ADVERTISEMENT

ಬಸವನಬಾಗೇವಾಡಿ: ಕೋಲ್ಡ್ ಸ್ಟೋರೇಜ್ ಕಾಮಗಾರಿ ಆರಂಭಿಸಲು ಶಿವಾನಂದ ಪಾಟೀಲ ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 22 ಜುಲೈ 2025, 2:47 IST
Last Updated 22 ಜುಲೈ 2025, 2:47 IST
ಬಸವನಬಾಗೇವಾಡಿ ಪಟ್ಟಣದಲ್ಲಿ ಸಚಿವ ಶಿವಾನಂದ ಪಾಟೀಲ ಅವರು ವಿವಿಧ ಅಭಿವೃದ್ಧಿ ಕಾಮಗಾರಿಗಳ ವೀಕ್ಷಣೆ ಮಾಡಿದರು
ಬಸವನಬಾಗೇವಾಡಿ ಪಟ್ಟಣದಲ್ಲಿ ಸಚಿವ ಶಿವಾನಂದ ಪಾಟೀಲ ಅವರು ವಿವಿಧ ಅಭಿವೃದ್ಧಿ ಕಾಮಗಾರಿಗಳ ವೀಕ್ಷಣೆ ಮಾಡಿದರು   

ಬಸವನಬಾಗೇವಾಡಿ: ಜವಳಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರು ಪಟ್ಟಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ವೀಕ್ಷಿಸಿ, ಅಧಿಕಾರಿಗಳಿಗೆ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಇಲಾಖೆಯ ಅಧಿಕಾರಿಗಳಿಗೆ ಶನಿವಾರ ನಿರ್ದೇಶನ ನೀಡಿದರು.

ಪಟ್ಟಣದ ಮೆಗಾ ಮಾರುಕಟ್ಟೆ ಪ್ರದೇಶಕ್ಕೆ ಭೇಟಿ ನೀಡಿದ ಸಚಿವರು ವ್ಯಾಪಾರಿಗಳ ಸಮಸ್ಯೆ ಆಲಿಸಿದರು. ಬಾಡಿಗೆ ಪಡೆದಿರುವ ವ್ಯಾಪಾರಿಗಳ ಮಳಿಗೆಗೆ ಮಳೆ ನೀರು ನುಗ್ಗುವಿಕೆ, ಒಂದನೇ ಮಹಡಿ ಕಾಮಗಾರಿಯ ನೀರು ಸೋರಿಕೆ ಸಮಸ್ಯೆ ತಡೆಯುವ ಕುರಿತು ತ್ವರಿತ ಕ್ರಮ ಕೈಗೊಳ್ಳುವ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಇದಲ್ಲದೇ ಬಾಕಿ ಉಳಿದಿರುವ ಕಾಮಗಾರಿ ತ್ವರಿತಗೊಳಿಸಿ ಶೀಘ್ರ ಕಾಮಗಾರಿ ಮುಗಿಸುವಂತೆ ಸೂಚನೆ ನೀಡಿದರು.

ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಉರ್ದು ಶಾಲೆ ಕಾಮಗಾರಿ ನಿಧಾನಗತಿಯಲ್ಲಿ ನಡೆದಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಕಾಲಮಿತಿ ಮೀರಿ ಹಲವು ತಿಂಗಳು ಗತಿಸಿದರೂ ಕಾಮಗಾರಿ ಮುಗಿಸದ ಗುತ್ತಿಗೆದಾರ ರಾಜ ಅಹ್ಮದ್ ಮುದ್ನಾಳ ವಿರುದ್ಧ ಹರಿಹಾಯ್ದರು. ಪುನರ್ವಸತಿ ಪುನರ್ ನಿರ್ಮಾಣ ಇಲಾಖೆಯ ಅನುದಾನದಲ್ಲಿ ನಡೆದಿರುವ ಕಾಮಗಾರಿ ಬೇಗ ಮುಕ್ತಾಯವಾದಲ್ಲಿ ಮೊದಲ ಮಹಡಿಯ ಕಾಮಗಾರಿ ಆರಂಭಕ್ಕೆ ಅನುಕೂಲವಾಗಲಿದೆ. ಹೀಗಾಗಿ ಬೇಗನೆ ಕಾಮಗಾರಿ ಮುಗಿಸಬೇಕು. ಇಲ್ಲವಾದಲ್ಲಿ ಗುತ್ತೇದಾರನ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡುವುದಾಗಿ ಎಚ್ಚರಿಸಿದರು. ಕಾಮಗಾರಿ ಪ್ರಗತಿ ಕುರಿತು ಸ್ಥಳ ಪರಿಶೀಲನೆ ಮಾಡಿ, ಮಾಹಿತಿ ನೀಡದ ಬಿಇಒ ವಸಂತ ರಾಠೋಡ ವಿರುದ್ಧ ಸಚಿವರು ಗರಂ ಆದರು.

ADVERTISEMENT

ನಂತರ ಸಚಿವರು ನಗರದ ಪಾಟೀಲ ಕ್ಲೀನಿಕ್ ಪ್ರದೇಶಕ್ಕೆ ಭೇಟಿ ನೀಡಿ, ರಸ್ತೆಯ ಕ್ರಾಸ್ ಕಟಿಂಗ್ ಕಾಮಗಾರಿ ಕಂಡು ಸಿಡಿಮಿಡಿಯಾದರು. ಅವೈಜ್ಞಾನಿಕವಾಗಿ ರಸ್ತೆ ಕಟಿಂಗ್ ಮಾಡಿರುವ ಕುರಿತು ಪುರಸಭೆ ಮುಖ್ಯಾಧಿಕಾರಿ ಚಿತ್ತರಗಿ ಅವರಿಗೆ ನೋಟೀಸ್ ನೀಡುವಂತೆ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬಸವನಬಾಗೇವಾಡಿ ಪಟ್ಟಣದಲ್ಲಿ ಸಚಿವ ಶಿವಾನಂದ ಪಾಟೀಲ ಅವರು ವಿವಿಧ ಅಭಿವೃದ್ಧಿ ಕಾಮಗಾರಿಗಳ ವೀಕ್ಷಣೆ ಮಾಡಿದರು.

ನಂತರ ಕೃಷಿ ಮಾರುಕಟ್ಟೆ ಪ್ರದೇಶಕ್ಕೆ ಭೇಟಿ ನೀಡಿದ ಸಚಿವರು, ಕೋಲ್ಡ್ ಸ್ಟೋರೇಜ್ ಕಾಮಗಾರಿ ಆರಂಭಿಸುವ ಹಾಗೂ ನಿಧಾನಗತಿಯಲ್ಲಿ ನಡೆದಿರುವ ಗೋದಾಮು ಕಾಮಗಾರಿ ತ್ವರಿತಗೊಳ್ಳಬೇಕು. ಈ ಕುರಿತು ಎಪಿಎಂಸಿ ಅಧಿಕಾರಿಗಳು, ಪಿ.ಆರ್.ಇ.ಡಿ. ಎಂಜಿನಿಯರಗಳು ಸಭೆ ಸೇರಿ ತ್ವರಿತವಾಗಿ ಕಾರ್ಯೋನ್ಮುಖ ಆಗುವಂತೆ ನಿರ್ದೇಶನ ನೀಡಿದರು.

ಪಿ.ಆರ್.ಇ.ಡಿ. ಎಇಇ ವಿಲಾಸ ರಾಠೋಡ, ಲೋಕೋಪಯೋಗಿ ಇಲಾಖೆಯ ಎಇಇ ಎಸ್.ಜಿ.ದೊಡಮನಿ ಸೇರಿದಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.