ವಿಜಯಪುರ: ₹35 ಮುಖಬೆಲೆಯ (ಎಂಆರ್‌ಪಿ) ಕಾಫಿ ಪುಡಿಗೆ ಹೆಚ್ಚುವರಿಯಾಗಿ ₹ 5 ಅನ್ನು ಗ್ರಾಹಕರೊಬ್ಬರಿಂದ ವಸೂಲಿ ಮಾಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮೋರ್ ರೀಟೆಲ್ಸ್ ಮಳಿಗೆಗೆ ವಿಜಯಪುರ ಜಿಲ್ಲಾ ಗ್ರಾಹಕ ನ್ಯಾಯಾಲಯ ₹15 ಸಾವಿರ ದಂಡದ ಜೊತೆಗೆ ಕೋರ್ಟ್ ಖರ್ಚು ₹5 ಸಾವಿರ ಸೇರಿಸಿಕೊಡುವಂತೆ ಆದೇಶಿಸಿದೆ.
ವಿಜಯಪುರ ನಗರದ ಗ್ರಾಹಕ ಋಷಭ್ ರುಣವಾಲ್ ಎಂಬುವವರು ಕಳೆದ ಜನವರಿ 31ರಂದು ಇಲ್ಲಿನ ಸೋಲಾಪುರ ರಸ್ತೆಯ ಶುಭಶ್ರೀ ಸಾಗರ ಹೋಟೆಲ್ ಹತ್ತಿರ ಇರುವ ಮೋರ್ ರೀಟೆಲ್ಸ್‌ನಲ್ಲಿ ಫಿಲ್ಟರ್ ಕಾಫಿ ಲಿಕ್ವಿಡ್ ಅನ್ನು ಖರೀದಿಸಿರುತ್ತಾರೆ.
ಗ್ರಾಹಕ ಮನೆಗೆ ಹೋಗಿ ಕಾಫಿ ಪುಡಿಯ ಸ್ಯಾಚೆಟ್ ಮೇಲೆ ನಮೂದಿಸಿದ ಬೆಲೆಯನ್ನು ಗಮನಿಸಿದಾಗ ಅದರ ಮೂಲ ಬೆಲೆ ₹35 ಇರುತ್ತದೆ. ಆದರೆ, ಮೋರ್ ರೀಟೆಲ್ಸ್ ಮಳಿಗೆಯವರು ₹40 ಬಿಲ್ಲನ್ನು ನೀಡಿ ₹5 ಹೆಚ್ಚುವರಿಯಾಗಿ ವಸೂಲಿ ಮಾಡಿರುವುದು ಗಮನಕ್ಕೆ ಬರುತ್ತದೆ.
ಹೆಚ್ಚುವರಿ ಹಣ ಹಿಂದಿರುಗಿಸುವಂತೆ ಗ್ರಾಹಕ ರುಣವಾಲ್ ಅವರು ಮೋರ್ ರೀಟೆಲ್ಸ್‌ಗೆ ವಿಚಾರಿಸುತ್ತಾರೆ. ಆದರೆ, ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಅವರು ವಿಜಯಪುರ ಜಿಲ್ಲಾ ಗ್ರಾಹಕ ನ್ಯಾಯಾಲಯಕ್ಕೆ ದೂರು ದಾಖಲಿಸಿ, ಪರಿಹಾರ ಒದಗಿಸುವಂತೆ ಮನವಿ ಮಾಡುತ್ತಾರೆ.
ಪ್ರಕರಣದ ವಿಚಾರಣೆ ನಡೆಸಿದ ಗ್ರಾಹಕ ನ್ಯಾಯಾಲಯದ ಪ್ರಭಾರ ಅಧ್ಯಕ್ಷರಾದ ವಿದ್ಯಾ ಮುತಾಲಿಕ್ ಮತ್ತು ಸದಸ್ಯರಾದ ಕಮಲಕಿಶೋರ ಜೋಶಿ ಅವರು, ದೂರದಾರರಿಂದ ಎಂಆರ್‌ಪಿಗಿಂತ ಹೆಚ್ಚುವರಿ ₹5 ಪಡೆದಿರುವುದಕ್ಕೆ ಮೋರ್ ರೀಟೆಲ್ಸ್ ಮಳಿಗೆಯು ಶೇ 6ರ ಬಡ್ಡಿ ಸಮೇತ ಒಂದು ತಿಂಗಳ ಒಳಗಾಗಿ ₹ 15 ಸಾವಿರ ದಂಡ ಮತ್ತು ₹5 ಸಾವಿರ ಕೋರ್ಟ್ ವೆಚ್ಚ ನೀಡುವಂತೆ ಆದೇಶಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.