ಸಿಂದಗಿ: ನ್ಯಾಯಮೂರ್ತಿ ಬೃಜೇಶಕುಮಾರ ನೇತೃತ್ವದ 3ನೇ ನ್ಯಾಯಾಧೀಕರಣ ತೀರ್ಪಿನಂತೆ ಆಲಮಟ್ಟಿ ಲಾಲಬಹಾದ್ದೂರ ಶಾಸ್ತ್ರೀ ಜಲಾಶಯದ ಎತ್ತರವನ್ನು 519.60 ರಿಂದ 524.256 ಮೀಟರ್‌ಗೆ ಹೆಚ್ಚಿಸಿ ನೀರು ನಿಲ್ಲಿಸಲು ಕ್ರಮ ಕೈಗೊಳ್ಳಬೇಕು ಹಾಗೂ ಈ ದಿಸೆಯಲ್ಲಿ ಕೇಂದ್ರ ಸರ್ಕಾರ ಕೂಡಲೇ ಅಧಿಸೂಚನೆ ಹೊರಡಿಸಬೇಕು ಎಂದು ಅಖಂಡ ಕರ್ನಾಟಕ ರೈತ ಸಂಘ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಆಗ್ರಹಿಸಿದರು.
ಪಟ್ಟಣದಲ್ಲಿ ಗುರುವಾರ ಸುದ್ದಿಗಾರರ ಜೊತೆಗೆ ಮಾತನಾಡಿ, 2010ರಲ್ಲಿ ನೀಡಿದ ತೀರ್ಪನ್ನು 2013ರಲ್ಲಿ ಸ್ಪಷ್ಟಿಕರಣ ತೀರ್ಪು ನೀಡಿದೆ. ಇಷ್ಟು ವರ್ಷಗಳಾದರೂ ಜಲಾಶಯದ ಎತ್ತರ ಹೆಚ್ಚಿಸಲು ಸರ್ಕಾರ ಕ್ರಮ ಜರುಗಿಸಿಲ್ಲ. ಸಾಂಗ್ಲಿ, ಮಿರಜ, ಕೊಲ್ಹಾಪುರಗಳಲ್ಲಿ ಪ್ರವಾಹ ಉಂಟಾಗುತ್ತದೆ ಎಂಬ ಮಹಾರಾಷ್ಟ್ರದ ನೆಪವನ್ನು ಮುಂದಿಟ್ಟುಕೊಂಡು ಕಾಲಹರಣ ಮಾಡಲಾಗುತ್ತಿದೆ. ಹಿನ್ನಿರಿನಿಂದ ಪ್ರವಾಹ ಬರುವುದಿಲ್ಲ ಎಂದು 2019ರಲ್ಲಿ ನಂದಕುಮಾರ ವರದಿ ನೀಡಿದೆ. ರಾಜ್ಯ ಸರ್ಕಾರ ಕೇಂದ್ರ ಸರ್ಕಾರದತ್ತ ಬೆರಳು ಮಾಡುತ್ತದೆ. ರಾಜಕೀಯ ಇಚ್ಛಾಶಕ್ತಿ ಕೊರತೆ ಎದ್ದು ಕಾಣುತ್ತದೆ ಎಂದು ಟೀಕಿಸಿದರು.
4-5 ವರ್ಷಗಳ ಹಿಂದೆ ಜಲಾಶಯದ ಎತ್ತರಕ್ಕೆ ತಗಲುವ ವೆಚ್ಚ 75 ಸಾವಿರ ಕೋಟಿ ರೂಪಾಯಿ ಅಂದಾಜು ಮಾಡಲಾಗಿತ್ತು. ಈಗ ಅದು 1ಲಕ್ಷ ಕೋಟಿ ರೂಪಾಯಿ ದಾಟಿದೆ. ಹೀಗಾಗಿ ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಿ ಕೇಂದ್ರ ಸರ್ಕಾರ ತನ್ನ ಸುಪರ್ದಿಗೆ ತೆಗೆದುಕೊಂಡು ಯೋಜನೆ ಪೂರ್ಣಗೊಳಿಸಬೇಕು. ಹೀಗಾಗಿ ಕೂಡಲೇ ಪ್ರಧಾನಿ ನರೇಂದ್ರ ಮೋದಿ ಮಧ್ಯಸ್ಥಿಕೆ ವಹಿಸಬೇಕು ಎಂದು ಒತ್ತಾಯಿಸಿದರು.
ಜಲಾಶಯ ನಿರ್ಮಾಣಕ್ಕಾಗಿ ಅವಳಿ ಜಿಲ್ಲೆಗಳಾದ ವಿಜಯಪುರ-ಬಾಗಲಕೋಟೆಯ ರೈತರು ತಮ್ಮ ಅಲ್ಪಸ್ವಲ್ಪ ಜಮೀನುಗಳನ್ನು ತ್ಯಾಗ ಮಾಡಿದ್ದಾರೆ. ಬಂದ ಬಿಡಿಗಾಸು ಖಾಲಿಯಾಗಿ ನೆರೆಯ ರಾಜ್ಯಗಳಿಗೆ ಗುಳೆ ಹೋಗುವಂಥ ದುರಂತ ಎದುರಾಗಿದೆ. ಕಲಬುರಗಿ ಒಳಗೊಂಡಂತೆ ಆರು ಜಿಲ್ಲೆಗಳಿಗೆ ಈ ಜಲಾಶಯದ ನೀರು ಹರಿದು ಹೋಗುತ್ತದೆ. ಈ ಆರು ಜಿಲ್ಲೆಗಳ ತ್ಯಾಗ ಏನಿದೆ? ಎಂದು ಅರವಿಂದ ಪ್ರಶ್ನಿಸಿದರು.
ಎತ್ತರ ಹೆಚ್ಚಾದರೆ 80 ಟಿ.ಎಂ.ಸಿ ನೀರು ವಿಜಯಪುರ-ಬಾಗಲಕೋಟೆ ನೀರಾವರಿ ಯೋಜನೆಗಳಿಗೆ ದೊರಕಲಿದೆ. ಸಂತ್ರಸ್ಥರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಲು ಸರ್ಕಾರಗಳು ಯೋಜನೆಯನ್ನು ಅನುಷ್ಠಾನಕ್ಕೆ ತರಬೇಕು. ರೈತ ಮುಖಂಡ ಗುರುರಾಜ ಪಡಶೆಟ್ಟಿ ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.