
ಸಿಂದಗಿ: ಪುರಸಭೆಯಿಂದ ಪಟ್ಟಣದಲ್ಲಿ 4-5 ತಿಂಗಳಿಂದ ಮುಂದುವರೆದ ಅತಿಕ್ರಮಣ ತೆರವು ಕಾರ್ಯಾಚರಣೆ ಐದನೇ ಹಂತ ತಲುಪದೆ. ಹಲವಾರು ತಿಂಗಳಿಂದ ತೆರುವುಗೊಂಡಿರುವ ರಸ್ತೆಗಳ ಬದಿಯಲ್ಲಿ ಈವರೆಗೂ ಅಭಿವೃದ್ಧಿಯ ಸುಳಿವು ಕಾಣುತ್ತಿಲ್ಲ.
ತೆರವು ಕಾರ್ಯಾಚರಣೆ ಕೂಡ ಅರೆಬರೆ ಮಾಡಲಾಗಿದೆ. ಅನುದಾನದ ಕೊರತೆಯಿಂದ ಪಟ್ಟಣದಲ್ಲಿನ ರಸ್ತೆ ಬದಿಯ ಪ್ರದೇಶವೆಲ್ಲ ಬಟಾ ಬಯಲಾಗಿ ಬಿಕೋ ಎನ್ನುತ್ತಿದೆ. ದೂಳುಮಯ ವಾತಾವರಣ ಇದೆ. ಪಟ್ಟಣದ ಸೌಂದರ್ಯಕ್ಕೆ ಧಕ್ಕೆಯಾಗಿದೆ. ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅನುದಾನ ತಂದಿರುವುದಾಗಿ ಹೇಳಿಕೊಳ್ಳುವ ಶಾಸಕರು ಸಿಂದಗಿ ಪಟ್ಟಣದ ಅಭಿವೃದ್ಧಿ ಕಡೆಗಣಿಸಿರುವ ಆರೋಪ ಕೇಳಿಬಂದಿದೆ.
‘ಸಿಂದಗಿ ಪಟ್ಟಣದ ಅಭಿವೃದ್ಧಿ ಮತ್ತು ಬಾಕಿ ಉಳಿದ ತೆರವು ಕಾರ್ಯಾಚರಣೆ ಸ್ಥಗಿತಗೊಂಡಿದ್ದು ಏಕೆ? ಎಂಬುದನ್ನು ಬಹಿರಂಗ ಪಡಿಸಬೇಕು. ಇಲ್ಲದಿದ್ದರೆ ಹೋರಾಟ ನಡೆಸಲಾಗುವುದು’ ಎಂದು ಬಹುಜನ ಸಮಾಜ ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷ ದಸ್ತಗೀರ ಮುಲ್ಲಾ ಎಚ್ಚರಿಕೆ ನೀಡಿದ್ದಾರೆ.
‘ಸಾರ್ವಜನಿಕರಿಂದ ಸಾಕಷ್ಟು ಆಸ್ತಿ ತೆರಿಗೆ ಹಣ ಪುರಸಭೆ ಕಾರ್ಯಾಲಯಕ್ಕೆ ಜಮೆಯಾಗದೇ ಸೋರಿಕೆಯಾಗುತ್ತಿದೆ. ಈ ಸೋರಿಕೆ ತಡೆಗಟ್ಟಿದರೆ ತೆರಿಗೆ ಹಣ ಕ್ರೋಡೀಕರಣಗೊಳಿಸಿ ಪಟ್ಟಣದ ಅಭಿವೃದ್ಧಿಪಡಿಸಬಹುದು’ ಎಂದು ಪುರಸಭೆ ಸದಸ್ಯ ಸಾಯಬಣ್ಣ ಪುರದಾಳ ಅಭಿಪ್ರಾಯಪಟ್ಟಿದ್ದಾರೆ.
‘ಪಟ್ಟಣದ ಸೌಂದರ್ಯೀಕರಣ, ಅಭಿವೃದ್ಧಿಗಾಗಿ ಸದಾ ಕಂಕಣಬದ್ಧನಾಗಿರುವೆ. ಏಪ್ರಿಲ್ ತಿಂಗಳ ನಂತರ ಬಜೆಟ್ ಮಂಡನೆಯಾದ ಮೇಲೆ ಸರ್ಕಾರದಿಂದ ಪ್ರತಿಯೊಂದು ಮತಕ್ಷೇತ್ರಕ್ಕೆ ಅತ್ಯಧಿಕ ಹಣ ಎಸ್ಎಫ್‌ಸಿ ಯೋಜನೆಯಡಿ ನೀಡಬಹುದೆಂಬ ಆಶಾಭಾವ ಇದೆ. ತೆರವು ಕಾರ್ಯಾಚರಣೆ ಮಾಡುವ ಮುನ್ನ ಯೋಜನೆ ರೂಪಿಸಿ ಬೇಕಾದ ಹಣವನ್ನು ಕಾಯ್ದಿರಿಸಿದರೆ ತಕ್ಷಣ ಅಭಿವೃದ್ಧಿ ಕಾರ್ಯ ನಡೆಯುತ್ತದೆ. ಅಂತೆಯೇ ಆಲಮೇಲ ಪಟ್ಟಣದಲ್ಲಿ ತೆರವು ಕಾರ್ಯಾಚರಣೆ ಜೊತೆಗೆ ₹ 20 ಕೋಟಿ ಅನುದಾನದಲ್ಲಿ ಅಭಿವೃದ್ಧಿ ಕಾಮಗಾರಿಯೂ ಪ್ರಾರಂಭಗೊಂಡಿದೆ’ ಎಂದು ಶಾಸಕ ಅಶೋಕ ಮನಗೂಳಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.