ADVERTISEMENT

ಹೊಸ ಶಿಕ್ಷಣ ನೀತಿಯಲ್ಲಿ ಗೌಪ್ಯ ಬ್ರಾಹ್ಮಣವಾದ: ಪ್ರಗತಿಪರ ಚಿಂತಕ ವಕೀಲ ಕುಮಾರ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2022, 15:31 IST
Last Updated 9 ಏಪ್ರಿಲ್ 2022, 15:31 IST
ಆಲಮಟ್ಟಿಯ ಸಮುದಾಯ ಭವನದಲ್ಲಿ ನಡೆಯುತ್ತಿರುವ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳ ಅಧ್ಯಯನ ಶಿಬಿರದಲ್ಲಿ ಪ್ರಗತಿಪರ ಚಿಂತಕ ಕುಮಾರ ಮಾತನಾಡಿದರು. ಆನಂದ ಬೆಳ್ಳಾರೆ, ಕೆಂಪಣ್ಣ ಸಾಗ್ಯ ಇದ್ದಾರೆ
ಆಲಮಟ್ಟಿಯ ಸಮುದಾಯ ಭವನದಲ್ಲಿ ನಡೆಯುತ್ತಿರುವ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳ ಅಧ್ಯಯನ ಶಿಬಿರದಲ್ಲಿ ಪ್ರಗತಿಪರ ಚಿಂತಕ ಕುಮಾರ ಮಾತನಾಡಿದರು. ಆನಂದ ಬೆಳ್ಳಾರೆ, ಕೆಂಪಣ್ಣ ಸಾಗ್ಯ ಇದ್ದಾರೆ   

ಆಲಮಟ್ಟಿ(ವಿಜಯಪುರ):ಹೊಸ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ ಇಪಿ)ಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಬ್ರಾಹ್ಮಣವಾದವನ್ನು ಗೌಪ್ಯವಾಗಿ ಹೇರುತ್ತಿದೆ ಎಂದು ಚನ್ನಪಟ್ಟಣದ ಪ್ರಗತಿಪರ ಚಿಂತಕ ವಕೀಲ ಕುಮಾರ ಅಭಿಪ್ರಾಯಪಟ್ಟರು.

ಆಲಮಟ್ಟಿಯಲ್ಲಿ ನಡೆಯುತ್ತಿರುವ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳ ರಾಜ್ಯ ಮಟ್ಟದ ಅಧ್ಯಯನ ಶಿಬಿರದ ನಾಲ್ಕನೇ ಗೋಷ್ಠಿ ‘ಹೊಸ ಶಿಕ್ಷಣ ನೀತಿ ಮೂಲಕ ಬ್ರಾಹ್ಮಣವಾದ ಮತ್ತು ಉನ್ನತ ಶಿಕ್ಷಣದಲ್ಲಿ ದಲಿತರ ಸ್ಥಿತಿಗತಿಗಳು’ ಗೋಷ್ಠಿಯಲ್ಲಿ ಅವರು ಮಾತನಾಡಿದರು.

ನಯ ನಾಜೂಕಿನಲ್ಲಿ ಈ ಅಂಶವನ್ನು ಸೇರಿಸಲು ಪ್ರಾಥಮಿಕ ಹಂತದಿಂದಲೂ ಅನುಷ್ಠಾನಗೊಳಿಸಲು ಸಿದ್ಧವಾಗಿದೆ ಎಂದರು.

ADVERTISEMENT

ಉತ್ತರ ಪ್ರದೇಶದಲ್ಲಿ ಅಲ್ಲಿನ ಸರ್ಕಾರ ಹೊಸ ಶಿಕ್ಷಣ ನೀತಿ ಜಾರಿಗೆ ತಂದು ಎರಡು ವರ್ಷ ಕಳೆದಿದೆ. ಈಗ ಅದೇ ಮಾದರಿಯಲ್ಲಿ ರಾಷ್ಟ್ರಾದ್ಯಂತ ಜಾರಿಗೆ ತರಲು ಯಾವುದೇ ಸಿದ್ಧತೆಗಳಿಲ್ಲದೇ, ಸಂಸತ್ತಿನಲ್ಲಿ ವಿಸ್ತೃತ ಚರ್ಚೆಯಾಗದೇ ಜಾರಿಗೆ ತರಲಾಗುತ್ತಿದೆ ಎಂದರು.

ದೇಶಾದ್ಯಂತ 1200 ಕ್ಕೂ ಅಧಿಕ ಐಎಎಸ್ ಅಧಿಕಾರಿಗಳಿಗೆ ಅಗತ್ಯ ತರಬೇತಿ ನೀಡಿ ಎನ್‌ಇಪಿಯನ್ನು ತರಾತುರಿಯಲ್ಲಿ ಜಾರಿಗೆ ತರಲು ಆರಂಭಗೊಂಡಿದೆ. ಇದರಿಂದ ಸ್ಥಳೀಯ ಭಾಷೆ ಕೂಡಾ ನಾಶವಾಗಲಿದ್ದು, ಹಿಂದಿ ಭಾಷೆ ಪ್ರಾಮುಖ್ಯತೆ ಪಡೆಯಲಿದೆ. ಇದು ಬ್ರಾಹ್ಮಣವಾದಿಗಳ ಕುತಂತ್ರ ಎಂದರು.

ಬಹುಸಂಸ್ಕೃತಿಯ ಶೈಲಿಯೂ ನಾಶವಾಗಲಿದೆ. ಹಂತ ಹಂತವಾಗಿ ಸಂವಿಧಾನದ ಆಶಯಗಳಾದ ಜ್ಯಾತ್ಯತೀತ, ಸಮಾನತೆ ಎಂಬ ಅಂಶಗಳೇ ಮಾಯವಾಗುತ್ತವೆ. ಈ ಕಾಯ್ದೆಯ ಅನುಮೋದನೆ ಪಡೆಯುವಾಗ ಸಂಸತ್ ನಲ್ಲಿ ಚರ್ಚೆಯಾಗಲಿಲ್ಲ ಎಂದರು.

ಸಾರ್ವಜನಿಕ ವಲಯಗಳನ್ನು ಖಾಸಗಿಕರಣಗೊಳಿಸಿ ಮೀಸಲಾತಿಯನ್ನು ಹಂತ ಹಂತವಾಗಿ ಗೌಣ ಮಾಡುವುದು ಕೂಡಾ ಇದರ ಹಿಂದಿರುವ ಇನ್ನೊಂದು ಉದ್ದೇಶ ಎಂದರು.

ದಲಿತರಿಗೆ ಉನ್ನತ ಶಿಕ್ಷಣದಲ್ಲಿ ನೀಡುತ್ತಿರುವ ವಿದ್ಯಾರ್ಥಿ ವೇತನ ಈಗ ಕಡಿಮೆಯಾಗಿದೆ ಎಂದು ಅವರು ಆರೋಪಿಸಿದರು.

ದಲಿತ ವರ್ಗದ ವಿದ್ಯಾರ್ಥಿಗಳಿಗೆ ಪದವಿ ಶಿಕ್ಷಣ ಗಗನ ಕುಸುಮವಾಗಲಿದೆ ಎಂದರು.

ಬಲಾಡ್ಯ ಜನಾಂಗ ಹಾಗೂ ಬಲಾಡ್ಯ ಮಠಗಳ ಆಧೀನದಲ್ಲಿ ವೈದ್ಯಕೀಯ, ಎಂಜಿನಿಯರಿಂಗ್ ಅಂತಹ ಕಾಲೇಜುಗಳಿವೆ, ಇಲ್ಲೆಲ್ಲ ದಲಿತರನ್ನು ಸಂಪೂರ್ಣವಾಗಿ ತುಳಿಯಲಾಗುತ್ತಿದೆ, ತುಮಕೂರು, ಬೆಂಗಳೂರಿನಲ್ಲಿ ದಲಿತರ ಶಿಕ್ಷಣ ಸಂಸ್ಥೆಗಳಿದ್ದರೂ ಅವು ಬಂಡವಾಳಶಾಹಿಗಳ ಆಧೀನದಲ್ಲಿವೆ ಎಂದು ಅವರು ವಿಷಾದಿಸಿದರು.

ದೇಶದಲ್ಲಿ ಶೇ 3 ರಷ್ಟು ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಬ್ರಾಹ್ಮಣ ಸಮುದಾಯದ123 ಜನ ಲೋಕಸಭಾ ಸದಸ್ಯರಿದ್ದಾರೆ. ದಲಿತರಿಗೆ ಮೀಸಲಾತಿ ಇಲ್ಲದಿದ್ದರೇ ಲೋಕಸಭೆಯಲ್ಲಿ ಒಬ್ಬರೂ ದಲಿತರೂ ಇರುತ್ತಿರಲಿಲ್ಲ ಎಂದರು.

ಆನಂದ ಬೆಳ್ಳಾರೆ ಅಧ್ಯಕ್ಷತೆ ವಹಿಸಿದ್ದರು. ಕೆಂಪಣ್ಣ ಸಾಗ್ಯ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.