
ಶರಣು ಸಬರದ
ವಿಜಯಪುರ: ನಗರ ಸೇರಿದಂತೆ ಜಿಲ್ಲೆಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಡೋನೇಷನ್ ಹಾವಳಿ ಅಧಿಕವಾಗಿದ್ದು, ಇದರಿಂದ ಮಧ್ಯಮ ವರ್ಗದ ವಿದ್ಯಾರ್ಥಿ, ಪೋಷಕರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ತಕ್ಷಣ ಜಿಲ್ಲೆಯ ಅಧಿಕಾರಿಗಳು, ಜನಪ್ರತಿನಿಧಿಗಳು ಕಡಿವಾಣ ಹಾಕಬೇಕು’ ಎಂದು ಜಿಲ್ಲಾ ಯುವ ಪರಿಷತ್ ಅಧ್ಯಕ್ಷ ಶರಣು ಸಬರದ ಆಗ್ರಹಿಸಿದರು.
ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಕ್ಕಳ ಜೀವನದ ಜೊತೆಗೆ ಖಾಸಗಿ ಶಾಲೆಗಳು ಚೆಲ್ಲಾಟವಾಡುತ್ತಿದ್ದಾರೆ. ಮಕ್ಕಳು ಖಾಸಗಿ ಶಾಲೆಗಳಿಗೆ ಪ್ರವೇಶ ಪಡೆಯುವುದೇ ಸಾಹಸವಾಗಿದೆ ಎಂದು ಹೇಳಿದರು.
ಬಹುತೇಕ ಶಾಲೆ, ಕಾಲೇಜುಗಳು ಪ್ರಭಾವಿ ರಾಜಕಾರಣಿಗಳ ಒಡತನದಲ್ಲಿವೆ. ಹೀಗಾಗಿ ಅಧಿಕಾರಿಗಳು ಕಣ್ಣು ಮುಚ್ಚಿಕುಳಿತಿದ್ದಾರೆ. ಡೊನೇಷನ್ ಹಾವಳಿ ವಿರುದ್ಧ ಕ್ರಮಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು.
ಖಾಸಗಿ ಶಾಲೆಗಳಿಗೆ ಪೋಷಕರು ಅಧಿಕ ಶುಲ್ಕ, ಡೊನೇಷನ್ ಕಟ್ಟಿದರೂ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ. ಖಾಸಗಿ ಶಾಲೆಗಳಲ್ಲಿ ಶಿಕ್ಷಣ ಮೌಲ್ಯ ಕುಸಿದಿದೆ. ಜಿಲ್ಲೆಯಲ್ಲಿರುವ ಸರ್ಕಾರಿ ಶಾಲೆ ಉನ್ನತಿಕರಣ ಮಾಡಿದರೆ, ಪೋಷಕರು, ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ಶಾಲೆಗಳಿಗೆ ಬರುತ್ತಾರೆ ಎಂದು ಹೇಳಿದರು.
ತಕ್ಷಣವೇ ಜಿಲ್ಲಾಡಳಿತ ಹಾಗೂ ಶಿಕ್ಷಣ ಇಲಾಖೆ ಇತ್ತ ಕಡೆ ಗಮನ ಹರಿಸಬೇಕು. ಈ ಖಾಸಗಿ ಶಾಲೆಗಳಿಗೆ ಡೊನೇಷನ್ ಹಾಗೂ ಹೆಚ್ಚಿನ ಶುಲ್ಕ ವಿಧಿಸುವುದನ್ನು ತಪ್ಪಿಸಬೇಕು ಹಾಗೂ ಶುಲ್ಕ ಪಟ್ಟಿಯನ್ನು ಶಾಲೆಯ ಕಚೇರಿಗಳಲ್ಲಿ ಅಳವಡಿಸಬೇಕು. ಇಲ್ಲವಾದರೆ ಪೋಷಕರೊಂದಿಗೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.