ADVERTISEMENT

ಮತದಾನ ಹಕ್ಕು ಕಸಿಯುವ ಷಡ್ಯಂತ್ರ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2020, 11:26 IST
Last Updated 25 ಫೆಬ್ರುವರಿ 2020, 11:26 IST
ವಿಜಯಪುರದ ಜುಮನಾಳ ಕ್ರಾಸ್ ಬಳಿ ಸೋಮವಾರ ಆಯೋಜಿಸಿದ್ದ ‘ಸಂವಿಧಾನ ಉಳಿಸಿ’ ಜನಾಂದೋಲನದಲ್ಲಿ ಪಾಲ್ಗೊಂಡಿದ್ದ ಜನಸ್ತೋಮ
ವಿಜಯಪುರದ ಜುಮನಾಳ ಕ್ರಾಸ್ ಬಳಿ ಸೋಮವಾರ ಆಯೋಜಿಸಿದ್ದ ‘ಸಂವಿಧಾನ ಉಳಿಸಿ’ ಜನಾಂದೋಲನದಲ್ಲಿ ಪಾಲ್ಗೊಂಡಿದ್ದ ಜನಸ್ತೋಮ   

ವಿಜಯಪುರ: ‘ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ), ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಸಿಆರ್) ಹಾಗೂ ರಾಷ್ಟ್ರೀಯ ಜನಸಂಖ್ಯೆ ನೋಂದಣಿ (ಎನ್‌ಪಿಆರ್) ಮೂಲಕ ಕೋಟ್ಯಂತರ ಜನರನ್ನು ಮತದಾನ ಹಕ್ಕಿನಿಂದ ವಂಚಿತರನ್ನಾಗಿಸುವ ಷಡ್ಯಂತ್ರ ನಡೆದಿದೆ’ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರು.

ನಗರದ ಕೊಲ್ಹಾರ ರಸ್ತೆಯ ಜುಮನಾಳ ಕ್ರಾಸ್ ಬಳಿ ವಿಜಯಪುರ ಜಂಟಿ ಕ್ರಿಯಾ ಸಮಿತಿ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ‘ಸಂವಿಧಾನ ಉಳಿಸಿ’ ಜನಾಂದೋಲನದಲ್ಲಿ ಅವರು ಮಾತನಾಡಿದರು.

‘ತಾಂಡಾ, ಸಣ್ಣಪುಟ್ಟ ಸಮುದಾಯಗಳ ಜನತೆ ಅಲ್ಲಲ್ಲಿ ಅಲೆದಾಡಿ ತಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ. ಈ ಬಡಜನತೆಗೂ ಸರ್ಟಿಫಿಕೇಟ್ ಕೇಳಿದರೆ ಆ ಸರ್ಟಿಫಿಕೇಟ್ ಎಲ್ಲಿಂದ ತರಬೇಕು?. ಇದು ಕೇವಲ ಮುಸ್ಲಿಂರ ಸಮಸ್ಯೆ ಅಲ್ಲ, ಕೋಟ್ಯಂತರ ಅನಕ್ಷರಸ್ಥರ ಸಮಸ್ಯೆಯಾಗಿದೆ. ನಮ್ಮ ತಂದೆ ಜನ್ಮ ತಾಳಿರುವ ಸರ್ಟಿಫಿಕೇಟ್ ಎಲ್ಲಿಂದ ತರಬೇಕು’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

‘ಜಿಡಿಪಿ ಪಾತಾಳಕ್ಕೆ ಕುಸಿದಿದೆ, ಆರ್ಥಿಕತೆ ತೀವ್ರ ಕುಸಿತ ಕಂಡಿದೆ. ಆದರೆ, ಮೋದಿ ಈ ಬಗ್ಗೆ ಮಾತನಾಡುತ್ತಿಲ್ಲ. ಸಾಮಾನ್ಯ ಜನತೆಯನ್ನು ದಮನ ಮಾಡುವ ಪ್ರಯತ್ನ ಮಾಡಬೇಡಿ, ದಮನ ಮಾಡಲು ಪ್ರಯತ್ನಿಸಿದರೆ ನಾವು ಮತ್ತೆ ಚಿಗುರುತ್ತೇವೆ’ ಎಂದರು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ‘ಭಾರತೀಯ ಸಂವಿಧಾನ ರದ್ದು ಮಾಡಲು ಹೋದರೆ ರಕ್ತ ಕ್ರಾಂತಿಯಾಗಲಿದೆ. ಈ ಕಾರಣಕ್ಕಾಗಿಯೇ ಬಿಜೆಪಿಯವರು ಪರೋಕ್ಷವಾಗಿ ಸಂವಿಧಾನವನ್ನು ದುರ್ಬಲಗೊಳಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಎದುರಾಗಿದೆ. ಭಾರತೀಯ ಸಂವಿಧಾನವನ್ನೇ ಬುಡಮೇಲು ಮಾಡುವ ಕಾರ್ಯದಲ್ಲಿ ಬಿಜೆಪಿ ನಾಯಕರು ತೊಡಗಿದ್ದಾರೆ’ ಎಂದು ಆರೋಪಿಸಿದರು.

ಶಾಸಕರಾದ ಸಿ.ಎಂ.ಇಬ್ರಾಹಿಂ, ಯು.ಟಿ.ಖಾದರ್, ಯಶವಂತರಾಯಗೌಡ ಪಾಟೀಲ, ಶಿವಾನಂದ ಪಾಟೀಲ, ಪ್ರಕಾಶ ರಾಠೋಡ, ಮಾಜಿ ಶಾಸಕರಾದ ವಿಜಯಾನಂದ ಕಾಶಪ್ಪನವರ, ಎಸ್.ಜಿ.ನಂಜಯ್ಯನಮಠ, ಅಹಲೆ ಸುನ್ನತ್ ಜಮಾತ್ ರಾಜ್ಯ ಘಟಕದ ಅಧ್ಯಕ್ಷ ಸೈಯದ್‌ ತನ್ವೀರಪೀರಾ ಹಾಶ್ಮಿ, ಮುಖಂಡರಾದ ಅಬ್ದುಲ್‌ ಹಮೀದ್‌ ಮುಶ್ರೀಫ್, ಮೊಹ್ಮದ್‌ ರಫೀಕ್‌ ಟಪಾಲ್, ಅಬ್ದುಲ್‌ ರಜಾಕ್‌ ಹೊರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.