ಸುದ್ದಿಗೋಷ್ಠಿಯಲ್ಲಿ ಸಿಎಂ, ಡಿಸಿಎಂ
ಆಲಮಟ್ಟಿ(ವಿಜಯಪುರ ಜಿಲ್ಲೆ): ಯುಕೆಪಿ ವಿಷಯ ಬಿಟ್ಟು ರಾಜ್ಯದ ಬೇರೆ ವಿಷಯಗಳ ಬಗ್ಗೆ ಪ್ರಶ್ನೆ ಕೇಳಿದ ದೃಶ್ಯ ಮಾಧ್ಯಮಗಳ ಪತ್ರಕರ್ತರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತರಾಟೆಗೆ ತೆಗೆದುಕೊಂಡರು.
‘ರಾಜ್ಯದ ಬೇರೆ ವಿಷಯಗಳ ಬಗ್ಗೆ ಸುದ್ದಿ ನೀಡಲು ಬೆಂಗಳೂರಿನಲ್ಲಿ ನಿಮ್ಮವರೇ ಇರುತ್ತಾರೆ. ಅದನ್ನು ಬಿಟ್ಟು ಸ್ಥಳೀಯ ಮಹತ್ವದ ವಿಷಯಗಳ ಬಗ್ಗೆ ಇಲ್ಲಿಯ ಪತ್ರಕರ್ತರು ಪ್ರಶ್ನೆ ಕೇಳಿ?’ ಎಂದು ತಿಳಿ ಹೇಳಿದರು.
‘ಇಲ್ಲಿಯ ಪತ್ರಕರ್ತರಿಗೆ ಸ್ಥಳೀಯ ಸುದ್ದಿಗಳ ಗಂಭೀರತೆ ಇಲ್ಲ’ ಎಂದು ಗೊಣಗಿದರು. ಅನ್ಯ ಪ್ರಶ್ನೆ ಕೇಳಿದ್ದಕ್ಕೆ ಅಸಮಾಧಾನಗೊಂಡ ಮುಖ್ಯಮಂತ್ರಿ ಸುದ್ದಿಗೋಷ್ಠಿಯನ್ನೇ ಮೊಟಕುಗೊಳಿಸಿ ತೆರಳಿದರು.
ಡಿಸಿಎಂ ಗರಂ
ಬಾಗಿನ ಸಲ್ಲಿಸುವ ಹಾಗೂ ರೈತರಿಂದ ಮನವಿ ಸ್ವೀಕಾರ ಸ್ಥಳದ ಬಳಿ ಮುಖ್ಯಮಂತ್ರಿಗಳು, ಸಚಿವರು ಬಿಸಿಲಿನಲ್ಲಿ ನಿಂತಿದ್ದಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕೆಬಿಜೆಎನ್ಎಲ್ ಹಿರಿಯ ಅಧಿಕಾರಿಗಳು ಹಾಗೂ ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು.
ಬಾಗಿನ ಸ್ಥಳ ಬದಲಾವಣೆ
ಆಲಮಟ್ಟಿ ಜಲಾಶಯದ ಹಿಂಭಾಗದಲ್ಲಿ ಕೆಳಕ್ಕೆ ಇಳಿದು ನೇರವಾಗಿ ಕೃಷ್ಣಾ ನದಿಗೆ ಬಾಗಿನ ಅರ್ಪಿಸುವ ವ್ಯವಸ್ಥೆ ಇದೆ. ಆದರೆ, ಮುಖ್ಯಮಂತ್ರಿಗಳಿಗೆ ಮೊಣಕಾಲು ನೋವು ಕಾರಣ ಇಳಿದು ಹತ್ತಲು ತೊಂದರೆಯಾಗುವ ಹಿನ್ನಲೆಯಲ್ಲಿ ಬಾಗಿನ ಸ್ಥಳ ಬಿಟ್ಟು, ಜಲಾಶಯದ ಮೇಲ್ಭಾಗದಿಂದಲೇ ಬಾಗಿನ ಅರ್ಪಿಸಿದರು.
ರೈತರನ್ನು ವಶಕ್ಕೆ ಪಡೆದ ಪೊಲೀಸರು
ರೈತರು, ಸಾರ್ವಜನಿಕರು ಮನವಿ ಅರ್ಪಣೆಗಾಗಿ ಒಂದು ಮನವಿಗೆ ನಾಲ್ವರಂತೆ ಅವಕಾಶ ಒದಗಿಸಲಾಗಿತ್ತು. ಪ್ರವಾಸಿ ಮಂದಿರದ ಬಳಿಯ ಮನವಿ ಸಲ್ಲಿಸುವ ಸ್ಥಳಕ್ಕೆ ಬಂದ ರೈತ ಮುಖಂಡ ಬಸವರಾಜ ಬಾಗೇವಾಡಿ ನೇತೃತ್ವದಲ್ಲಿ ಕೆಲ ರೈತರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಬಾಗಿನ ಅರ್ಪಣೆಯಲ್ಲಿ ನಮಗೂ ಅವಕಾಶ ಕಲ್ಪಿಸಬೇಕು, ಮನವಿ ಸಲ್ಲಿಸಲು ಎಲ್ಲರೂ ಬರಲು ಅವಕಾಶ ಕೊಡಬೇಕು ಇಲ್ಲದಿದ್ದರೇ ಸಿಎಂ ಬಂದಾಗ ಧರಣಿ ಮಾಡುತ್ತೇವೆ ಎಂದು ಪೊಲೀಸರ ವಿರುದ್ಧ ಧಿಕ್ಕಾರ ಕೂಗಿದರು.
ಪೊಲೀಸರು, ರೈತ ಮುಖಂಡರ ಮಧ್ಯೆ ವಾಗ್ವಾದವೂ ಜರುಗಿತು. ಆಕ್ಷೇಪ ವ್ಯಕ್ತಪಡಿಸಿದ 12 ರೈತರನ್ನು ವಶಕ್ಕೆ ಪಡೆದು, ಬಳಿಕ ಬಿಟ್ಟು ಕಳುಹಿಸಲಾಯಿತು.
ಬಿಗಿ ಭದ್ರತೆ: ಜಲಾಶಯದ ವಿವಿಧ ಇದೇ ಮೊದಲ ಬಾರಿಗೆ ಸಿಎಂ ಕಾರ್ಯಕ್ರಮಕ್ಕೆ ಭಾರಿ ಬಂದೋಬಸ್ತ್ ಮಾಡಲಾಗಿತ್ತು. ಪೊಲೀಸರ ಅತಿಯಾದ ಬಿಗುವಿನ ನಿಲುವಿಗೆ ಆಕ್ರೋಶ ವ್ಯಕ್ತವಾಯಿತು. ಸಾರ್ವಜನಿಕರೊಂದಿಗೆ ಪೊಲೀಸರು ಒರಟಾಗಿ ವರ್ತಿಸಿದರು
ಸಿಎಂ ಬರುವ ದಾರಿಯುದ್ದಕ್ಕೂ ನೂರಾರು ಬ್ಯಾನರ್ ಗಳು ರಾರಾಜಿಸಿದವು. ಜಲಾಶಯದ ಪ್ರವೇಶ ದ್ವಾರ, ವೃತ್ತ, ದಾರಿಗುಂಟ ಹೂವು, ವರ್ಣಮಯ ವಿದ್ಯುತ್ ಅಲಂಕಾರಿನ ವ್ಯವಸ್ಥೆ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.