ADVERTISEMENT

'ಸಿಜೆಐ'ಗೆ ಅಪಮಾನ: ಅ.16ಕ್ಕೆ ವಿಜಯಪುರ ಬಂದ್‌ಗೆ ಮಾಜಿ ಶಾಸಕ ರಾಜು ಆಲಗೂರ ಕರೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2025, 12:18 IST
Last Updated 8 ಅಕ್ಟೋಬರ್ 2025, 12:18 IST
   

ವಿಜಯಪುರ: ಸುಪ್ರೀಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ(ಸಿಜೆಐ) ಬಿ.ಆರ್‌.ಗವಾಯಿ ಅವರ ಮೇಲೆ ವಕೀಲ ರಾಕೇಶ್‌ ಕಿಶೋರ್‌ ಎಂಬಾತ ಶೂ ಎಸೆಯಲು ಯತ್ನಿಸಿದ ಘಟನೆಯನ್ನು ಖಂಡಿಸಿ ಅ.16ರಂದು ವಿಜಯಪುರ ನಗರ ಬಂದ್‌ಗೆ ದಲಿತ, ಅಲ್ಪಸಂಖ್ಯಾತ, ಹಿಂದುಳಿದ ಮತ್ತು ವಿವಿಧ ಪ್ರಗತಿಪರ ಸಂಘಟನೆಗಳ ಒಕ್ಕೂಟ ಕರೆ ನೀಡಿದೆ.

ಬಂದ್‌ ದಿನ ಆರೋಗ್ಯ ಸೇವೆಗಳನ್ನು ಹೊರತು ಪಡಿಸಿ, ಬೇರೆಲ್ಲ ಚಟುವಟಿಕೆಗಳು ಸ್ಥಗಿತವಾಗಲಿದ್ದು, ಸಾರ್ವಜನಿಕರು ಬಂದ್‌ಗೆ ಬೆಂಬಲಿಸಬೇಕು ಎಂದು ಒಕ್ಕೂಟದ ಪ್ರಮುಖ, ಮಾಜಿ ಶಾಸಕ ಪ್ರೊ. ರಾಜು ಆಲಗೂರ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅಂದು ಬೆಳಿಗ್ಗೆ 11 ಗಂಟೆಗೆ ಸಿದ್ದೇಶ್ವರ ಗುಡಿಯಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಬೃಹತ್ ಪ್ರತಿಭಟನಾ ಜಾಥಾ ನಡೆಯಲಿದೆ. ಈ ಜಾಥಾದಲ್ಲಿ ಜಿಲ್ಲೆಯ ಎಲ್ಲ ದಲಿತ, ಅಲ್ಪಸಂಖ್ಯಾತ, ಹಿಂದುಳಿದ, ‍ಪ್ರಗತಿಪರ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಬಂದ್‌ಗೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

ADVERTISEMENT

ವಕೀಲನಿಗೆ ಬಿಜೆಪಿ, ಆರ್‌ಎಸ್‌ಎಸ್‌, ಸಂಘ ಪರಿವಾರದ ನಂಟು ಮತ್ತು ಕುಮ್ಮಕ್ಕು ಇದೆ. ತಕ್ಷಣ ಆತನ ವಿರುದ್ಧ ದೆಹಲಿ ಪೊಲೀಸರು ಹಾಗೂ ಕೇಂದ್ರ ಸರ್ಕಾರ ಕಾನೂನು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ದೇಶದ ಇತಿಹಾಸದಲ್ಲಿ ಹಿಂದೆಂದೂ ಸಿಜೆಐಯೊಬ್ಬರಿಗೆ ಇಂತಹ ಅಪಮಾನ ಆಗಿರಲಿಲ್ಲ. ಈ ಹಿಂದೆ ಅನೇಕ ಸಿಜೆಐಗಳು ಹಿಂದೂ ಧರ್ಮದ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರೂ ಅವರು ಬ್ರಾಹ್ಮಣರು, ಉನ್ನತ ಜಾತಿಗೆ ಸೇರಿದವರು ಎಂಬ ಕಾರಣಕ್ಕೆ ವಿರೋಧ ವ್ಯಕ್ತವಾಗಿಲ್ಲ. ಆದರೆ, ಹಾಲಿ ಸಿಜೆಐ ಬಿ.ಆರ್‌.ಗವಾಯಿ ಅವರು ದಲಿತ ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕೆ ಅವರ ಮೇಲೆ ಶೂ ಎಸೆಯುವ ದುಸ್ಸಾಹಸ ನಡೆದಿದೆ ಎಂದು ಹೇಳಿದರು.

ಬಿ.ಆರ್‌.ಗವಾಯಿ ಅವರು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಆಗಿರುವುದು ಯಾವುದೇ ಮೀಸಲಾತಿಯಿಂದ ಅಲ್ಲ, ಅವರು ತಮ್ಮ ಅರ್ಹತೆ, ಪ್ರತಿಭೆಯಿಂದ ಉನ್ನತ ಹುದ್ದೆಗೆ ಏರಿದ್ದಾರೆ. ಇದನ್ನು ಸಹಿಸಲಾಗದೇ ಕೋಮುವಾದಿ, ಮನುವಾದಿಗಳು ಅವಮಾನ ಎಸಗಿದ್ದಾರೆ. ಇದು ದೇಶದ ಸಂವಿಧಾನದ ಮೇಲಿನ ಹಲ್ಲೆ ಎಂದು ಅವರು ವ್ಯಾಖ್ಯಾನಿಸಿದರು. 

ಗವಾಯಿ ಅವರು ಸಿಜೆಐ ಆದ ದಿನದಿಂದಲೇ ಅವರ ವಿರುದ್ಧ ಸಾಮಾಜಿಕ ಜಾಲತಾಣಗಳ ಮೂಲಕ ಕೆಟ್ಟದಾಗಿ ಬಿಂಬಿಸುವ ಯತ್ನ ನಿರಂತರವಾಗಿ ನಡೆದಿತ್ತು. ಆರ್‌ಎಸ್‌ಎಸ್‌ ಕಾರ್ಯಕರ್ತನಾಗಿ ಆ ವ್ಯಕ್ತಿ ಈ ಹಿಂದೆ ಕೆಲಸ ಮಾಡಿದ್ದಾನೆ ಎಂದು ಹೇಳಿದರು.

ಗೋಡ್ಸೆ ಹಿಂದೆ ಆರ್‌ಎಸ್‌ಎಸ್‌ ಶಕ್ತಿ ಇದ್ದ ಕಾರಣಕ್ಕೆ ಆತ ಗಾಂಧಿಯನ್ನು ಕೊಂದ. ಅದೇ ರೀತಿ ಇಂದು ಈ ವಕೀಲನ ಹಿಂದೆಯೂ ಆರ್‌ಎಸ್‌ಎಸ್‌ ಕುಮ್ಮಕ್ಕು ಇರುವ ಕಾರಣಕ್ಕೆ ಶೂ ಎಸೆಯುವ ಯತ್ನ ನಡೆಸಿದ್ದಾನೆ ಎಂದು ಹೇಳಿದರು.

ಬಿಜೆಪಿ ಆಡಳಿತಾವಧಿಯಲ್ಲಿ ದೇಶದ ಸಾಮಾಜಿಕ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಈ ದೇಶದಲ್ಲಿ ಬದುಕುವ ಹಕ್ಕು, ಮಾತನಾಡುವ ಹಕ್ಕು ಎಲ್ಲರಿಗೂ ಇದೆ. ಇದನ್ನು ಕಸಿದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ ಎಂದರು.

ಸಿಜೆಐಗೆ ಅಪಮಾನ ಆಗಿ 10 ಗಂಟೆಗಳ ಬಳಿಕ ಪ್ರಧಾನಿ ಮೋದಿ ಅವರು ಘಟನೆಯನ್ನು ಸಾಂಕೇತಿಕವಾಗಿ ಖಂಡಿಸಿದ್ದಾರೆ. ಅದೂ ಬಿಹಾರ ಚುನಾವಣೆ ಮೇಲೆ ಎಲ್ಲಿ ಪರಿಣಾಮ ಬೀರುತ್ತದೋ ಎಂಬ ಕಾರಣಕ್ಕೆ ಹೇಳಿಕೆ ನೀಡಿದ್ದಾರೆ. ಆ ಕ್ಷಣವೇ ವಕೀಲನ ವಿರುದ್ಧ ಕ್ರಮಕ್ಕೆ ಸೂಚನೆ ನೀಡುವ ಬದಲಿಗೆ ತೋರಿಕೆಗೆ ನಡೆದುಕೊಂಡಿರುವುದು ಖಂಡನೀಯ ಎಂದರು.

ಮುಖಂಡರಾದ ಅಬ್ದುಲ್‌ ಹಮೀದ್‌ ಮುಶ್ರೀಫ್‌, ಎಸ್‌.ಎಂ.ಪಾಟೀಲ ಗಣಿಹಾರ, ಸೋಮನಾಥ ಕಳ್ಳಿಮನಿ, ರಮೇಶ ಆಸಂಗಿ, ಫಯಾಜ್‌ ಕಲಾದಗಿ, ಶ್ರೀನಾಥ ಪೂಜಾರಿ, ಅಡಿವೆಪ್ಪ ಸಾಲಗಲ್ಲ, ವಸಂತ ಹೊನಮೋಡೆ, ಅಭಿಷೇಕ ಚಕ್ರವರ್ತಿ, ಅನಿಲ ಹೊಸಮನಿ, ನಾಗರಾಜ ಲಂಬು, ಶರಣಪ್ಪ ಶಹಾಪುರ, ಇರ್ಫಾನ್‌ ಶೇಖ್‌, ಬೀರಪ್ಪ ಜುಮನಾಳ, ಎಂ.ಜಿ.ಯಂಕಂಚಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.