ADVERTISEMENT

ಕಾಂಗ್ರೆಸ್‌ಗೆ ಅಧಿಕಾರ ನೀಡಿದರೆ ಬಾಕಿ ನೀರಾವರಿ ಯೋಜನೆಗಳು ಪೂರ್ಣ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 2 ಮೇ 2022, 10:49 IST
Last Updated 2 ಮೇ 2022, 10:49 IST
   

ವಿಜಯಪುರ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಅಧಿಕಾರ ನೀಡಿದರೆಐದು ವರ್ಷದಲ್ಲಿ ರಾಜ್ಯದ ಬಾಕಿ ಇರುವ ಎಲ್ಲ ನೀರಾವರಿ ಯೋಜನೆ ಪೂರ್ಣಗೊಳಿಸುತ್ತೇವೆ. ಇದಕ್ಕೆ ಎಷ್ಟೇ ಹಣ ಖರ್ಚಾದರೂ ಪರವಾಗಿಲ್ಲ ಎಂದುವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಭರವಸೆ ನೀಡಿದರು.

ಬಬಲೇಶ್ವರ ತಾಲ್ಲೂಕಿನ ಸುಕ್ಷೇತ್ರ ಸಂಗಾಪೂರ ಎಸ್.ಎಚ್.ಗ್ರಾಮದಲ್ಲಿ ಶ್ರೀ ಸಿದ್ಧಲಿಂಗೇಶ್ವರ ಕಮರಿಮಠದ ಜಾತ್ರಾ ಮಹೋತ್ಸವ ಹಾಗೂ ಯಾತ್ರಿ ನಿವಾಸ ಉದ್ಘಾಟಿಸಿ ಅವರು ಮಾತನಾಡಿದರು.

ಕಾಂಗ್ರೆಸ್‌ ಪಕ್ಷ ಮಾತಿಗೆ ತಪ್ಪುವುದಿಲ್ಲ. ನುಡಿದ‌ಂತೆ ನಡೆಯುತ್ತೇವೆ. 2013ರ ಚುನಾವಣೆಯಲ್ಲಿ ನೀಡಿದ ಎಲ್ಲ ಭರವಸೆ ಈಡೇರಿಸಿದ್ದೇವೆ ಎಂದರು.

ADVERTISEMENT

ಕಾಂಗ್ರೆಸ್‌ ನಡಿಗೆ ಕೃಷ್ಣೆಯ ಕಡೆಗೆ ಪಾದಯಾತ್ರೆ ವೇಳೆಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಪ್ರತಿ ವರ್ಷ ₹ 10 ಸಾವಿರ ಕೋಟಿಯಂತೆ 5 ವರ್ಷದಲ್ಲಿ ₹ 50 ಸಾವಿರ ಕೋಟಿ ನೀಡುವುದಾಗಿ ಭರವಸೆ ನೀಡಿದ್ದೆವು. ಆ ಪ್ರಕಾರ ನಾನು ಸಿಎಂ ಆಗಿದ್ದ ವೇಳೆ ಜಲಸಂಪನ್ಮೂಲ ಸಚಿವರಾಗಿದ್ದ ಎಂ.ಬಿ.ಪಾಟೀಲ ಪ್ರಾಮಾಣಿಕವಾಗಿ ಕೆಲಸ ಮಾಡಿ, ಹಳ್ಳಿ ಹಳ್ಳಿಗೆ ನೀರು ಹರಿಯುವಂತೆ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

2018ರ ವಿಧಾನಸಭಾ ಚುನಾವಣೆ ವೇಳೆಬಿಜೆಪಿ ಪ್ರಣಾಳಿಕೆಯಲ್ಲಿ ನೀರಾವರಿಗಾಗಿ ₹1.5 ಲಕ್ಷ ಕೋಟಿ ಖರ್ಚು ಮಾಡುವುದಾಗಿ ಹೇಳಿದ್ದರು. ಆದರೆ, ಮಾಡಿದ್ದಾರಾ? ಒಂದು ವೇಳೆ ಅನುದಾನ ಮಾಡಿದ್ದರೆ ಮಹಾದಾಯಿ, ಯುಕೆಪಿ ಸೇರಿದಂತೆ ಎಲ್ಲ ನೀರಾವರಿ ಯೋಜನೆಗಳು ಪೂರ್ಣಗೊಳ್ಳುತ್ತಿದ್ದವು ಎಂದು ಹೇಳಿದರು.

ಪ್ರಧಾನಿ ಮೋದಿ ಹೇಳಿದಂತೆ ರೈತರ ಆದಾಯ ದ್ವಿಗುಣ ಆಗಿದೆಯೇ ಎಂದು ಪ್ರಶ್ನಿಸಿದ ಅವರು, ಮೋದಿ ಆಡಳಿತಾವಧಿಯಲ್ಲಿ ರೈತರ ಸಾಲ ದುಪ್ಪಟ್ಟಾಗಿದೆ ಎಂದು ಆರೋಪಿಸಿದರು.

ಇದು ರೈತರ ದೇಶ, ಇಲ್ಲಿ ಬಾಯಿ ಮಾತು ನಡೆಯಲ್ಲ. ಕೆಲಸ ಮಾಡಬೇಕು ಎಂದರು.

ಭಾರತೀಯ ಸಮಾಜದಲ್ಲಿ ಜಾತ್ರೆ, ಹಬ್ಬ, ಹರಿದಿನ ಅಚರಣೆ ಪ್ರಾಚೀನ ಕಾಲದಿಂದಲೂ ಒಟ್ಟಿಗೆ ನಡೆಸಿಕೊಂಡು ಬರುವುದು ಸಂಪ್ರದಾಯ. ನಾವೆಲ್ಲರೂ ಹಿಂದೂಗಳು.‌ ನಮ್ಮ ಸಂಪ್ರದಾಯದಂತೆ ಜಾತ್ರೆಯಲ್ಲಿ ಸಂತೋಷದಿಂದ ಊರವರೆಲ್ಲ ಪಾಲ್ಗೊಳ್ಳುತ್ತೇವೆ.‌ ಜೊತೆಗೆ ಅಕ್ಕಪಕ್ಕದ ಊರಿನವರು, ಸಮಾಜದವರು, ಧರ್ಮದವರು ಭಾಗವಹಿಸುತ್ತಾರೆ. ಜಾತ್ರೆ, ಉರುಸ್, ಕ್ರಿಸ್ಮಸ್ ಹಬ್ಬಗಳನ್ನು ಒಟ್ಟಿಗೆ ಆಚರಿಸುವುದರಿಂದ ಸಮಾಜದಲ್ಲಿ ಸಾಮರಸ್ಯ ಕಾಪಾಡಲು ಅನುಕೂಲವಾಗುತ್ತದೆ ಎಂದರು.

ಜಾತಿ, ಧರ್ಮ, ಭಾಷೆ ಆಧಾರದ ಮೇಲೆ ಜನರನ್ನು ವಿಂಗಡಿಸಬಾರದು. ಎಲ್ಲರೂ ಮನುಷ್ಯರು ಎಂದು ಹೇಳಿದರು.

ಆರೋಗ್ಯ ಹದಗೆಟ್ಟಾಗ ರಕ್ತ ಬೇಕಾದರೆ ಬದುಕಿಸಲು ಜಾತಿ, ಧರ್ಮ ನೋಡದೇ ಯಾರ ರಕ್ತವಾದರೂ ಪಡೆದುಕೊಳ್ಳುತ್ತೇವೆ. ರಕ್ತ ಪಡೆದಾದ ಮೇಲೆ ನೀನು ಹಿಂದೂ, ನೀನು ದಲಿತ, ನೀನು ಮುಸ್ಲಿಂ, ನೀನು ಕ್ರಿಶ್ಚಿಯನ್ ಎಂದು ಭೇದಭಾವ ಮಾಡುವುದು ಸರಿಯಲ್ಲ.ಧರ್ಮ ಇರುವುದು ಮನುಷ್ಯನ ಕಲ್ಯಾಣಕ್ಕಾಗಿ, ಬದುಕು ಹಸನು ಮಾಡಲು.‌ ಮನುಷ್ಯ ಇರುವುದು ಧರ್ಮಕ್ಕಾಗಿ ಅಲ್ಲ, ಧರ್ಮ ಇರುವುದು ಮನುಷ್ಯನಿಗಾಗಿ. ಧರ್ಮದಲ್ಲಿ ಎಲ್ಲರೂ ಸಮಾನರು ಎಂದುನುಡಿದರು.

ಬಸವಾದಿ ಶರಣರು ಹೇಳಿದ್ದೇನು? ಇವನಾರವ.. ಇವನಾರವ ಎಂದೆಣಿಸಿದರಯ್ಯಾ. ಇವ ನಮ್ಮವಾ..ಇವ ನಮ್ಮವಾ ಎಂದೆಣಿಸಯ್ಯ ಕೂಡಲಸಂಗಮ ದೇವಾ ಎಂದಿದ್ದಾರೆ. ಕೇವಲ ಬಸವಣ್ಣನ ಫೋಟೊ ಇಟ್ಟುಕೊಂಡರೆ ಸಾಲದು, ಬಸವಣ್ಣನ ವಿಚಾರಧಾರೆಗಳಿಗೆ ಅನುಗುಣವಾಗಿ ಬದುಕಬೇಕು ಎಂದು ಸಲಹೆ ನೀಡಿದರು.

ನಮ್ಮ ಸಂವಿಧಾನ ಹೇಳುವುದು ಸಮ ಸಮಾಜದ ಬಗ್ಗೆ. ‌ಇದುವೇ ಬಸವಾದಿ ಶರಣರ ಕನಸೂ ಅಗಿತ್ತು.ಸಂಗಾಪೂರಮಠ ಜಾತ್ಯತೀತವಾಗಿರುವುದು ಸಂತಸದ ಸಂಗತಿ.ಕಾಯಕ, ದಾಸೋಹ ತತ್ವವನ್ನು ಬಸವಾದಿ ಶರಣರು ಪ್ರತಿಪಾದಿಸಿದರು. ಅವರು ಬಯಸಿದ ಸಮಾಜದಲ್ಲಿ ಯಾರೂ ಮೈಗಳ್ಳರಿರಲು ಸಾಧ್ಯವಿಲ್ಲ. ಉತ್ಪಾದನೆ, ವಿತರಣೆಗೆ ಒತ್ತು ಕೊಟ್ಟಿದ್ದರು ಎಂದು ಹೇಳಿದರು.

ಸಿಎಂ ಆಗಿ ಕೇವಲ ಒಂದು ಗಂಟೆಯೊಳಗೆ ಎಲ್ಲ ಬಡವರಿಗಾಗಿ ಏಳು ಕೆ.ಜಿ.ಅಕ್ಕಿ ಕೊಡುವ ತೀರ್ಮಾನ ಮಾಡಿದೆ. 4.30 ಕೋಟಿ ಜನ ಇದರ ಲಾಭ ಪಡೆದುಕೊಂಡರು. ಇದರಲ್ಲಿ ಬ್ರಾಹ್ಮಣ, ಲಿಂಗಾಯತ, ಮುಸ್ಲಿಂ, ಕ್ರೈಸ್ತ ,ಕುರುಬ ಸೇರಿದಂತೆ ಎಲ್ಲ ಸಮಾಜದ ಬಡವರು ಲಾಭ ಪಡೆದುಕೊಂಡರು ಎಂದು ಹೇಳಿದರು.

ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ, ಶಾಸಕ ಎಂ.ಬಿ.ಪಾಟೀಲ ಮಾತನಾಡಿ, 2013-18ರ ನಮ್ಮ ಸರ್ಕಾರದ ಅವಧಿಯಲ್ಲಿ ಸಂಗಾಪೂರ ಸಂಪೂರ್ಣ ನೀರಾವರಿ ಆಗಿದೆ. ಪರಿಣಾಮ ಇಂದು ಗ್ರಾಮದ ರೈತರು ₹ 150 ಕೋಟಿ ಮೊತ್ತದ ಕಬ್ಬು ಬೆಳೆಯುತ್ತಿದ್ದಾರೆ. ಆರ್ಥಿಕವಾಗಿ ಸದೃಢವಾಗಿದ್ದಾರೆ. ಇದಕ್ಕೆ ಕಾಂಗ್ರೆಸ್‌ ಸರ್ಕಾರ ಕಾರಣ ಎಂದರು.

ಸಿದ್ದರಾಮಯ್ಯ ನೇತೃತ್ವದಲ್ಲಿ ಮತ್ತೊಮ್ಮೆ ರಾಜ್ಯದಲ್ಲೂ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬರಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ನಮ್ಮ ನಾಯಕರು. ಅವರು ಸಿಎಂ ಆಗಿದ್ದಾಗ ನಾನು ಜಲ ಸಂಪನ್ಮೂಲ ಸಚಿವನಾಗಿದ್ದೆ. ಬರದ ನಾಡು ಹಸಿರು ನಾಡಾಗಿಸಿದೆ ಎಂದರು. ಪೀರಾಪುರ-ಬೂದಿಹಾಳ ಏತನೀರಾವರಿ ಯೋಜನೆ ಸೇರಿದಂತೆ ಜಿಲ್ಲೆಯ ಎಲ್ಲ ನೀರಾವರಿ ಯೋಜನೆ ಆಗಿದ್ದು ಸಿದ್ದರಾಮಯ್ಯ ಅವಧಿಯಲ್ಲಿ ಎಂಬುದನ್ನು ಎಲ್ಲರೂ ನೆನಪಿಡಬೇಕು ಎಂದರು.

ಅಭಿನವ ಸಿದ್ದಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.ಶಾಸಕರಾದ ಆನಂದ ನ್ಯಾಮಗೌಡ, ವಿಧಾನ ಪರಿಷತ್ ಸದಸ್ಯರಾದಪ್ರಕಾಶ ರಾಠೋಡ, ಸುನೀಲ್ ಗೌಡ ಪಾಟೀಲ, ಮಾಜಿ ಸಚಿವ ಸಿ.ಎಸ್.ನಾಡಗೌಡ, ವಿಜಯಪುರ ಜಿಲ್ಲಾ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಪ್ರೊ. ರಾಜು ಆಲಗೂರ, ವಿಠ್ಠಲ ಕಟಕದೊಂಡ, ಬಿ.ಎಸ್.ಪಾಟೀಲ ಯಾಳಗಿ, ಅಬ್ದುಲ್‌ ಹಮೀದ್ ಮುಶ್ರೀಫ್,ಅಶೋಕ ಮನಗೂಳಿ, ಸುಭಾಷ್ ಛಾಯಗೋಳ, ಶರಣಪ್ಪ ಸುಣಗಾರ, ಸೋಮನಾಥ ಕಳ್ಳಿಮನಿ, ಸುಜಾತಾ ಕಳ್ಳಿಮನಿ, ಎಸ್.ಎಂ.ಪಾಟೀಲ ಗಣಿಹಾರ, ಮಹಾಂತೇಶ ಬಿರಾದಾರಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.