜಪೂತ, ವಿನಯ ಬಬಲೇಶ್ವರ, ಶೀಲವಂತ ಉಮರಾಣಿ, ರಾಜೇಶ ತಾವಸೆ, ಮಂಜುಳಾ, ನಾಗರಾಜ ಪಾಟೀಲ, ಕಾಂತು ಶಿಂಧೆ, ಸಂದೀಪ್ ಪಾಟೀಲ ಇದ್ದರು.

ರಾಜ್ಯದಲ್ಲಿರುವ ಆಡಳಿತಾರೂಢ ಕಾಂಗ್ರೆಸ್ ಎಸ್‍ಸಿಪಿ-ಟಿಎಸ್‍ಪಿ ಅನುದಾನಕ್ಕೂ ಕೈ ಹಾಕಿ ದಲಿತ ವರ್ಗದ ಜನರಿಗೆ ಬಹುದೊಡ್ಡ ಅನ್ಯಾಯ ಮಾಡುತ್ತಿದೆ
ಎಸ್.ಕೆ. ಬೆಳ್ಳುಬ್ಬಿ ಮಾಜಿ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.