ADVERTISEMENT

'ಗುಮ್ಮಟನಗರಿ'ಯಲ್ಲಿ ಬಕ್ರೀದ್ ಸಂಭ್ರಮ

ಮಸೀದಿ, ದರ್ಗಾಗಳಲ್ಲಿ ಪ್ರಾರ್ಥನೆ; ಈದ್ಗಾ ಮೈದಾನದಲ್ಲಿ ನಿರ್ಬಂಧ

​ಪ್ರಜಾವಾಣಿ ವಾರ್ತೆ
Published 21 ಜುಲೈ 2021, 11:48 IST
Last Updated 21 ಜುಲೈ 2021, 11:48 IST
ವಿಜಯಪುರ ನಗರ ಖಡ್ಡೆ ಮಸೀದಿಯಲ್ಲಿ ಬುಧವಾರ ಮುಸ್ಲಿಂ ಬಾಂಧವರು ಬಕ್ರೀದ್‌ ಅಂಗವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು –ಪ್ರಜಾವಾಣಿ ಚಿತ್ರ
ವಿಜಯಪುರ ನಗರ ಖಡ್ಡೆ ಮಸೀದಿಯಲ್ಲಿ ಬುಧವಾರ ಮುಸ್ಲಿಂ ಬಾಂಧವರು ಬಕ್ರೀದ್‌ ಅಂಗವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು –ಪ್ರಜಾವಾಣಿ ಚಿತ್ರ   

ವಿಜಯಪುರ: ತ್ಯಾಗ, ಸಹೋದರತ್ವ ಸಾರುವ ಬಕ್ರೀದ್ ಹಬ್ಬವನ್ನು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಬುಧವಾರ ಮುಸ್ಲಿಂ ಬಾಂಧವರು ಸಡಗರ, ಸಂಭ್ರಮದಿಂದ ಆಚರಿಸಿದರು.

ಹೊಸ ಬಟ್ಟೆ ತೊಟ್ಟ ಮುಸ್ಲಿಮರು ಬೆಳಿಗ್ಗೆಯೇ ಮಸೀದಿ, ದರ್ಗಾಗಳಿಗೆ ತೆರಳಿ ಬಕ್ರೀದ್ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ನಗರದ ಪ್ರಸಿದ್ಧ ಜಾಮೀಯಾ ಮಸೀದಿ, ಧಾತ್ರಿ ಮಸೀದಿ, ಅಕ್ಸಾ ಮಸೀದಿ, ಆಲಂಗಿರಿ ಮಸೀದಿ ಸೇರಿದಂತೆ 200 ಮಸೀದಿಗಳಲ್ಲಿಕೋವಿಡ್ ನಿರ್ಬಂಧದ ಹಿನ್ನೆಲೆಯಲ್ಲಿ ಹಂತಹಂತವಾಗಿ ಪ್ರಾರ್ಥನೆ ಸಲ್ಲಿಸಿದರು. ಶೇ 50 ಜನರಿಗೆ ಮಾತ್ರ ಮಸೀದಿ, ದರ್ಗಾಗಳ ಒಳಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು.

ADVERTISEMENT

ಹಿರಿಯರು, ಮಕ್ಕಳು ಮಸೀದಿಗಳಿಗೆ ಬರಲಿಲ್ಲ. ಬದಲಿಗೆ ಮನೆಯಲ್ಲೇ ಪ್ರಾರ್ಥನೆ ಸಲ್ಲಿಸಿದರು. ಕೊರೊನಾ ಸೋಂಕಿನ ಸಂಕಷ್ಟ ನಿವಾರಣೆಗಾಗಿ ದೇವರಲ್ಲಿ ಮೊರೆಯಿಟ್ಟರು. ಮಸೀದಿಯೊಳಗೆ ಮುಸ್ಲಿಮರು ದೂರದಿಂದಲೇ ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಮಹಿಳೆಯರು ಮನೆಗಳಲ್ಲೇ ಪ್ರಾರ್ಥನೆ ಮಾಡಿ ಅಲ್ಲಾಹುವನ್ನು ಸ್ಮರಿಸಿದರು.

ಕೋವಿಡ್ ಹಿನ್ನೆಲೆಯಲ್ಲಿ ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ನಿರ್ಬಂಧ ವಿಧಿಸಲಾಗಿತ್ತು.
ಈದ್ಗಾ ಮೈದಾನ, ಮಸೀದಿ, ದರ್ಗಾಗಳ ಬಳಿ ಭದ್ರತೆಗೆ ಪೊಲೀಸರನ್ನು ನಿಯೋಜಿಸಲಾಗಿತ್ತು.ಕೋವಿಡ್ ನಿರ್ಬಂಧ ಇರುವುದರಿಂದ ಹೆಚ್ಚು ಜನ ಗುಂಪುಗೂಡದಂತೆ ಕ್ರಮ ವಹಿಸಲಾಗಿತ್ತು.

ಬಕ್ರೀದ್‌ ಸಂಪ್ರದಾಯದಂತೆ ಕುರಿ, ಆಡು, ಹೋತಗಳನ್ನು ಬಲಿ ನೀಡಿದರು. ಮನೆಗಳಲ್ಲಿ ಮಾಂಸಾಹಾರ, ಸಿಹಿ ಪದಾರ್ಥಗಳನ್ನು ತಯಾರಿ ಮಧ್ಯಾಹ್ನ ಕುಟುಂಬ, ಬಂಧು ಬಳಗದವರೊಟ್ಟಿಗೆ ಸವಿದರು. ಬಡವರಿಗೆ ಮಾಂಸಾಹಾರವನ್ನು ದಾನ ಮಾಡಿದರು.

ಮುಸ್ಲಿಮರುಖಬರ್‌ ಸ್ಥಾನಗಳಿಗೆ ತೆರಳಿ ತಮ್ಮ ಕುಟುಂಬದ ಹಿರಿಯರ ಸಮಾಧಿಗಳಿಗೆ ನಮಿಸಿದರು. ಮಧ್ಯಾಹ್ನದಿಂದ ಆರಂಭವಾದ ತುಂತುರು ಮಳೆ ಬಕ್ರೀದ್‌ ಸಂಭ್ರಮಕ್ಕೆ ಸಾತ್‌ ನೀಡಿತು.

ಸಮರ್ಪಣೆ ಪ್ರತೀಕ ಬಕ್ರೀದ್‌:

ಪ್ರವಾದಿ ಇಬ್ರಾಹಿಂ ಅವರ ಬದುಕು ಅತೀ ಹೆಚ್ಚು ಸತ್ವ ಪರೀಕ್ಷೆಗಳಿಂದ ಕೂಡಿತ್ತು ಎಂದು ಮಾನವ ಹಕ್ಕುಗಳ ಕಲ್ಯಾಣ ಮಂಡಳಿಯ ರಾಜ್ಯ ಘಟಕದ ಅಧ್ಯಕ್ಷ ಹಾಸಿಂಪೀರ ವಾಲೀಕಾರ ಹೇಳಿದರು.

ಮಸೀದೆಯಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ದೇವನಿಷ್ಠರಾದ ಪ್ರವಾದಿ ಇಬ್ರಾಹಿಂ ಅವರು ಅನೇಕ ಸತ್ವಪರೀಕ್ಷೆಗಳನ್ನು ಗೆಲ್ಲುವ ಮೂಲಕ ದೇವರಿಗೆ ಹತ್ತಿರವಾಗುತ್ತಾರೆ ಎಂದು ಹೇಳಿದರು.

ಈ ತಿಂಗಳಿನಲ್ಲಿ ಪವಿತ್ರ ಹಜ್ ಯಾತ್ರೆ ಕೈಗೊಳ್ಳುವ ಮೂಲಕ ಜಗತ್ತಿಗೆ ಸಹೋದರತೆ ಭಾವ ಮೂಡಿಸುವ ಬಹುದೊಡ್ಡ ಪಾಠ ಮುಸ್ಲಿಂ ಧರ್ಮದಲ್ಲಿ ಆಚರಣೆಯಲ್ಲಿದೆ ಎಂದರು.

***

ಪ್ರವಾದಿ ಇಬ್ರಾಹಿಂ ಅವರ ತ್ಯಾಗ, ಬಲಿದಾನ, ಸಮರ್ಪಣೆಯ ಬದುಕಿನ ಇತಿಹಾಸದ ಸ್ಮರಣೆಯೇ ಬಕ್ರೀದ್‌ ಹಬ್ಬವಾಗಿದೆ
ಹಾಸಿಂಪೀರ ವಾಲೀಕಾರ,ರಾಜ್ಯ ಘಟಕದ ಅಧ್ಯಕ್ಷ
ಮಾನವ ಹಕ್ಕುಗಳ ಕಲ್ಯಾಣ ಮಂಡಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.