ADVERTISEMENT

ಪ್ರಾಸಿಕ್ಯೂಷನ್‌ಗೆ ಅನುಮತಿ ಹಿಂದೆ ಷಡ್ಯಂತ್ರ: ಸಂಗೀತಾ ನಾಡಗೌಡ

ಕಾಂಗ್ರೆಸ್ ನಾಯಕಿ ಸಂಗೀತಾ ನಾಡಗೌಡ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2024, 14:36 IST
Last Updated 18 ಆಗಸ್ಟ್ 2024, 14:36 IST
ಸಂಗೀತಾ ನಾಡಗೌಡ
ಸಂಗೀತಾ ನಾಡಗೌಡ   

ಮುದ್ದೇಬಿಹಾಳ: ಪ್ರಸ್ತುತ ರಾಜ್ಯಪಾಲರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕುರಿತು ಮುಡಾ ಪ್ರಕರಣದಲ್ಲಿ ತನಿಖೆಗೆ ಅನುಮತಿ ನೀಡಿರುವುದು ಏಕಪಕ್ಷೀಯ ಹಾಗೂ ನಿರಾಧಾರವಾಗಿದ್ದು ಅದು ಖಂಡನೀಯ ಎಂದು ಕಾಂಗ್ರೆಸ್ ನಾಯಕಿ ಸಂಗೀತಾ ನಾಡಗೌಡ ತಿಳಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ರಾಜ್ಯಪಾಲರಿಗೆ ಈ ಅಧಿಕಾರವನ್ನು ನಮ್ಮ ಸಂವಿಧಾನ ನೀಡಿದ್ದರೂ, ಪ್ರಕರಣದ ಪೂರ್ವಾಪರಗಳನ್ನು ಪರಾಮರ್ಶಿಸದೆ, ತರಾತುರಿಯಲ್ಲಿ ರಾಜ್ಯಪಾಲರು ಅನುಮತಿ ನೀಡಿದ್ದು ಹಲವಾರು ಸಂಶಯಗಳಿಗೆ ಎಡೆಮಾಡಿ ಕೊಟ್ಟಿದೆ. ಇದಕ್ಕೆ ಪುಷ್ಟಿ ನೀಡುವಂತೆ, ರಾಜ್ಯಪಾಲರು ತಾವು ನೀಡಿದ ಹದಿನಾರು ಪುಟಗಳ ವರದಿಯಲ್ಲಿಯೇ, ‘ಮೇಲ್ನೋಟಕ್ಕೆ ಮಾತ್ರ ಈ ಪ್ರಕರಣದಲ್ಲಿ ಮುಖ್ಯಮಂತ್ರಿಗಳ ಹೆಸರು ಕೇಳಿ ಬರುತ್ತಿದೆ’ ಎಂದು ಸ್ಪಷ್ಟವಾಗಿ ಉಲ್ಲೇಖಸಿರುವುದು, ರಾಜ್ಯಪಾಲರು ಯಾವುದೋ ಒತ್ತಡಕ್ಕೆ ಮಣಿದು ಈ ನಿರ್ಧಾರ ಕೈಗೊಂಡಿದ್ದಾರೆ ಎಂಬುದು ರಾಜ್ಯದ ಜನತೆಗೆ ಮನವರಿಕೆಯಾಗಿದೆ’ ಎಂದು ಹೇಳಿದ್ದಾರೆ.

ಬೇರೆ ಪಕ್ಷದ ಹಲವಾರು ನಾಯಕರ ವಿರುದ್ಧ ಹಲವಾರು ಪ್ರಕರಣಗಳು ರಾಜ್ಯಪಾಲರ ಮುಂದೆ ಇದ್ದರೂ, ಇದೇ ಒಂದು ಪ್ರಕರಣದಲ್ಲಿ ರಾಜ್ಯಪಾಲರಿಗೆ ಏಕಿಷ್ಟು ಆಸಕ್ತಿ ಎಂಬುದು ಸದ್ಯದ ಪ್ರಶ್ನೆಯಾಗಿದೆ. ತಮ್ಮ ಸುಧೀರ್ಘ ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪುಚುಕ್ಕೆ ಹೊಂದದ ಸಿದ್ದರಾಮಯ್ಯನವರು ಕಾನೂನು ಪ್ರಕ್ರಿಯೆಯಲ್ಲಿ ಮತ್ತೆ ಪುಟಕ್ಕಿಟ್ಟ ಚಿನ್ನದಂತೆ ಹೊರಬರುವುದು ಮಾತ್ರ ಸತ್ಯವಾಗಿದ್ದು, ರಾಜ್ಯಪಾಲರ ಈ ನಡೆ ಖಂಡನೀಯ ಎಂದು ನಾಡಗೌಡ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.