ADVERTISEMENT

ಚಡಚಣ | ಹುಲಜಂತಿ ಮಾಳಿಂಗರಾಯನ ಜಾತ್ರೆ ಆರಂಭ

ಹಾಲುಮತ ಕಾಶಿಗೆ ಹರಿದು ಬಂದ ಭಕ್ತಸಾಗರ;

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2025, 6:32 IST
Last Updated 22 ಅಕ್ಟೋಬರ್ 2025, 6:32 IST
ಚಡಚಣ ಸಮೀಪದ ಮಹಾರಾಷ್ಟ್ರದ ಹುಲಜಂತಿ ಗ್ರಾಮದ ಮಾಳಿಂಗರಾಯ ದೇವಾಲಯದಲ್ಲಿ ಮಂಗಳವಾರ ಜಮಾಯಿಸಿದ ಭಕ್ತಸಾಗರ
ಚಡಚಣ ಸಮೀಪದ ಮಹಾರಾಷ್ಟ್ರದ ಹುಲಜಂತಿ ಗ್ರಾಮದ ಮಾಳಿಂಗರಾಯ ದೇವಾಲಯದಲ್ಲಿ ಮಂಗಳವಾರ ಜಮಾಯಿಸಿದ ಭಕ್ತಸಾಗರ   

ಚಡಚಣ: ಹಾಲುಮತ ಸಮಾಜ ಬಾಂಧವರ ಕಾಶಿ, ಕರ್ನಾಟಕ ಗಡಿ ಅ೦ಚಿನಲ್ಲಿರುವ ಮಹಾರಾಷ್ಟ್ರದ ಹುಲಜಂತಿ ಮಾಳಿ೦ಗರಾಯನ ದೇವಾಲಯಕ್ಕೆ ಸುತ್ತಿದ ಮುಂಡಾಸು ನೋಡಲು ಮಂಗಳವಾರ ಭಕ್ತಸಾಗರವೇ ಹರಿದು ಬಂದಿತ್ತು.

ಮಂಗಳವಾರ ಮಧ್ಯಾಹ್ನ ಜತ್ತ ಸರ್ಕಾರದ ಅಗಲ (ನೈವೇದ್ಯ) ದೊಂದಿಗೆ ಮಾಳಿಂಗರಾಯನ ಜಾತ್ರೆಗೆ ವಿದ್ಯುಕ್ತ ಚಾಲನೆ ದೊರೆಯಿತು.

ಗ್ರಾಮದಲ್ಲಿ 14ನೇ ಶತಮಾನದಲ್ಲಿ ಬಾಳಿ ಬದುಕಿ ಹಲವು ಪವಾಡ ಮಾಡಿ ಹುಲಜಂತಿ ಗ್ರಾಮದಲ್ಲಿ ಐಕ್ಯಗೊಂಡ ಮಾಳಿಂಗರಾಯ ಜನಮನದಲ್ಲಿ ಶಾಶ್ವತವಾಗಿ ನೆಲೆಸಿದ್ದಾನೆ. ಮಾಳಿಂಗರಾಯನ ದೇವಾಲಯದ ಶಿಖರಕ್ಕೆ ಸಾಕ್ಷಾತ್ ಶಿವನೇ ಪ್ರತಿ ವರ್ಷ ದೀಪಾವಳಿ ಅಮಾವಾಸ್ಯೆ ರಾತ್ರಿ ಮುಂಡಾಸು(ಪೇಠ) ಸುತ್ತುತ್ತಾನೆ ಎಂಬುದು ಭಕ್ತರ ನಂಬಿಕೆ. ಸೋಮವಾರ ಅಮಾವಾಸ್ಯೆ ರಾತ್ರಿ ಸುತ್ತಿದ ಮುಂಡಾಸನ್ನು ನೋಡಲು ಮಂಗಳವಾರ ಕರ್ನಾಟಕ, ಮಹಾರಾಷ್ಟ್ರ, ಆ೦ಧ್ರಪ್ರದೇಶ, ತಮಿಳುನಾಡು ಸೇರಿದಂತೆ ಉತ್ತರ ಕರ್ನಾಟಕದ ಸುಮಾರು 3 ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸಿ ಮುಂಡಾಸ ನೋಡಿ ಪಾವನರಾದರು.

ADVERTISEMENT

ಶಿಖರಕ್ಕೆ ಸುತ್ತಿದ ಮು೦ಡಾಸ ಯಾವ ಕಡೆ ವಾಲಿದೆ, ಯಾವ ಕಡೆ ಬಿಗಿಯಾಗಿದೆ ಎಂಬುದರ ಆಧಾರದ ಮೇಲೆ ಮಳೆ, ಬೆಳೆ, ಸುಖ, ಶಾಂತಿ, ಸಮೃದ್ಧಿ ಹಾಗೂ ರಾಜಕೀಯವನ್ನು ವಿಶ್ಲೇಷಿಸುವುದು ಭಕ್ತರ ಭಾವಕ್ಕೆ ನಿಲುಕಿದ್ದು.

ಮಂಗಳವಾರ ಸಂಜೆ ಮಾಳಿಂಗರಾಯನ ದೇವಾಲಯದ ಮುಂಭಾಗದಲ್ಲಿರುವ ವಿಶಾಲವಾದ ಹಳ್ಳದ ಮೈದಾನದಲ್ಲಿ ಸುಮಾರು 30ಕ್ಕೂ ಅಧಿಕ ದೇವರುಗಳ ಪಲ್ಲಕ್ಕಿಗಳ ಭೇಟಿ ಕಾರ್ಯಕ್ರಮ ವೈಭವದಿಂದ ಜರುಗಿತು. ಭೇಟಿ ಸಂದರ್ಭದಲ್ಲಿ ಭಕ್ತರು ತೂರಿದ ಭಂಡಾರ, ಉಣ್ಣೆ, ಉತ್ತತ್ತಿ, ನೆಲದ ಮೇಲೆ ಹಳದಿ ಲೇಪನವನ್ನೇ ಸೃಷ್ಟಿಸಿದರೆ, ಭಕ್ತರು ಬಾನೆತ್ತರಕ್ಕೆ ತೂರಿದ ಭ೦ಡಾರ
ಬಾನಿಗೆ ಚಿತ್ತಾರ ಬಿಡಿಸಿದಂತೆ ಕಾಣುತ್ತಿತ್ತು.

ಸಂಪ್ರದಾಯದಂತೆ ಪಲಕ್ಕಿ ಹಾಗೂ ದೇವಾಲಯದ ಶಿಖರದ ಮೇಲೆ ರಾಶಿ ರಾಶಿಗಟ್ಟಲೆ, ಭಂಡಾರ, ಉತ್ತತ್ತಿ ಉಣ್ಣೆ ತೂರಿ ಭಕ್ತರು ತಮ್ಮ ಹರಕೆ ಪೂರೈಸುತ್ತಿರುವುದು ಸಾಮಾನ್ಯವಾಗಿತ್ತು. ಸುಮಾರು ಐದು ದಿನಗಳ ವರೆಗೆ ನಡೆಯುವ ಜಾತ್ರೆಯಲ್ಲಿ ಭಂಡಾರ ಮಾರಾಟ, ನಾಟಕ ಸಂಗೀತ ಕುಣಿತ ಮನರಂಜನೆ, ಕೃಷಿ ಸಾಧನಗಳ ಮಳಿಗೆಗಳು ಬೀಡು ಬಿಟ್ಟು ಎಲ್ಲರನ್ನು ಆಕರ್ಷಿಸುತ್ತಿವೆ.

ಹುಲಜಂತಿ ಮಾಳಿಂಗರಾಯನ ಜಾತ್ರೆಗೆ ವಿವಿಧ ಜಿಲ್ಲೆಗಳಿಂದ ರಸ್ತೆ ಸಾರಿಗೆ ಬಸ್‌ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಜಾತ್ರಾ ಸಮಿತಿ ಜಾತ್ರೆಗೆ ಆಗಮಿಸುವ ಭಕ್ತರಿಗಾಗಿ ಸೂಕ್ತ, ರಕ್ಷಣೆ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ವೈದ್ಯಕೀಯ ವ್ಯವಸ್ಥೆ ಸೇರಿದಂತೆ ಎಲ್ಲ ಮೂಲಭೂತ ಸೌಲಭ್ಯ ಕಲ್ಪಿಸಿದೆ.

21ಸಿಡಿಎನ್-02‌ ಮಳಿಂಗರಾಯನ ಭೇಟಿ ಕಾರ್ಯಕ್ರಮದಲ್ಲಿಪಾಲ್ಗೊಂಡ ಪಲ್ಲಕ್ಕಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.