ADVERTISEMENT

ಮುದ್ದೇಬಿಹಾಳ | ಇಲ್ಲಿವೆ 100 ದೇಶಗಳ ನೋಟುಗಳು!

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2023, 4:28 IST
Last Updated 23 ಅಕ್ಟೋಬರ್ 2023, 4:28 IST
ಮುದ್ದೇಬಿಹಾಳದ ಮುಹ್ಮದಝಕರಿಯಾ ಅತ್ತಾರ ಸಂಗ್ರಹಿಸಿರುವ ವಿದೇಶಿ ನೋಟುಗಳು
ಮುದ್ದೇಬಿಹಾಳದ ಮುಹ್ಮದಝಕರಿಯಾ ಅತ್ತಾರ ಸಂಗ್ರಹಿಸಿರುವ ವಿದೇಶಿ ನೋಟುಗಳು   

– ಶಂಕರ ಈ.ಹೆಬ್ಬಾಳ

ಮುದ್ದೇಬಿಹಾಳ: ಪಟ್ಟಣದ ರಿಲಯನ್ಸ್ ಪೆಟ್ರೋಲ್ ಬಂಕ್‌ ಎದುರಿರುವ ತಂಪು ಪಾನೀಯಗಳ ಅಂಗಡಿಗೆ ನೀವು ಬಂದಿದ್ದೇ ಆದಲ್ಲಿ ಅಲ್ಲಿ ಅಂಗಡಿಯ ಕ್ಯಾಶ್ ಕೌಂಟರ್ ಮೇಲೆ ವಿವಿಧ ದೇಶಗಳ ನೋಟುಗಳು ಕಾಣಸಿಗುತ್ತವೆ. ವಿವಿಧ ದೇಶಗಳ ನೋಟು ಸಂಗ್ರಹಿಸುವ ಹವ್ಯಾಸ ಹೊಂದಿರುವ ಅಂಗಡಿ ಮಾಲೀಕ ಮುಹ್ಮದ ಝಕರಿಯಾ ಖಾಜೇಸಾಬ ಅತ್ತಾರ ತಮ್ಮ ಸಂಗ್ರಹದ ನೋಟುಗಳಿಗೆ ಕ್ಯಾಶ್‌ ಕೌಂಟರ್‌ನ ಮೇಜಿನ ಮೇಲೆ ಜಾಗ ಕಲ್ಪಿಸಿದ್ದಾರೆ.

ಝಕರಿಯಾ ಅವರ ಸಂಗ್ರಹದಲ್ಲಿ ನೂರಕ್ಕೂ ಅಧಿಕ ದೇಶಗಳ ನೋಟುಗಳಿವೆ. ಅಂಗಡಿಯ ಕ್ಯಾಶ್‌ ಕೌಂಟರ್‌ ಒಂದರಲ್ಲೇ 60 ರಿಂದ 80 ದೇಶಗಳ ನೋಟುಗಳನ್ನು ಸಂಗ್ರಹಿಸಿ ಜನರಿಗೆ ಮಾಹಿತಿ ನೀಡುವ ಕೆಲಸ ಮಾಡುತ್ತಿದ್ದಾರೆ.

ADVERTISEMENT

ಸಂಗ್ರಹ ನೋಟುಗಳು

ಸೌದಿ ಅರೇಬಿಯಾ, ಫಿನ್‌ಲ್ಯಾಂಡ್, ನೈಜೀರಿಯಾ, ಸಿರಿಯಾ, ಇರಾಕ್, ಇಂಡೋನೇಷ್ಯಾ, ಆಸ್ಟ್ರೇಲಿಯಾ, ಸಿಂಗಾಪುರ, ಸೆಪ್‌ಲೂನಾ, ಯೋಹಾನ್, ಇಥಿಯೋಪಿಯಾ, ಮೆಕ್ಸಿಕೋ, ದಕ್ಷಿಣ ಆಫ್ರಿಕಾ, ಮಲವಿ, ಪೆರು, ನ್ಯೂಜಿಲ್ಯಾಂಡ್, ಅಮೆರಿಕ, ಇಂಗ್ಲೆಂಡ್, ಮಾರಿಷಸ್, ಸ್ವಿಟ್ಜರ್‌ಲ್ಯಾಂಡ್, ಜಾಂಬಿಯಾ, ಅರ್ಜೆಂಟಿನಾ, ಜೆಕೊಸ್ಲೋವಾಕಿಯಾ, ವಿಯೆಟ್ನಾಂ, ನೇಪಾಳ, ಕುವೈತ್, ಉಕ್ರೇನ್, ಭೂತಾನ್, ಚೀನಾ, ಒಮನ್, ಬೋಟ್ಸನ್, ಬಾಂಗ್ಲಾದೇಶ, ಅಂಗೋಲಾ ಸೇರಿದಂತೆ ಹಲವು ದೇಶಗಳ ನೋಟುಗಳು ಇವರ ಸಂಗ್ರಹದಲ್ಲಿದೆ.

ನನಗೆ ಮೊದಲಿನಿಂದಲೂ ಬೇರೆ ಬೇರೆ ದೇಶಗಳ ನೋಟು ಸಂಗ್ರಹಿಸುವ ಹವ್ಯಾಸ ರೂಢಿಸಿಕೊಂಡಿದ್ದೇನೆ. ನನ್ನ ಸ್ನೇಹಿತರು ಹೊರದೇಶಗಳಲ್ಲಿ ಇದ್ದು ಅವರು ಊರಿಗೆ ಬಂದಾಗ ಅವರಿಂದ ಕಾಡಿ ಬೇಡಿ ಸಂಗ್ರಹಿಸಿದ್ದೇನೆ.
ಮುಹ್ಮದಝಕರಿಯಾ ಅತ್ತಾರ, ವಿದೇಶಿ ನೋಟು ಸಂಗ್ರಹಕಾರ

ಈಚೆಗೆ ಅಂಗಡಿಗೆ ಜ್ಯೂಸ್ ಕುಡಿಯಲು ಬಂದಾಗ ಈ ವಿದೇಶಿ ನೋಟುಗಳ ಸಂಗ್ರಹ ಕಂಡು ಆಶ್ಚರ್ಯಚಕಿತರಾದ ಶಿಕ್ಷಕಿಯೊಬ್ಬರು ಶಾಲಾ ಮಕ್ಕಳನ್ನು ಕರೆತಂದು ನೋಟುಗಳ ಪರಿಚಯಿಸಿದ್ದಾರೆ. ವಿದ್ಯಾರ್ಥಿಗಳಿಗೆ ದೇಶವಿದೇಶಗಳ ಅರಿವನ್ನು ಒದಗಿಸಲು ಈ ನೋಟುಗಳ ಸಂಗ್ರಹ ಹೊಸ ನೋಟ ಒದಗಿಸಿದೆ.

ಹವ್ಯಾಸ ಬೆಳೆದಿದ್ದು ಹೀಗೆ

ಪಟ್ಟಣದಲ್ಲಿ ತಂಪು ಪಾನೀಯಗಳ ಅಂಗಡಿ ನಡೆಸುತ್ತಿರುವ ಮುಹಮ್ಮದ ಝಕರಿಯಾ ಅತ್ತಾರ ಬಾಲ್ಯದಿಂದಲೂ ಬೇರೆ ಬೇರೆ ದೇಶಗಳ ನೋಟುಗಳನ್ನು ಸಂಗ್ರಹಿಸುವ ಆಸಕ್ತಿ ಹೊಂದಿದ್ದರು. ಬೇರೆ ಬೇರೆ ದೇಶಗಳಲ್ಲಿರುವ ಇವರ ಸ್ನೇಹಿತರು ಊರಿಗೆ ಬಂದಾಗ ಹೊಸ ಹೊಸ ದೇಶಗಳ ನೋಟುಗಳಿದ್ದರೆ ಇವರಿಗೆ ಕೊಟ್ಟು ಹೋಗುತ್ತಾರೆ. ಕೆಲವರು ಏನೂ ಅಪೇಕ್ಷಿಸದೆ ಕೊಟ್ಟಿದ್ದರೆ, ಕೆಲವರಿಗೆ ಹಣ ಕೊಟ್ಟು ವಿದೇಶಿ ನೋಟುಗಳನ್ನು ಅತ್ತಾರ ಸಂಗ್ರಹಿಸಿದ್ದಾರೆ. ವಿಶೇಷವಾಗಿ ಬೇರೆ ದೇಶಗಳ ನಾಣ್ಯಗಳನ್ನೂ ಸಂಗ್ರಹಿಸಿದ್ದಾರೆ.

‘ನನ್ನಂತೆ ಫಿನ್‌ಲೆಂಡ್‌ನ ಐಟಿ ಕಂಪನಿಯಲ್ಲಿ ಕೆಲಸ ಮಾಡುವ ನನ್ನ ಸ್ನೇಹಿತನಿಗೆ 1960-70ರ ದಶಕದ ನೋಟನ್ನು 30 ಯುರೋ ಕೊಟ್ಟು ವಿನಿಮಯ ಮಾಡಿಕೊಂಡಿದ್ದರು. ವಿದೇಶಿಯ ನೋಟುಗಳು ಪ್ಲಾಸ್ಟಿಕ್‌ನಿಂದ ತಯಾರಿಸಲಾಗಿದ್ದು, ಬೇಗನೇ ಹರಿಯುವುದಿಲ್ಲ. ಜೆಕೊಸ್ಲೋವಾಕಿಯಾದ ಒಂದು ನೋಟು 50 ಲಕ್ಷ ದಿನಾರ (ಅಲ್ಲಿನ ಕರೆನ್ಸಿ) ಇದ್ದರೂ ಅದು ಭಾರತದ ರೂಪಾಯಿಗೆ ಅತ್ಯಂತ ಕಡಿಮೆ ಮೌಲ್ಯವನ್ನು ಹೊಂದಿದೆ. ಅಲ್ಲಿ ಒಂದು ಪ್ಲೇಟ್ ಉಪ್ಪಿಟ್ಟು ತಿಂದರೆ 10- 20 ಸಾವಿರ ದಿನಾರ ಪಾವತಿಸಬೇಕಾಗುತ್ತದೆ ಎನ್ನುತ್ತಾರೆ ಮುಹ್ಮದ ಝಕರಿಯಾ ಅತ್ತಾರ.

ಮುಹ್ಮದ ಝಕರಿಯಾ ಅತ್ತಾರ
ಜೆಕೋಸ್ಲೋವಾಕಿಯಾದ 50 ಲಕ್ಷ ದಿನಾರ ಇಂಡೋನೇಷ್ಯಾದ 20000 ರುಫೈ ನೋಟು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.