ADVERTISEMENT

ಕಾರಾಗೃಹಕ್ಕೆ ಶಶಿಧರ ಕೋಸಂಬೆ ಭೇಟಿ: ಕೈದಿಗಳ ಮಕ್ಕಳ ಸ್ಥಿತಿಗತಿ ವರದಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2025, 6:47 IST
Last Updated 7 ಡಿಸೆಂಬರ್ 2025, 6:47 IST
ವಿಜಯಪುರ ನಗರದ ಕೇಂದ್ರ ಕಾರಾಗೃಹಕ್ಕೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ ಕೋಸಂಬೆ ಶನಿವಾರ ಭೇಟಿ ನೀಡಿ ಅಡುಗೆಯನ್ನು ಪರಿಶೀಲಿಸಿದರು
ವಿಜಯಪುರ ನಗರದ ಕೇಂದ್ರ ಕಾರಾಗೃಹಕ್ಕೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ ಕೋಸಂಬೆ ಶನಿವಾರ ಭೇಟಿ ನೀಡಿ ಅಡುಗೆಯನ್ನು ಪರಿಶೀಲಿಸಿದರು   

ವಿಜಯಪುರ: ನಗರದ ಕೇಂದ್ರ ಕಾರಾಗೃಹಕ್ಕೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ ಕೋಸಂಬೆ ಶನಿವಾರ ಭೇಟಿ ನೀಡಿ ಊಟ ತಯಾರಿಸುವ ಕೋಣೆ ಹಾಗೂ ಗ್ರಂಥಾಲಯ ಪರಿಶೀಲನೆ ನಡೆಸಿದರು.

ಕಾರಾಗೃಹದಲ್ಲಿರುವ ವಿಚಾರಣಾ ಹಾಗೂ ವಿವಿಧ ರೀತಿಯ ಶಿಕ್ಷೆಗೊಳಗಾದ 27 ಮಹಿಳೆಯರು ಸೇರಿದಂತೆ ಒಟ್ಟು 539 ಕೈದಿಗಳ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಮುಂದಾಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ, ಸದಸ್ಯರ, ಮಕ್ಕಳ ರಕ್ಷಣಾ ಘಟಕ ಹಾಗೂ ಕಾರಾಗೃಹ ಅಧೀಕ್ಷಕರು ಸೇರಿಕೊಂಡು ಪ್ರತಿಯೊಬ್ಬ ಕೈದಿಯ 18 ವರ್ಷದ ಒಳಗಿನ ಮಕ್ಕಳ ಶಿಕ್ಷಣ, ಆರೋಗ್ಯ ಹಾಗೂ ರಕ್ಷಣೆಗೆ ಸೂಕ್ತವಾದ ರೀತಿಯಲ್ಲಿ ಕ್ರಮ ಕೈಗೊಂಡು, ವಾರದಲ್ಲಿ ವರದಿ ಸಲ್ಲಿಸುವಂತೆ ತಿಳಿಸಿದರು.

ADVERTISEMENT

ಗೋಳಗುಮ್ಮಟ ಹತ್ತಿರದ ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ನಡೆಯುತ್ತಿರುವ ಬಾಲಕಿಯರ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ, ವಸತಿ ನಿಲಯದಲ್ಲಿ ಕೊಠಡಿ, ಶೌಚಾಲಯ, ಸ್ನಾನ ಗೃಹ, ಉಗ್ರಾಣ ಕೊಠಡಿ, ಕುಡಿಯುವ ನೀರಿನ ಘಟಕ, ಅಡುಗೆ ಕೊಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬೆಳಿಗ್ಗೆಯ ಉಪಹಾರಕ್ಕೆ ಮೇನು ಚಾರ್ಟ್ ಪ್ರಕಾರ ಇಂದು ಅವಲಕ್ಕಿ ಕೊಡಬೇಕಾಗಿತ್ತು. ಆದರೆ, ಚುರಿಮುರಿ ಚೂಡಾ ಕೊಟ್ಟಿರುವುದನ್ನು ಕಂಡು ವಾರ್ಡನ್ ವಿರುದ್ಧ ಅಸಮಾಧಾನ ವ್ಯಪಡಿಸಿದರು.

ಸ್ನಾನಕ್ಕೆ ಬಿಸಿ ನೀರಿನ ವ್ಯವಸ್ಥೆ ಇಲ್ಲದಿರುವುದು ಗಮನಿಸಿದ ಅವರು ತಾಲ್ಲೂಕು ಮಟ್ಟದಲ್ಲಿ ಮೇಲುಸ್ತುವಾರಿ ಮಾಡಲು ನಿರ್ಲಕ್ಷ್ಯ ಧೋರಣೆ ತೋರಿದ ಸಹಾಯಕ ನಿರ್ದೇಶಕರಿಗೆ ನೋಟಿಸ್ ಹಾಗೂ ವಾರ್ಡನ್ ಗೆ ಶೋಕಾಸ್ ನೋಟಿಸ್ ನೀಡಲು ಸ್ಥಳದಲ್ಲಿದ್ದ ಉಪ ನಿರ್ದೇಶಕರಿಗೆ ಸೂಚನೆ ನೀಡಿದರು.

ಜಿಲ್ಲಾ ಆಸ್ಪತ್ರೆಯಲ್ಲಿನ ಅಪೌಷ್ಟಿಕ ಮಕ್ಕಳ ಪುನಃಶ್ಚೇತನ ಘಟಕಕ್ಕೆ ಜನವರಿಯಿಂದ ಇಲ್ಲಿಯವರೆಗೆ 320 ಮಕ್ಕಳು ದಾಖಲಾಗಿದ್ದಾರೆ, ತೀವ್ರ ಅಪೌಷ್ಟಿಕತೆಯಿಂದ ಬಳಲುವ ಮಕ್ಕಳು ಬರೀ 37 ಮಕ್ಕಳಿಗೆ ಮಾತ್ರ ಆರ್ ಬಿ ಎಸ್ ಕೆ ತಂಡ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯವರು ದಾಖಲು ಮಾಡಿರುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಮಾಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಸೇರಿ ತುರ್ತು ಸಭೆ ನಡೆಸುವ ಮೂಲಕ ಜಿಲ್ಲೆಯಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಪಾಳಿ ಆಧಾರದ ಮೇಲೆ ದಾಖಲು ಮಾಡಲು ಕ್ರಮ ವಹಿಸಿ, ವರದಿ ಸಲ್ಲಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಚವ್ಹಾಣ ತಿಳಿಸಿದರು.

ಜಿಲ್ಲಾ ಕೇಂದ್ರ ಕಾರಾಗೃಹದ ಅಧೀಕ್ಷಕ ಕೊಟ್ರೇಶ್ವರ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದೀಪಾಕ್ಷಿ ಜಾನಕಿ ಹಾಗೂ ಇದ್ದರು.

ಪರೀಕ್ಷೆ ನೋಂದಣಿ: ಪರಿಶೀಲನೆಗೆ ಸೂಚನೆ

ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ನೋಂದಣಿ ಮಾಡಿಕೊಳ್ಳದ ವಿದ್ಯಾರ್ಥಿಗಳ ಪರಿಶೀಲನೆ ನಡೆಸಬೇಕು. ನಿಗದಿತ ಅವಧಿಯಲ್ಲಿ ನೋಂದಣಿ ಮಾಡಿಕೊಳ್ಳುವಂತೆ ಸೂಕ್ತ ಕ್ರಮ ವಹಿಸಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ ಕೋಸಂಬೆ ಸೂಚನೆ ನೀಡಿದರು.  ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡ ಉಚಿತ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಕುರಿತು ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.  ಶಾಲೆ ಬಿಟ್ಟ ಮಕ್ಕಳ ಮಾಹಿತಿಯನ್ನು ಕ್ರೋಢಿಕರಿಸಿಕೊಂಡು ಅಂತಹ ಮಕ್ಕಳ ಪಾಲಕರ ಮನವೊಲಿಸುವ ಮೂಲಕ ಮಕ್ಕಳನ್ನು ಶಾಲೆಗೆ ಕರೆ ತರಲು ಕ್ರಮ ವಹಿಸಬೇಕು. ಶಾಲೆಯಿಂದ ಹೊರಗುಳಿದ ಮಕ್ಕಳ ವಿವರನ್ನು ನಿಖರವಾಗಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಎಂದು ಹೇಳಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ಕೆ.ಕೆ.ಚವ್ಹಾಣ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಪ್ರಕಾಶ ವಡ್ಡರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ವೀರಯ್ಯ ಹಿರೇಮಠ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದೀಪಾಕ್ಷಿ ಜಾನಕಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.