ತಾಳಿಕೋಟೆ: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಪಟ್ಟಣದಿಂದ ವಿಜಯಪುರಕ್ಕೆ ತೆರಳುವ ರಾಜ್ಯ ಹೆದ್ದಾರಿಯಲ್ಲಿರುವ ಡೋಣಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆಯು ಪ್ರವಾಹ ಬಂದು ಗುರುವಾರ ಜಲಾವೃತವಾಯಿತು.
ಪಟ್ಟಣದಿಂದ ಬಸವನ ಬಾಗೇವಾಡಿ, ವಿಜಯಪುರದತ್ತ ಹೋಗುವ ರಾಜ್ಯ ಹೆದ್ದಾರಿ ಸಂಚಾರ ಸ್ಥಗಿತಗೊಂಡಿತು. ಡೋಣಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಮುಖ್ಯಸೇತುವೆ ಶಿಥಿಲಗೊಂಡ ಹಿನ್ನೆಲೆಯಲ್ಲಿ ಮರುನಿರ್ಮಾಣಕ್ಕೆ ಪೂರ್ಣವಾಗಿ ತೆಗೆದುಹಾಕಲಾಗಿದೆ. ಅದಕ್ಕೆ ಸಮಾಂತರವಾಗಿ ಬ್ರಿಟಿಷ್‌ರ ಕಾಲದಲ್ಲಿ ನಿರ್ಮಿಸಿದ ಸೇತುವೆ ಮೇಲೆ ಸಂಚಾರ ನಡೆದಿತ್ತು. ಈಗ ಪ್ರವಾಹದಿಂದ ಸೇತುವೆಯೂ ಜಲಾವೃತವಾಗಿ ಸಂಚಾರ ಬಂದ್ ಆಗಿದೆ .
ತಾಳಿಕೋಟೆಯಿಂದ ಹಡಗಿನಾಳ ಮಾರ್ಗದಲ್ಲಿ ಇದೇ ಡೋಣಿ ನದಿಗೆ ನಿರ್ಮಿಸಿರುವ ಮೇಲ್ಸೇತುವೆ ಬಳಸಿ ಮೂಕಿಹಾಳ, ಮಿಣಜಗಿ ಮಾರ್ಗದಲ್ಲಿ 15 ಕಿ.ಮೀ ಸುತ್ತು ಹಾಕಿಕೊಂಡು ವಿಜಯಪುರದತ್ತ ವಾಹನಗಳು ಸಂಚರಿಸಿದವು. ಇದರಿಂದಾಗಿ ಪಟ್ಟಣದ ಹಡಗಿನಾಳ ರಸ್ತೆಯಲ್ಲಿ ವಾಹನಗಳ ದಟ್ಟನೆ ತುಂಬಿತ್ತು. ಕಳೆದ ಮೂರು ವರ್ಷಗಳಿಂದ ಮಳೆಗಾಲದಲ್ಲಿ ಇದೇ ಬವಣೆಯನ್ನು ಜನತೆ ಎದುರಿಸುತ್ತಿದ್ದಾರೆ. ಶಾಸಕ ಸಿ.ಎಸ್.ನಾಡಗೌಡರು ನೂತನ ಸೇತುವೆ ನಿರ್ಮಾಣಕ್ಕೆ ₹30 ಕೋಟಿ ಅನುದಾನ ಮಂಜೂರಿಸಿದ್ದು, ಹಳೆಯ ಸೇತುವೆ ಸಂಪೂರ್ಣವಾಗಿ ತೆಗೆದುಹಾಕಲಾಗಿದ್ದು ಮರುನಿರ್ಮಾಣ ಕಾರ್ಯ ನಡೆದಿದೆ.
ಡೋಣಿ ನದಿ ಜಲಾನಯನದಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಡೋಣಿ ಎಡಬಲಗಳ ಜಮೀನುಗಳು ಜಲಾವೃತವಾಗಿವೆ.
ಡೋಣಿ ನದಿಯ ಜಲಾನಯನದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತಹಶೀಲ್ದಾರ್ ವಿನಯಾ ಹೂಗಾರ ಅವರ ಆದೇಶದಂತೆ ಬುಧವಾರ ಡೋಣಿ ನದಿಯ ಬಳಿ ಪೊಲೀಸ್ ಕಾವಲನ್ನು ಇರಿಸಲಾಗಿತ್ತು. ಗುರುವಾರ ಮಧ್ಯಾಹ್ನ 12 ಗಂಟೆಗೆ ಸೇತುವೆ ಜಲಾವೃತವಾಗುತ್ತಿದ್ದಂತೆ ಡೋಣಿ ನದಿ ಸೇತುವೆ ಮೇಲಿನ ಸಂಚಾರ ಸ್ಥಗಿತಗೊಳಿಸಿ ಪೊಲೀಸ್ ಇಲಾಖೆ ಬ್ಯಾರಿಕೇಡ್ ಹಾಕಿ ಅಪಾಯಕ್ಕೆ ಅವಕಾಶ ಕೊಡದಂತೆ ಮುನ್ನೆಚ್ಚರಿಕೆ ವಹಿಸಿದೆ ಎಂದು ಪಿಎಸೈ (ಅಪರಾಧವಿಭಾಗ) ಆರ್.ಎಸ್.ಭಂಗಿ ತಿಳಿಸಿದರು.
ಪಟ್ಟಣದಲ್ಲಿ ಮಳೆ: ಶ್ರಾವಣ ಶುಕ್ರವಾರದ ಪೂಜೆ ನಿಮಿತ್ತವಾಗಿ ಪೂಜಾ ಸಾಮಗ್ರಿಗಳ ಖರೀದಿಗೆ ಬಂದಿದ್ದ ಗ್ರಾಹಕರಿಗೆ ಗುರುವಾರ ಸಂಜೆ ಅರ್ಧ ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಯಿಂದ ಅಡಚಣೆಯಾಯಿತು. ಬೀದಿಬದಿಯ ವ್ಯಾಪಾರಿಗಳು ತರಕಾರಿ, ಪೂಜಾ ಸಾಮಗ್ರಿಗಳು ಮಳೆ ನೀರ ಪಾಲಾದವು. ಆದರೂ ಸಂಜೆಗೆ ಜಿಟಿಜಿಟಿ ಮಳೆಯಲ್ಲಿಯೇ ಜನತೆ ಸಾಮಗ್ರಿಗಳನ್ನು ಖರೀದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.