ADVERTISEMENT

ಎಸ್ಸೆಸ್ಸೆಲ್ಸಿ ಪರೀಕ್ಷೆ ಎಚ್ಚರಿಕೆಯಿಂದ ನಡೆಸಿ: ಡಿಡಿಪಿಐ

‘ಪ್ರಜಾವಾಣಿ ಫೋನ್ ಇನ್ ಕಾರ್ಯಕ್ರಮ’ ವರದಿ ಪ್ರಶಂಸಿದ ತಹಶೀಲ್ದಾರ್‌

​ಪ್ರಜಾವಾಣಿ ವಾರ್ತೆ
Published 18 ಜೂನ್ 2020, 15:41 IST
Last Updated 18 ಜೂನ್ 2020, 15:41 IST
ಸಿಂದಗಿಯಲ್ಲಿ ಗುರುವಾರ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆ ಪೂರ್ವಭಾವಿ ಸಭೆಯಲ್ಲಿ ಪ್ರಜಾವಾಣಿ ಫೋನ್ ಇನ್ ಕಾರ್ಯಕ್ರಮದ ವಿಸ್ತೃತ ವರದಿ ಪ್ರಕಟಗೊಂಡ ಪ್ರತಿಗಳನ್ನು ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರಿಗೆ ಡಿಡಿಪಿಐ ಸಿ.ಪ್ರಸನ್ನಕುಮಾರ ವಿತರಿಸಿದರು
ಸಿಂದಗಿಯಲ್ಲಿ ಗುರುವಾರ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆ ಪೂರ್ವಭಾವಿ ಸಭೆಯಲ್ಲಿ ಪ್ರಜಾವಾಣಿ ಫೋನ್ ಇನ್ ಕಾರ್ಯಕ್ರಮದ ವಿಸ್ತೃತ ವರದಿ ಪ್ರಕಟಗೊಂಡ ಪ್ರತಿಗಳನ್ನು ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರಿಗೆ ಡಿಡಿಪಿಐ ಸಿ.ಪ್ರಸನ್ನಕುಮಾರ ವಿತರಿಸಿದರು   

ಸಿಂದಗಿ: ಜೂನ್ 25 ರಿಂದ ಪ್ರಾರಂಭಗೊಳ್ಳುವ ಎಸ್ಸೆಸ್ಸೆಲ್ಸಿ ಪರೀಕ್ಷೆ ತುಂಬಾ ಎಚ್ಚರಿಕೆಯಿಂದ ನಡೆಸಬೇಕು. ಸಿಬ್ಬಂದಿ ಹಿಂದಿನಂತೆ ಪರೀಕ್ಷಾ ಪ್ರಕ್ರಿಯೆ ಎಂದು ನಡೆಸಿದರೆ ಸಾಲದು. ವಿದ್ಯಾರ್ಥಿಗಳ ಸುರಕ್ಷತೆ ತುಂಬಾ ಮುಖ್ಯವಾದುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ಪ್ರಸನ್ನಕುಮಾರ ಹೇಳಿದರು.

ಇಲ್ಲಿಯ ಪದ್ಮರಾಜ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯ ಸಭಾಭವನದಲ್ಲಿ ಗುರುವಾರ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರಶಿಕ್ಷಣಾಧಿಕಾರಿಗಳ ಕಾರ್ಯಾಲಯ ಏರ್ಪಡಿಸಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

‘ಪ್ರಜಾವಾಣಿ’ ಫೋನ್ ಇನ್ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಪೋಷಕರಿಗೆ ಭರವಸೆ ನೀಡಿದ್ದೇನೆ. ಈ ಭರವಸೆಯನ್ನು ಉಳಿಸಿಕೊಳ್ಳುವ ದಿಸೆಯಲ್ಲಿ ಪರೀಕ್ಷಾ ಸಿಬ್ಬಂದಿ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು. ಪರಿಶುದ್ಧ, ಆರೋಗ್ಯಕರ, ಶಿಸ್ತು, ನಕಲುಮುಕ್ತ ಪರೀಕ್ಷೆ ನಡೆಯಬೇಕು ಎಂದು ಕೇಳಿಕೊಂಡರು.

ADVERTISEMENT

ಪರೀಕ್ಷಾ ಕೊಠಡಿಯಲ್ಲಿ ಅಹಿತಕರ ಘಟನೆ ನಡೆದರೆ ಮುಖ್ಯ ಆಧಿಕ್ಷಕರ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ಅಂತವರಿಗೆ 3ರಿಂದ5 ವರ್ಷದ ಶಿಕ್ಷೆ ಕಟ್ಟಿಟ್ಟ ಬುತ್ತಿ. ಪ್ರಶ್ನೆಪತ್ರಿಕೆ ಬಗ್ಗೆ ತುಂಬಾ ಜವಾಬ್ದಾರಿ ವಹಿಸಬೇಕು ಎಂದು ತಿಳಿಸಿದರು.

ತಹಶೀಲ್ದಾರ್‌ ಸಂಜೀವಕುಮಾರ ದಾಸರ, ಪ್ರಸ್ತುತ ಪರೀಕ್ಷೆ ಎಲ್ಲರಿಗೂ ಒಂದು ಸವಾಲು. ಇದರಲ್ಲಿ ಗೆದ್ದು ಬರಬೇಕಿದೆ ಎಂದರು.

ಪೊಲೀಸ್ ಇನ್‌ಸ್ಪೆಕ್ಟರ್ ಸತೀಶಕುಮಾರ ಕಾಂಬಳೆ, ಕೆಲವು ಪರೀಕ್ಷಾ ಕೇಂದ್ರಗಳಲ್ಲಿ ವ್ಯಾಪಕ ನಕಲು ನಡೆಯುತ್ತಿರುವ ಬಗ್ಗೆ ಸೂಚನೆ ಇದೆ. ಈ ಸಲ ಸಂಪೂರ್ಣ ನಕಲುಮುಕ್ತ ಪರೀಕ್ಷೆ ನಡೆಯಬೇಕು ಎಂದರು.

ಬಿಇಒ ಎಚ್.ಎಸ್.ನಗನೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಮಾಸ್ಕ್ ಮತ್ತು ಸಾನಿಟೈಸರ್ ವಿತರಣಾ ಕಾರ್ಯಕ್ರಮ ನಡೆಯಿತು.

ದೇವರಹಿಪ್ಪರಗಿ ತಹಶೀಲ್ದಾರ್‌ ವೈ.ಬಿ.ನಾಗಠಾಣ, ತಾಲ್ಲೂಕು ಪಂಚಾಯ್ತಿ ಇಒ ಸುನೀಲ ಮದ್ದಿನ, ಕ್ಷೇತ್ರ ಸಮನ್ವಾಯಾಧಿಕಾರಿ ಸಂತೋಷಕುಮಾರ ಬೀಳಗಿ, ದೈಹಿಕ ಶಿಕ್ಷಣಾಧಿಕಾರಿ ಎ.ಎಂ.ಬಿರಾದಾರ, ಸುದೀರ ಕಮತಗಿ ಇದ್ದರು. ಆನಂದ ಮಾಡಗಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.