ವಿಜಯಪುರ ಬಂದ್ ಹಿನ್ನೆಲೆಯಲ್ಲಿ ಗುರುವಾರ ದಲಿತ, ಅಲ್ಪಸಂಖ್ಯಾತ, ಹಿಂದುಳಿದ ಸಂಘಟನೆಗಳ ಒಕ್ಕೂಟದಿಂದ ಬೃಹತ್ ಪ್ರತಿಭಟನಾ ಜಾಥಾ ನಡೆಯಿತು
ಪ್ರಜಾವಾಣಿ ಚಿತ್ರ
ವಿಜಯಪುರ: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ(ಸಿಜೆಐ) ಬಿ.ಆರ್. ಗವಾಯಿ ಅವರ ಮೇಲೆ ವಕೀಲನೊಬ್ಬ ಶೂ ಎಸೆಯಲು ಯತ್ನಿಸಿದ ಘಟನೆ ಖಂಡಿಸಿ ದಲಿತ ಸಂಘಟನೆಗಳ ಒಕ್ಕೂಟ, ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ಒಕ್ಕೂಟಗಳಿಂದ ಗುರುವಾರ ಕರೆ ನೀಡಲಾಗಿದ್ದ ‘ವಿಜಯಪುರ ಬಂದ್’ ಯಶಸ್ವಿಯಾಯಿತು.
ನಗರ ವ್ಯಾಪ್ತಿಯಲ್ಲಿ ಬಸ್ ಸಂಚಾರ ಸಂಪೂರ್ಣ ಸ್ಥಗಿತವಾಗಿತ್ತು. ನಗರದ ಕೇಂದ್ರ ಬಸ್ ನಿಲ್ದಾಣ, ಸೆಟಲೈಟ್ ಬಸ್ ನಿಲ್ದಾಣ ಬಸ್ಸುಗಳಿಲ್ಲದೇ ಬಿಕೋ ಎನ್ನುತ್ತಿದ್ದವು. ದೂರದ ನಗರಗಳಿಗೆ ತೆರಳಬೇಕಾದ ಪ್ರಯಾಣಿಕರು ಬಸ್ ನಿಲ್ದಾಣದಲ್ಲಿ ಪರದಾಡಿದರು. ಹೋಟೆಲ್, ಅಂಗಡಿ–ಮಳಿಗೆಗಳು, ಶಾಪಿಂಗ್ ಮಾಲ್‌ಗಳು, ಮಾರುಕಟ್ಟೆ ಬಾಗಿಲು ಮುಚ್ಚಿದ್ದವು. ಜನ ಸಂಚಾರ ವಿರಳವಾಗಿತ್ತು.
ಬ್ಯಾಂಕು, ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಿದವಾದರೂ ಜನರಿಲ್ಲದೇ ಬಿಕೋ ಎನ್ನುತ್ತಿದ್ದವು. ಆಸ್ಪತ್ರೆ, ಔಷಧಾಲಯಗಳಿಗೆ, ರೋಗಿಗಳಿಗೆ ಯಾವುದೇ ಅಡಚಣೆಯಾಗಲಿಲ್ಲ.
ಹುಬ್ಬಳ್ಳಿ, ಕಲಬುರ್ಗಿ, ಹೊಸಪೇಟೆ, ಸೋಲಾಪುರ, ಅಥಣಿ, ಜಮಖಂಡಿ ಮಾರ್ಗಗಳಿಂದ ವಿಜಯಪುರ ನಗರಕ್ಕೆ ಸಂಪರ್ಕ ಕಲ್ಪಿಸುವ ಸಾರಿಗೆ ಬಸ್‌ಗಳು ನಗರದ ಹೊರ ವಲಯದಲ್ಲೇ ಕಾರ್ಯಾಚರಣೆ ನಡೆಸಿದವು. ನಗರ ಸಾರಿಗೆ ಸಂಪೂರ್ಣ ಸ್ಥಗಿತವಾಗಿತ್ತು. ಆಟೋ, ಕಾರು, ಬೈಕುಗಳ ಸಂಚಾರಕ್ಕೆ ನಿರ್ಬಂಧವಿರಲಿಲ್ಲ.
ಪ್ರತಿಭಟನಾ ಜಾಥಾ ಸಾಗಿದ ನಗರದ ಸಿದ್ಧೇಶ್ವರ ಗುಡಿಯಿಂದ ಗಾಂಧಿಚೌಕಿ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ವರೆಗೆ ಸಂಚಾರಕ್ಕೆ ಸಂಪೂರ್ಣ ತಡೆವೊಡ್ಡಲಾಗಿತ್ತು. ಸಂಜೆ 5ರ ಬಳಿಕ ಬಸ್‌ಗಳು ಎಂದಿನಂತೆ ಕಾರ್ಯಾಚರಣೆ ನಡೆಸಿದವು.
ಪ್ರತಿಭಟನಾ ಜಾಥಾ:
ಬಂದ್ ಹಿನ್ನೆಲೆಯಲ್ಲಿ ನಗರದ ಶ್ರೀ ಸಿದ್ಧೇಶ್ವರ ದೇವಸ್ಥಾನದಿಂದ ಗಣಪತಿ ಚೌಕ, ವಾಜಪೇಯಿ ಸರ್ಕಲ್, ಕಿರಾಣ ಬಜಾರ್, ಸಿದ್ಧೇಶ್ವರ ರಸ್ತೆ, ಗಾಂಧಿ ವೃತ್ತದ ಮಾರ್ಗವಾಗಿ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದವರೆಗೆ ಪ್ರತಿಭಟನಾ ಜಾಥಾ ನಡೆಯಿತು. ಬಳಿಕ ಅಂಬೇಡ್ಕರ್ ವೃತ್ತದಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಯಿತು.
ವಿಜಯಪುರ ಬೌದ್ಧ ವಿಹಾರದ ಶಾಕು ಬೋಧಿಧಮ್ಮ, ಮುಖಂಡರಾದ ಪ್ರೊ.ರಾಜು ಆಲಗೂರ, ಅಬ್ದುಲ್ ಹಮೀದ್ ಮುಶ್ರೀಫ್, ಸೋಮನಾಥ ಕಳ್ಳಿಮನಿ, ದಿನೇಶ ಹಳ್ಳಿ, ಶ್ರೀನಾಥ ಪೂಜಾರಿ, ಎಸ್.ಎಂ. ಪಾಟೀಲ ಗಣಿಹಾರ, ಅರವಿಂದ ಕುಲಕರ್ಣಿ, ರಮೇಶ ಆಸಂಗಿ, ಸಿದ್ದು ರಾಯಣ್ಣನವರ, ಇರ್ಫಾನ್ ಶೇಖ್, ಡಾ.ಜೆ.ಎಸ್.ಪಾಟೀಲ, ಎಂ.ಸಿ.ಮುಲ್ಲಾ, ಆರತಿ ಶಹಪುರ, ಗಂಗಾಧರ ಸಂಬಣ್ಣಿ, ಫಯಾಜ್ ಕಲಾದಗಿ, ಜಿತೇಂದ್ರ ಕಾಂಬಳೆ, ಅಡಿವೆಪ್ಪ ಸಾಲಗಲ್ಲ, ಸುರೇಶ ಗೊಣಸಗಿ, ಚನ್ನು ಕಟ್ಟಿಮನಿ, ಬಿ.ಭಗವಾನ್ ರೆಡ್ಡಿ, ಅಸ್ಪಾಕ್ ಮನಗೂಳಿ ಇದ್ದಾರೆ.
ವಿಜಯಪುರ ಬಂದ್ ಹಿನ್ನೆಲೆಯಲ್ಲಿ ಗುರುವಾರ ದಲಿತ ಅಲ್ಪಸಂಖ್ಯಾತ ಹಿಂದುಳಿದ ಸಂಘಟನೆಗಳ ಒಕ್ಕೂಟದಿಂದ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾಜಿ ಶಾಸಕ ಪ್ರೊ.ರಾಜು ಆಲಗೂರ ಮಾತನಾಡಿದರು
ವಿಜಯಪುರ ಬಂದ್ ಹಿನ್ನೆಲೆಯಲ್ಲಿ ಗುರುವಾರ ನಗರದ ಲಾಲ್ ಬಹದ್ದೂರ್ ಶಾಸ್ತ್ರಿ ಮಾರುಕಟ್ಟೆಯಲ್ಲಿ ಅಂಗಡಿ– ಮಳಿಗೆಗಳು ಬಂದ್ ಆಗಿದ್ದವು
ಸಿಜೆಐ ಮೇಲೆ ಶೂ ಎಸೆದರೂ ಕೇಂದ್ರ ಸರ್ಕಾರ ಯಾವುದೇ ಕ್ರಮಕೈಗೊಂಡಿಲ್ಲ. ನಾಳೆ ಇದೇ ಶೂನ ಪ್ರಧಾನಿ ಗೃಹ ಸಚಿವರ ಮೇಲೆ ಬೇರೆಯವರು ಎಸೆದಿದ್ದರೆ ಏನು ಮಾಡುತ್ತೀರಿ. ವಕೀಲನಿಗೆ ಗುಂಡು ಹಾಕಿ ಇಲ್ಲವೇ ಗಲ್ಲಿಗೆ ಹಾಕಿಅಬ್ದುಲ್ ಹಮೀದ್ ಮುಶ್ರೀಫ್, ಕಾಂಗ್ರೆಸ್ ಮುಖಂಡ
ಮನುವಾದಿ ವಕೀಲ ಸಿಜೆಐ ಮೇಲೆ ಶೂ ಎಸೆದು ತನ್ನ ಸಣ್ಣತನಕ್ಕೆ ಛೀಮಾರಿ ಹಾಕಿಸಿಕೊಂಡಿದ್ದಾನೆ. ಆತನನ್ನು ಸಾರ್ವಜನಿಕವಾಗಿ ಗಲ್ಲಿಗೆ ಏರಿಸಬೇಕು ಈ ಕುಚೋದ್ಯಕ್ಕೆ ಮನುವಾದಿಗಳು ಕುಮ್ಮಕ್ಕು ನೀಡಿದ್ದಾರೆಅರವಿಂದ ಕುಲಕರ್ಣಿ, ರೈತ ಮುಖಂಡ
ಆರ್‌ಎಸ್‌ಎಸ್‌ನವರಿಗೆ ಕಾಂಗ್ರೆಸ್‌ನಲ್ಲಿರುವ ಮನುವಾದಿಗಳು ಹಣ ನೀಡಿ ಬೆಂಬಲಿಸುತ್ತಿದ್ದಾರೆ. ಕಾಂಗ್ರೆಸ್‌ನಲ್ಲಿರುವ ಮನುವಾದಿಗಳ ಬಗ್ಗೆ ದಲಿತರು ಅಲ್ಪಸಂಖ್ಯಾತರು ಹಿಂದುಳಿದವರು ಚಿಂತನೆ ಮಾಡಬೇಕಿದೆಸೋಮನಾಥ ಕಳ್ಳಮನಿ, ಅಹಿಂದ ಮುಖಂಡ
ಪ್ರಜಾಪ್ರಭುತ್ವ ಪುನರ್ ಸ್ಥಾಪನೆಗೆ ಆದ್ಯತೆ
ದೇಶದಲ್ಲಿ ಬಿಜೆಪಿ ಆಡಳಿತಾವಧಿಯಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ವಿಚಾರಧಾರೆಗಳಿಗೆ ಸಂವಿಧಾನಕ್ಕೆ ಅವಮಾನ ಮಾಡುವ ಕೆಲಸ ನಡೆದಿದೆ. ಈ ನಿಟ್ಟಿನಲ್ಲಿ ದಲಿತ ಅಲ್ಪಸಂಖ್ಯಾತ ಹಿಂದುಳಿದ ವರ್ಗಗಳು ಪ್ರಜಾಪ್ರಭುತ್ವ ಪುನರ್ ಸ್ಥಾಪನೆಗೆ ಆದ್ಯತೆ ನೀಡಬೇಕಿದೆ ಎಂದು ಮಾಜಿ ಶಾಸಕ ಪ್ರೊ.ರಾಜು ಆಲಗೂರ ಹೇಳಿದರು.
‘ಸರ್ಕಾರಿ ಜಾಗೆಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆ ನಿಷೇಧಿಸಬೇಕು ಎಂಬ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆ ವಿರೋಧಿಸಿ ನೀವು ಆರ್. ಎಸ್. ಎಸ್ ಪ್ರೀತಿಸುತ್ತೇವೆ ಎಂಬ ಪೋಸ್ಟರ್ ಅಭಿಯಾನ ನಡೆಸಿದರೆ ನಾವು ಸಂವಿಧಾನ ಅಂಬೇಡ್ಕರ್ ಬುದ್ಧ ಬಸವಣ್ಣನ ವಿಚಾರಗಳನ್ನು ಪ್ರೀತಿಸುತ್ತೇವೆ ಎಂಬ ಫೋಸ್ಟರ್ ಅಭಿಯಾನ ನಡೆಸುತ್ತೇವೆ’ ಎಂದರು. ‘ಕನೇರಿ ಮಠದ ಸ್ವಾಮೀಜಿ ಅವರು ಲಿಂಗಾಯತ ಮಠಾಧೀಶರ ವಿರುದ್ಧ ಅವಾಚ್ಯ ಶಬ್ದ ಬಳಕೆ ಮಾಡಿರುವುದು ಖಂಡನೀಯ. ಸ್ವಾಮೀಜಿ ಆರ್. ಎಸ್. ಎಸ್ ಮುಖವಾಣಿಯಾಗಿದ್ದಾರೆ. ಜಾತಿವಾದಿಗಳಾಗಿದ್ದಾರೆ’ ಎಂದು ಆರೋಪಿಸಿದರು. ‘ಆರ್.ಎಸ್.ಎಸ್ ಎಂದೂ ದಲಿತ ಹಿಂದುಳಿದ ಅಲ್ಪಸಂಖ್ಯಾತರ ಪರವಾಗಿವಾಗಿಲ್ಲ. ಬಿಜೆಪಿ ಸಂಘ ಪರಿವಾರದಲ್ಲಿರುವವರು ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಬಿಜೆಪಿ ಸಂಘ ಪರಿವಾರದಿಂದದಿಂದ ಹೊರಬರಬೇಕು’ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.