
ವಿಜಯಪುರ: ‘ಕೆಂಪು ಮೆಣಸಿನಕಾಯಿ ಬೆಳೆಗೆ ಸರ್ಕಾರ ಬೆಂಬಲ ಬೆಲೆ ನೀಡಿ ಖರೀದಿಸಿ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕು’ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿ ಮನವಿ ಸಲ್ಲಿಸಿದರು.
ಜಿಲ್ಲಾ ಘಟಕದ ಅಧ್ಯಕ್ಷ ಸಂಗಮೇಶ ಸಗರ ಮಾತನಾಡಿ, ‘ಜಿಲ್ಲೆಯಲ್ಲಿ ಪ್ರತಿವರ್ಷ ಮುಂಗಾರಿನಲ್ಲಿ 13,000 ಹೆಕ್ಟೇರ್ ಹಾಗೂ ಹಿಂಗಾರಿನಲ್ಲಿ ಸುಮಾರು 3,500 ಹೆಕ್ಟೇರ್ ಕೆಂಪು ಮೆಣಸಿನಕಾಯಿ ಬೆಳೆಯಲಾಗುತ್ತದೆ. ಸಾಕಷ್ಟು ಹಣ ಹಾಗೂ ಸಮಯ ನೀಡಿ, ಕೂಸಿನಂತೆ ಜೋಪಾನಮಾಡಿ ಬೆಳೆದ ಬೆಳೆಗೆ ಸರಿಯಾದ ಬೆಂಬಲ ಬೆಲೆ ಇಲ್ಲದೆ ರೈತರು ಸಂಕಷ್ಟ ಅನುಭವಿಸುವಂತಾಗಿದೆ’ ಎಂದರು.
‘ಕಳೆದ ಬಾರಿ ಕ್ವಿಂಟಾಲ್ ಮೆಣಸಿನಕಾಯಿಗೆ ₹30 ಸಾವಿರ ವರೆಗೆ ಖರೀದಿಸಲಾಗಿತ್ತು, ಆದರೆ ಈಗ ಬೆಲೆ ಪಾತಾಳಕ್ಕೆ ಕುಸಿದಿದ್ದು, ಸಧ್ಯ ಕ್ವಿಂಟಾಲಗೆ ₹9 ಸಾವಿರಕ್ಕೆ ಕೇಳಲಾಗುತ್ತಿದೆ. ದಲ್ಲಾಳಿಗಳ ಕೈವಾಡದಿಂದಾಗಿ ರೈತರು ನಷ್ಟ ಅನುಭವಿಸುವಂತಾಗಿದೆ. ರೈತರು ಖರ್ಚು ಮಾಡಿರುವಷ್ಟು ಸಹ ಅವರ ಕೈಗೆ ಸಿಗುತ್ತಿಲ್ಲ, ಆದ್ದರಿಂದ ಕೂಡಲೇ ಸರ್ಕಾರ ಬೆಂಬಲ ಬೆಲೆ ನೀಡಿ ಖರೀದಿಸಬೇಕು’ ಎಂದು ಆಗ್ರಹಿಸಿದರು.
‘ಈ ವರ್ಷ ಸರಿಯಾದ ಮಳೆ ಆಗದೆ ಬರ ಆವರಿಸಿದ್ದರಿಂದ ಬೆಳೆಗಳೂ ಬಂದಿಲ್ಲ. ರೈತರಿಗೆ ಪರಿಹಾರ ಹಾಗೂ ಫಸಲ ಭೀಮಾ ಯೋಜನೆಯಡಿ ವಿಮೆ ತುಂಬಿರುವ ರೈತರಿಗೆ ವಿಮಾ ಪರಿಹಾರ ನೀಡಬೇಕು. ವಿಮೆಯಲ್ಲಿ ಅವ್ಯವಹಾರ ನಡೆಯುತ್ತಿರುವ ಕುರಿತು ಜಿಲ್ಲಾಧಿಕಾರಿಗಳು ಸೂಕ್ತ ತನಿಖೆ ನಡೆಸಿ ನಷ್ಟಗೊಂಡ ರೈತರಿಗೆ ಪರಿಹಾರ ನೀಡುವಂತೆ ಆದೇಶಿಸಬೇಕು’ ಎಂದರು.
ಜಿಲ್ಲಾ ಸಂಚಾಲಕ ರಾಮನಗೌಡ ಪಾಟೀಲ (ಬ್ಯಾಲ್ಯಾಳ), ಸಹಸಂಚಾಲಕ ಮಹಾಂತೇಶ ಮಮದಾಪುರ, ತಾಲ್ಲೂಕು ಉಪಾಧ್ಯಕ್ಷ ಮಹಾದೇವಪ್ಪ ತೇಲಿ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಮಲ್ಲಿಕರ್ಜುನ ಗೋಡೆಕಾರ, ವಿಜಯಪುರ ನಗರ ಘಟಕದ ಅಧ್ಯಕ್ಷ ಸಂಗಪ್ಪ ಚಲವಾದಿ, ಮುಖಂಡ ತಪ್ಪಣ್ಣ ನಾಟಿಕಾರ, ಪ್ರಭು ಕಾರಜೋಳ, ಮಹಾಂತೇಶ ಮಹಾಂತಮಠ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.