ADVERTISEMENT

ವಕ್ಫ್ ಆಸ್ತಿ ಖಾತೆ ಬದಲಾವಣೆ ತಿಂಗಳೊಳಗೆ ಪೂರ್ಣಗೊಳಿಸಿ

ವಕ್ಫ್ ಇಲಾಖೆ ಪ್ರಗತಿ ಪರಿಶೀಲನಾ ಸಭೆ: ಸಚಿವ ಜಮೀರ್‌ ಅಹ್ಮದ್‌ ಖಾನ್‌ ಸೂಚನೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2024, 16:04 IST
Last Updated 8 ಅಕ್ಟೋಬರ್ 2024, 16:04 IST
ವಿಜಯಪುರ ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ವಕ್ಫ್ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಮಾತನಾಡಿದರು. ಸಚಿವ ಶಿವಾನಂದ ಪಾಟೀಲ, ಶಾಸಕ ವಿಠ್ಠಲ ಕಟಕದೊಂಡ ಇದ್ದಾರೆ
ವಿಜಯಪುರ ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ವಕ್ಫ್ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಮಾತನಾಡಿದರು. ಸಚಿವ ಶಿವಾನಂದ ಪಾಟೀಲ, ಶಾಸಕ ವಿಠ್ಠಲ ಕಟಕದೊಂಡ ಇದ್ದಾರೆ   

ವಿಜಯಪುರ: ವಕ್ಫ್ ಆಸ್ತಿ ಖಾತೆ ಬದಲಾವಣೆಯಲ್ಲಿ ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ವಿಜಯಪುರದಲ್ಲಿ ಪ್ರಗತಿ ಕುಂಠಿತವಾಗಿದೆ. ಸಂಬಂಧಿಸಿದ ಅಧಿಕಾರಿಗಳು ಒಂದು ತಿಂಗಳೊಳಗೆ ವಕ್ಫ್ ಖಾತೆ ಬದಲಾವಣೆ, ಫ್ಲ್ಯಾಗಿಂಗ್  ಸೇರಿದಂತೆ ಸೂಕ್ತ ಪ್ರಗತಿ ಸಾಧಿಸಬೇಕು ಎಂದು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಸೂಚಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ವಕ್ಫ್ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ‘ಜಿಲ್ಲೆಯಾದ್ಯಂತ 2,148 ಆಸ್ತಿಗಳ ಪೈಕಿ 109 ಆಸ್ತಿಗಳಿಗೆ ಮಾತ್ರ ಖಾತೆ ಬದಲಾವಣೆ ಮಾಡಲಾಗಿದೆ. 2,039 ಖಾತೆ ಬದಲಾವಣೆ ಬಾಕಿ ಇದೆ. ಕೇವಲ ಶೇ 5 ಮಾತ್ರ ಪ್ರಗತಿ ಸಾಧಿಸಲಾಗಿದೆ’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ವಕ್ಫ್ ಆಸ್ತಿಗಳಿಗೆ ಸಂಬಂಧಿಸಿ ಒಟ್ಟು 109 ಖಾತೆ ಬದಲಾವಣೆಯಾಗಿದ್ದರೂ, 108 ಆಸ್ತಿಗಳ ಫ್ಲ್ಯಾಗಿಂಗ್ ಹಾಗೆ ಬಾಕಿ ಉಳಿದಿದೆ. ಖಾತೆ ಬದಲಾವಣೆಯ ನಂತರ ಫ್ಲ್ಯಾಗಿಂಗ್ ಮಾಡಲು ಸಮಸ್ಯೆ ಇರುವುದಿಲ್ಲ. ಇದು ಸಂಪೂರ್ಣ ಅಧಿಕಾರಿಗಳ ನಿರ್ಲಕ್ಷ್ಯ ಎತ್ತಿ ತೋರಿಸುತ್ತಿದೆ’ ಎಂದರು.

ADVERTISEMENT

‘ಮುಖ್ಯಮಂತ್ರಿಗಳ ಆದೇಶದಂತೆ ನಾನು ರಾಜ್ಯದಾದ್ಯಂತ ಪ್ರವಾಸ ಕೈಗೊಂಡು ವಕ್ಫ್‌ ಅದಾಲತ್‍ಗಳನ್ನು ನಡೆಸುತ್ತಿದ್ದೇನೆ. ನಾನು ನಾಮಕೇ ವಾಸ್ತೆ ಆದಾಲತ್‍ ಮಾಡುತ್ತಿಲ್ಲ. ಅದಾಲತ್‍ನಿಂದ ಜನರಲ್ಲಿ ತಿಳಿವಳಿಕೆ- ಜಾಗೃತಿ ಮೂಡುತ್ತಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ದೊರಕಿಸುವ ಉದ್ದೇಶದಿಂದ ಅದಾಲತ್‍ ನಡೆಸುತ್ತಿರುವೆ’ ಎಂದರು.

‘ವಿಜಯಪುರದಲ್ಲಿ ಸೋಮವಾರ ನಡೆದ ವಕ್ಫ್ ಅದಾಲತ್‍ನಲ್ಲಿ ಖಬರಸ್ತಾನ (ಸ್ಮಶಾನ) ಜಾಗ ಕುರಿತು 83 ಅರ್ಜಿಗಳು ಬಂದಿದೆ. ವಕ್ಫ್ ಆಸ್ತಿಗಳ ಅತಿಕ್ರಮಣಕ್ಕೆ ಸಂಬಂಧಿಸಿ 17, ಖಾತೆ ಬದಲಾವಣೆಯ 81, ಸರ್ವೆ ಕಾರ್ಯಕ್ಕಾಗಿ 25 ಅರ್ಜಿ ಸೇರಿದಂತೆ ವಿವಿಧ ಒಟ್ಟು 330 ಅರ್ಜಿಗಳು ಸಲ್ಲಿಕೆಯಾಗಿವೆ’ ಎಂದರು. 

‘ತಾಲ್ಲೂಕುಗಳಲ್ಲಿ ಅವಶ್ಯಕವಿರುವ ಸ್ಮಶಾನ ಜಮೀನಿಗೆ ಸಂಬಂಧಿಸಿ ಸೂಕ್ತ ಪರಿಶೀಲನೆ ನಡೆಸಿ, ಸರ್ಕಾರಿ ಜಾಗ ಲಭ್ಯವಿಲ್ಲದಿದ್ದಲ್ಲಿ ಖಾಸಗಿ ಜಮೀನು ಖರೀದಿ ಮಾಡಿ, ಸ್ಮಶಾನಕ್ಕೆ ಜಮೀನು ಒದಗಿಸುವಂತೆ ಅವರು ಸೂಚಿಸಿದರು.

‘ಖಾಸಗಿ ಜಮೀನು ಖರೀದಿಯಲ್ಲಿ ಅನುದಾನದ ಸಮಸ್ಯೆಗಳು ಬಂದಲ್ಲಿ ನನ್ನ ಗಮನಕ್ಕೆ ತನ್ನಿ, ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸೂಕ್ತ ಪರಿಹಾರ ಕಲ್ಪಿಸಲು ಕ್ರಮ ವಹಿಸಲಾಗುವುದು’ ಎಂದು ಜಿಲ್ಲಾಧಿಕಾರಿಗೆ ತಿಳಿಸಿದರು.

ಜವಳಿ ಮತ್ತು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರು, ಬಸವನಬಾಗೇವಾಡಿ ಮತಕ್ಷೇತ್ರದ ಹುಣಶ್ಯಾಳ-ದೇವರಗೆಣ್ಣೂರ ಗ್ರಾಮದ ಸ್ಮಶಾನ ಜಾಗದ ಕುರಿತು ಅಧಿಕಾರಿಗಳಿಗೆ ಮಾಹಿತಿ ಕೇಳುತ್ತಿದ್ದಂತೆ, ಅಧಿಕಾರಿಗಳು ಸೋಮವಾರ ಪ್ರಸ್ತಾವ ಸಲ್ಲಿಸಿದ್ದಾಗಿ ಉತ್ತರಿಸಿದರು. ಅದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ವಕ್ಫ್ ಖಾತೆ ಸಚಿವರು ಬರುತ್ತಿದ್ದಾರೆ ಎಂದು ಪ್ರಸ್ತಾವ ಸಲ್ಲಿಸುವುದು ಸಮಂಜಸವಲ್ಲ. ಕೂಡಲೇ ಸ್ಮಶಾನಕ್ಕೆ ಜಾಗ ಒದಗಿಸಲು ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ, ವಿಧಾನ ಪರಿಷತ್ ಸದಸ್ಯ ಅಬ್ದುಲ್‌ ಜಬ್ಬಾರ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಅನ್ವರ ಬಾಶಾ, ಜಿಲ್ಲಾಧಿಕಾರಿ ಟಿ.ಭೂಬಾಲನ್, ಜಿಲ್ಲಾ ಪಂಚಾಯಿತಿ ಸಿಇಒ ರಿಷಿ ಆನಂದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ, ವಿವಿಧ ಅಧಿಕಾರಿಗಳು ಇದ್ದರು.

ವಿಜಯಪುರ ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ವಕ್ಫ್ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದ ಜಿಲ್ಲಾ ಮಟ್ಟದ ಅಧಿಕಾರಿಗಳು

ಅಧಿಕಾರಿಗಳ ಅಮಾನತಿಗೆ ಸೂಚನೆ

ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಶಾಸಕರು ಸಚಿವರು ನಡೆಸುವ ಕೆಡಿಪಿ ಸಭೆಗಳಿಗೆ ಗೈರು ಹಾಜರಾಗುವ ಅಧಿಕಾರಿಗಳನ್ನು ಮುಲಾಜಿಲ್ಲದೇ ಅಮಾನತುಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಟಿ. ಭೂಬಾಲನ್‌ ಅವರಿಗೆ ಸಚಿವ ಜಮೀರ್‌ ಅಹ್ಮದ್‌ ಸೂಚಿಸಿದರು. ಇಂದಿನ ವಕ್ಫ್ ಇಲಾಖೆ ಪ್ರಗತಿ ಪರಿಶೀಲನಾ ಸಭೆಗೆ ಗೈರು ಹಾಜರಾಗಿರುವ ಸಿಂದಗಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿಯನ್ನು ಅಮಾನತುಗೊಳಿಸುವಂತೆ ಸೂಚಿಸಿದರು.

ರಸ್ತೆ ನೋಡಿ ಹೊಟ್ಟೆ ಉರಿಯುತ್ತದೆ

ವಿಜಯಪುರ ನಗರದಲ್ಲಿ ರಸ್ತೆಗಳು ಹದಗೆಟ್ಟಷ್ಟು ರಾಜ್ಯದಲ್ಲಿಯೇ ಎಲ್ಲೂ ಇಲ್ಲ. ಆಯುಕ್ತರೇ ನಗರದಲ್ಲಿನ ರಸ್ತೆಯಲ್ಲಿ ಅಡ್ಡಾಡಿದ್ದೀರಾ? ನಗರದಲ್ಲಿನ ಒಂದು ರಸ್ತೆಯೂ ಸರಿ ಸುಸಜ್ಜಿತವಾಗಿಲ್ಲ.  ಇಂಥ ರಸ್ತೆಗಳನ್ನು ನೋಡಿದರೆ ಹೊಟ್ಟೆ ಉರಿಯುತ್ತದೆ ಎಂದು ಸಚಿವ ಜಮೀರ್‌ ಅಹ್ಮದ್‌ ಖಾನ್‌ ವಿಜಯಪುರ ಮಹಾನಗರ ಪಾಲಿಕೆ ಆಯುಕ್ತರನ್ನು ತರಾಟೆಗೆ ತಗೆದುಕೊಂಡರು. ‘ಕೆಲ ದಿನಗಳ ಹಿಂದೆ ವಿಜಯಪುರದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಕೆಲ ರಸ್ತೆ ಹದಗೆಟ್ಟಿದೆ ಎಂದರೆ ಒಂದು ಅರ್ಥವಿರುತ್ತದೆ. ಜಿಲ್ಲೆಯ ಎಲ್ಲ ರಸ್ತೆಗಳೂ ಹದಗೆಟ್ಟಿವೆ. ಜನ ಸಾಮಾನ್ಯರು ನಮ್ಮಿಂದ ಹೆಚ್ಚಿಗೆ ಏನು ಬಯಸುವುದಿಲ್ಲ. ಕನಿಷ್ಠ ಅವರಿಗೆ ರಸ್ತೆ ಕುಡಿಯುವ ನೀರು ವಿದ್ಯುತ್‌ ಚರಂಡಿ ವ್ಯವಸ್ಥೆ ಕಲ್ಪಿಸಿ’ ಎಂದು ಸೂಚಿಸಿದರು. ‘ನಗರ ಶಾಸಕರು ಬಹಿರಂಗ ಕಾರ್ಯಕ್ರಮಗಳಲ್ಲಿಯೇ ಬುರ್ಖಾ ಹಾಕಿಕೊಂಡವರು ಬರಬೇಡಿ ಎನ್ನುತ್ತಾರೆ. ಸಾಮಾನ್ಯ ಜನರು ಎಲ್ಲಿಗೆ ಹೋಗಬೇಕು. ಅಂಥ ಜನರು ಸರ್ಕಾರದ ಮೇಲೆ ಅವಲಂಬಿಸಿದ್ದಾರೆ. ಅಂಥವರಿಗೆ ನಾವು ನೆರವಾಗಬೇಕು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.