ADVERTISEMENT

ಎಂ.ಬಿ.ಪಾಟೀಲ ಸೋಲಿಸಲು ಕಾಂಗ್ರೆಸಿಗರೇ ಸಜ್ಜು: ಯತ್ನಾಳ

ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸ್ಪೋಟಕ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2022, 12:41 IST
Last Updated 4 ಡಿಸೆಂಬರ್ 2022, 12:41 IST
ಬಸನಗೌಡ ಪಾಟೀಲ ಯತ್ನಾಳ
ಬಸನಗೌಡ ಪಾಟೀಲ ಯತ್ನಾಳ   

ವಿಜಯಪುರ: ‘ಜಿಲ್ಲೆಯಲ್ಲಿರುವ ಇಬ್ಬರು ಕಾಂಗ್ರೆಸ್‌ ಶಾಸಕರೇ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲರನ್ನು ಸೋಲಿಲು ಸಜ್ಜಾಗಿದ್ದಾರೆ.ಈ ಸಂಬಂಧ ಬಬಲೇಶ್ವರದಲ್ಲಿ ಅಡ್ಡಾಡುತ್ತಿದ್ದಾರೆ. ನಮ್ಮ ಪಕ್ಷಕ್ಕೆ ಸಹಾಯ ಮಾಡುತ್ತಿದ್ದಾರೆ’ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸ್ಪೋಟಕ ಹೇಳಿಕೆ ನೀಡಿದ್ದಾರೆ.

ವಿಜಯಪುರದಲ್ಲಿ ಯತ್ನಾಳ ಅವರನ್ನು ಈ ಬಾರಿ ಹೇಗೆ ಗೆಲ್ಲುತ್ತಾರೆ ನೋಡುತ್ತೇನೆ ಎಂಬ ಎಂ.ಬಿ.ಪಾಟೀಲರ ಹೇಳಿಕೆಗೆನಗರದಲ್ಲಿ ಭಾನುವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ‘ಎಂ.ಬಿ.ಪಾಟೀಲ ಅವರ ರೀತಿ ಸೋಲಿಸಿಯೇ ತೀರುತ್ತೇನೆ ಎಂದು ನಾನು ಹೇಳಲ್ಲ. ಅವರನ್ನು ಕಾಂಗ್ರೆಸ್‌ ಪಕ್ಷದವರೇ ಸೋಲಿಸಲು ಅಣಿಯಾಗಿದ್ದಾರೆ. ಹೀಗಾಗಿ ‘ಯಲ್ಲಮ್ಮನ ಗುಡ್ಡದಾಗ ಮುಲ್ಲಾನದ್ದು ಏನು ಕೆಲಸ’ ಎಂಬಂತಾಗಿದೆ. ಅವರನ್ನು ಸೋಲಿಸಲು ನಾನು ಏನೂ ಮಾಡುವ ಅಗತ್ಯ ಇಲ್ಲ’ ಎಂದು ಮಾರ್ಮಿಕವಾಗಿ ಹೇಳಿದರು.

‘ಎಂ.ಬಿ.ಪಾಟೀಲರು ನನ್ನನ್ನು ಸೋಲಿಸಬೇಕು ಎನ್ನುತ್ತಾರೆ, ನಾನು ಎಂ.ಬಿ.ಪಾಟೀಲರನ್ನು ಸೋಲಿಸಬೇಕು ಎನ್ನುತ್ತೇನೆ.ನಾನೇನು ಕಾಂಗ್ರೆಸಿಗನಲ್ಲ, ಅವರೇನು ಬಿಜೆಪಿಗರಲ್ಲ, ನಾನು ನನ್ನ ಪಕ್ಷದ ಪರ ಕೆಲಸ ಮಾಡುತ್ತೇನೆ. ಅವರು ಅವರ ಪಕ್ಷದ ಪರ ಕೆಲಸ ಮಾಡುತ್ತಾರೆ.ರಾಜಕೀಯ ಇಷ್ಟೇ ಇರುತ್ತದೆ’ ಎಂದರು.

ADVERTISEMENT

‘ನನ್ನನ್ನು ಸೋಲಿಸೋರು ಅಥವಾ ಗೆಲ್ಲಿಸೋರು ಕ್ಷೇತ್ರದ ಮತದಾರರೇ ಹೊರತು ಎಂ.ಬಿ.ಪಾಟೀಲರಲ್ಲ. ಯತ್ನಾಳ ಮುಗಿಸುತ್ತೇನೆ ಎಂದು ಹಿಂದೆ ಬಹಳಷ್ಟು ಮಂದಿ ಹಾರಾಡಿ ಹೋಗಿದ್ದಾರೆ. ಹೀಗಾಗಿ ಎಂ.ಬಿ.ಪಾಟೀಲ ಅವರಂತವರುಹತ್ತು ಮಂದಿ ಬಂದರೂ ಯತ್ನಾಳನನ್ನ ವಿಜಯಪುರದಲ್ಲಿ ಸೋಲಿಸಲು ಆಗಲ್ಲ. ಹಾಗೇನಾದರೂ ಅವರ ತಲೆಯಲ್ಲಿ ಭ್ರಮೆ ಇದ್ದರೆ ತೆಗೆಯಲಿ, ನಾನು ಗಟ್ಟಿ ಇದ್ದೇನೆ’ ಎಂದು ಸವಾಲು ಹಾಕಿದರು.

ಮಂತ್ರಿ ಸ್ಥಾನಕ್ಕಾಗಿ ಮಠ:

ಪಂಚಮಸಾಲಿ ಸಮಾಜ ಮೂರುಪೀಠ ಸ್ಥಾಪನೆ ಮಾಡಿದ್ದೇ ನಾನು ಎಂಬಸಚಿವ ಮುರುಗೇಶ ನಿರಾಣಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಿರಾಣಿ ಅವರು ಯಾವ ಮಠ ಕಟ್ಟಿದ್ದಾರೆ, ಏಕೆ ಕಟ್ಟಿದ್ದಾರೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಯಾರು ಮಠ ಕಟ್ಟಿದ್ದರು, ಯಾರು ಬೆನ್ನಿಗೇ ಚೂರು ಹಾಕಿದರು ಎಲ್ಲವೂ ಗೊತ್ತಿದೆ ಎಂದು ಕಿಡಿ ಕಾರಿದರು.

ಮಠ ಕಟ್ಟಿದ್ದು ಸಮಾಜದ ಉದ್ದಾರಕ್ಕಲ್ಲ, ಮಂತ್ರಿ ಸ್ಥಾನಕ್ಕಾಗಿ. ಮುಂದಿನ ದಿನಗಳಲ್ಲಿ ಜನರೇ ಅವರಿಗೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.

ಬ್ರೋಕರ್‌ ಸ್ವಾಮಿ:

ತಮ್ಮನ್ನು ಜೋಕರ್ ಎಂದ ಟೀಕಿಸಿದ ಹರಿಹರ ಪಂಚಮಸಾಲಿ ಪೀಠದ ವಚನಾನಂದ ಶ್ರೀಗಳ ವಿರುದ್ಧ ಕಿಡಿಕಾರಿದ ಯತ್ನಾಳ, ‘ಅವರೊಬ್ಬಬ್ರೋಕರ್ ಸ್ವಾಮಿ ಆಗಿದ್ದಾರೆ.ಹಣ ವಸೂಲಿ ಮಾಡೋದು, ಮಂತ್ರಿ ಮಾಡಿ ಎಂದು ಹಣ ಕೇಳೋ ಕೆಲಸ ಮಾಡುತ್ತಾರೆ’ ಎಂದು ಆರೋಪಿಸಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಂದ ಹರಿಹರ ಶ್ರೀಗಳು ₹ 10 ಕೋಟಿ ಹಣ ವಸೂಲಿ ಮಾಡಿದ್ದಾರೆ ಎಂದು ದೂರಿದರು.

****

ಕೊತ್ವಾಲ್‌ ರಾಮಚಂದ್ರನ ಶಿಷ್ಯ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್‌ ಅವರಿಗೆ ಬಿಜೆಪಿ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ

–ಬಸನಗೌಡ ಪಾಟೀಲ ಯತ್ನಾಳ, ಶಾಸಕ, ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.