ADVERTISEMENT

ಬಿಎಲ್‍ಡಿಇ ಆಸ್ಪತ್ರೆ: 200 ಆಕ್ಸಿಜನ್ ಬೆಡ್ ಶೀಘ್ರ

ಬಿಎಲ್‍ಡಿಇ ಸಂಸ್ಥೆ ಅಧ್ಯಕ್ಷ ಎಂ.ಬಿ.ಪಾಟೀಲ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 2 ಮೇ 2021, 13:59 IST
Last Updated 2 ಮೇ 2021, 13:59 IST
ಎಂ.ಬಿ.ಪಾಟೀಲ
ಎಂ.ಬಿ.ಪಾಟೀಲ   

ವಿಜಯಪುರ: ಕೋವಿಡ್‌ ರೋಗಿಗಳ ಚಿಕಿತ್ಸೆಗಾಗಿ ನಗರದ ಬಿಎಲ್‍ಡಿಇ ಆಸ್ಪತ್ರೆಯಲ್ಲಿ ಶೀಘ್ರದಲ್ಲೇ 200 ಆಕ್ಸಿಜನ್ ಬೆಡ್‍ಗಳನ್ನು ಆರಂಭಿಸಲಾಗುವುದು ಎಂದು ಸಂಸ್ಥೆ ಅಧ್ಯಕ್ಷರೂ ಆದ ಶಾಸಕ ಎಂ.ಬಿ.ಪಾಟೀಲ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಎಲ್‍ಡಿಇ ಆಸ್ಪತ್ರೆ ಪಕ್ಕದಲ್ಲಿ ಟ್ರಾಮಾ ಸೆಂಟರ್ ಕಟ್ಟಡ ಬಹುತೇಕ ಪೂರ್ಣಗೊಂಡಿದ್ದು, ಈ ಕಟ್ಟಡದಲ್ಲೇ 200 ಆಕ್ಸಿಜನ್ ಬೆಡ್‍ಗಳನ್ನು ಅಳವಡಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆ ಎಂದರು.

ಇಷ್ಟಾದರೂ ಆಸ್ಪತ್ರೆಯಲ್ಲಿ ಬೆಡ್ ಕೊರತೆ ನೀಗಿಲ್ಲ, ಮಧ್ಯರಾತ್ರಿಯೂ ನನಗೆ ಕರೆ ಮಾಡಿ ಬೆಡ್ ವ್ಯವಸ್ಥೆ ಮಾಡಲು ಕೋರುತ್ತಿದ್ದಾರೆ. ನಾವು ಶಕ್ತಿಮೀರಿ ಪ್ರಯತ್ನಿಸುತ್ತಿದ್ದೇವೆ ಎಂದರು.

ADVERTISEMENT

ಪ್ರಸ್ತುತ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಸರಿದೂಗಿಸಲಾಗಿದೆ. ಮತ್ತಷ್ಟು ಕೊರತೆ ಸರಿದೂಗಿಸುವ ದೃಷ್ಟಿಯಿಂದ ಆಸ್ಪತ್ರೆಯಲ್ಲಿಯೇ 111 ಕೆಎಲ್‍ಡಿ ಸಾಮರ್ಥ್ಯದ ಆಕ್ಸಿಜನ್ ಉತ್ಪಾದನಾ ಘಟಕ ನಿರ್ಮಾಣಕ್ಕೆ ಅನುಮತಿ ದೊರಕಿದೆ. ಈ ಕಾರ್ಯ ಸಹ ಶೀಘ್ರವೇ ಆರಂಭವಾಗಲಿದೆ ಎಂದರು.

ವಿಜಯಪುರ ನಗರದಲ್ಲಿ ಕೊರೊನಾ ಪರಿಸ್ಥಿತಿ ಮೀತಿ ಮೀರಿದೆ, ಈ ನಿಟ್ಟಿನಲ್ಲಿ ಬಿಎಲ್‍ಡಿಇ ಸಂಸ್ಥೆ ಚಿಕಿತ್ಸಾ ವೆಚ್ಚವನ್ನು ಕಡಿತಗೊಳಿಸಿ ಆರೋಗ್ಯ ಸೇವೆ ಒದಗಿಸುತ್ತಿದೆ. ಇದು ಉಪಕಾರವಲ್ಲ, ನಮ್ಮ ಕರ್ತವ್ಯ. ಈ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿಭಾಯಿಸುವ ನಿಟ್ಟಿನಲ್ಲಿ ನಮ್ಮ ವೈದ್ಯರ ತಂಡ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.

ಜನತೆ ವಿನಾಕರಣ ಮನೆಯಿಂದ ಹೊರಗೆ ಬರಬೇಡಿ, ಮಾಸ್ಕ್ ಕಡ್ಡಾಯವಾಗಿ ಧರಿಸಿ, ಸ್ಯಾನಿಟೈಜರ್ ಬಳಸಿ, ಪರಸ್ಪರ ಅಂತರ ಕಾಯ್ದುಕೊಳ್ಳಿ, ಕೋವಿಡ್‌ ಲಸಿಕೆ ಹಾಕಿಸಿಕೊಳ್ಳಿ ಎಂದು ಕೈ ಮುಗಿದು ಬೇಡಿಕೊಳ್ಳುವೆ ಎಂದು ಪಾಟೀಲ ಮನವಿ ಮಾಡಿಕೊಂಡರು.

ಬಿಎಲ್‍ಡಿಇ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಅರವಿಂದ ಪಾಟೀಲ, ಅಧೀಕ್ಷಕ ಡಾ.ಹೊನ್ನುಟಗಿ, ಪ್ರಚಾರಾಧಿಕಾರಿ ಡಾ.ಮಹಾಂತೇಶ ಬಿರಾದಾರ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

***

ಕೊರೊನಾ ಭೀಕರ ಸಂದರ್ಭ ಸೃಷ್ಟಿ ಮಾಡಿದೆ. ಆಸ್ಪತ್ರೆಗಳಲ್ಲಿ ಬೆಡ್ ಸಿಗುತ್ತಿಲ್ಲ, ಔಷಧಿ ಸಿಗುತ್ತಿಲ್ಲ, ಆಕ್ಸಿಜನ್ ಸಿಗುತ್ತಿಲ್ಲ, ಹೀಗಾಗಿ ರೋಗ ಬಂದು ತೊಂದರೆ ಅನುಭವಿಸುವುದಕ್ಕಿಂತ ರೋಗ ಬಾರದಂತೆ ತಡೆಗಟ್ಟುವುದು ಉತ್ತಮ.
--ಎಂ.ಬಿ.ಪಾಟೀಲ,ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.