ADVERTISEMENT

ಬಿ.ಎಲ್.ಡಿ.ಇ ಸಂಸ್ಥೆ ಕೊಡುಗೆ ಅನನ್ಯ: ಮಹಾಂತಪ್ರಭು ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2025, 6:06 IST
Last Updated 25 ಅಕ್ಟೋಬರ್ 2025, 6:06 IST
ವಿಜಯಪುರದಲ್ಲಿ ಗುರುವಾರ  ನಡೆದ ಬಿ.ಎಲ್.ಡಿ.ಇ ಸಂಸ್ಥೆಯ ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ‌ ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಲಾಯಿತು
ವಿಜಯಪುರದಲ್ಲಿ ಗುರುವಾರ  ನಡೆದ ಬಿ.ಎಲ್.ಡಿ.ಇ ಸಂಸ್ಥೆಯ ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ‌ ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಲಾಯಿತು   

ವಿಜಯಪುರ: ಉತ್ತರ ಕರ್ನಾಟಕದಲ್ಲಿ ಶಿಕ್ಷಣ, ಆರೋಗ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ಬಿ.ಎಲ್.ಡಿ.ಇ ಸಂಸ್ಥೆ ನೀಡುತ್ತಿರುವ ಕೊಡುಗೆ ಅನನ್ಯ ಎಂದು ಶೇಗುಣಸಿ ವಿರಕ್ತಮಠದ ಮಹಾಂತಪ್ರಭು ಮಹಾಸ್ವಾಮಿಗಳು ಹೇಳಿದರು.

ವಿಜಯಪುರದಲ್ಲಿ ಗುರುವಾರ ನಡೆದ ಬಿ.ಎಲ್.ಡಿ.ಇ ಸಂಸ್ಥೆಯ ಸಂಸ್ಥಾಪನಾ ದಿನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಚನಪಿತಾಮಹ ಫ.ಗು. ಹಳಕಟ್ಟಿ ಅವರು ಬಿ.ಎಲ್.ಡಿ.ಇ ಸಂಸ್ಥೆಯನ್ನು ಪ್ರಾರಂಭಿಸುವ ಮೂಲಕ ಈ ಭಾಗದಲ್ಲಿ ಶಿಕ್ಷಣಕ್ಕೆ ಆದ್ಯತೆ ನೀಡಿದರು. ನಂತರ ಬಂಥನಾಳ ಶ್ರೀಗಳು ಪ್ರವಚನಗಳ ಮೂಲಕ ಸಂಸ್ಥೆ ಆರ್ಥಿಕವಾಗಿ ಬೆಳೆಯಲು ಕೊಡುಗೆ ನೀಡಿದರು. ಬಂಗಾರಮ್ಮ ಸಜ್ಜನ 54 ಎಕರೆ ಭೂಮಿ ನೀಡಿದರು. ಬಿ.ಎಂ.ಪಾಟೀಲರು ಎಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜು ಪ್ರಾರಂಭಿಸಿ ವೃತ್ತಿಪರ ಕೋರ್ಸುಗಳಿಗೆ ಆದ್ಯತೆ ನೀಡಿದರು. ಅವರು ಹಾಕಿದ ಭದ್ರ ಬುನಾದಿಯ ಪರಿಣಾಮ ಈಗ ಸಂಸ್ಥೆಯ ಅಡಿಯಲ್ಲಿ 100ಕ್ಕಿಂತಲೂ ಹೆಚ್ಚು ವಿದ್ಯಾಲಯಗಳು ಕಾರ್ಯ ನಿರ್ವಹಿಸುತ್ತಿವೆ ಎಂದರು.

ADVERTISEMENT

ಸಂಸ್ಥೆಯ ಅಧ್ಯಕ್ಷ ಎಂ.ಬಿ.ಪಾಟೀಲ ಅವರು ಈ  ಹಿಂದೆ ಜಲಸಂಪನ್ಮೂಲ ಸಚಿವರಾಗಿದ್ದಾಗ ನೀರಾವರಿ ಕ್ರಾಂತಿ ಮಾಡಿದ್ದರು. ಈಗ ಕೈಗಾರಿಕೆ ಸಚಿವರಾಗಿ ಕೈಗಾರಿಕೆ ಮತ್ತು ಉದ್ಯೋಗ ಕ್ರಾಂತಿ ಮಾಡಲು ದಾಪುಗಾಲು ಇಟ್ಟಿದ್ದಾರೆ. ವಿಜಯಪುರ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಕಾರಣರಾಗಿದ್ದಾರೆ ಎಂದು ತಿಳಿಸಿದರು.

ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಸಮಕುಲಾಧಿಪತಿ ಡಾ.ವೈ.ಎಂ. ಜಯರಾಜ ಮಾತನಾಡಿ, ಶತಮಾನಕ್ಕಿಂತಲೂ ಹೆಚ್ಚು ಇತಿಹಾಸ ಹೊಂದಿರುವ ಸಂಸ್ಥೆ ನಮಗೆಲ್ಲರಿಗೂ ಬದುಕು ಕೊಟ್ಟಿದೆ. ಅದಕ್ಕೆ ಪ್ರತಿಯಾಗಿ ನಾವೂ ಕೊಡುಗೆ ನೀಡಬೇಕು ಎಂದರು.

ಇದೇ ವೇಳೆ ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 23 ವಿದ್ಯಾರ್ಥಿಗಳು, 33 ಸಿಬ್ಬಂದಿ ಹಾಗೂ 4 ಕಾಲೇಜುಗಳ ಮುಖ್ಯಸ್ಥರನ್ನು ಸನ್ಮಾನಿಸಲಾಯಿತು.

ಬಿ.ಎಲ್.ಡಿ.ಇ ಡೀಮ್ಡ್ ವಿವಿ ಕುಲಪತಿ ಡಾ.ಅರುಣ . ಇನಾಮದಾರ, ರಜಿಸ್ಟ್ರಾರ್ ಡಾ. ಆರ್.ವಿ. ಕುಲಕರ್ಣಿ, ಸಂಸ್ಥೆಯ ಆಡಳಿತಾಧಿಕಾರಿಗಳಾದ ಡಾ.ಎಸ್.ಎಚ್. ಲಗಳಿ, ಪ್ರೊ. ವಿಲಾಸ ಬಗಲಿ, ಡಾ. ಅಶೋಕ ಲಿಮಕರ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.