ವಿಜಯಪುರ: ನಗರದ ಪ್ರತಿಷ್ಠಿತ ಶ್ರೀ ಸಿದ್ದೇಶ್ವರ ಸಹಕಾರ ಬ್ಯಾಂಕಿನ 2025–30ನೇ ಸಾಲಿನ ಆಡಳಿತ ಮಂಡಳಿಗೆ ಭಾನುವಾರ ಬಿರುಸಿನ ಚುನಾವಣೆ ನಡೆಯಿತು.
ನಗರದ ಎಸ್.ಎಸ್. ಹೈಸ್ಕೂಲ್ ಆವರಣದಲ್ಲಿ ನಡೆದ ಚುನಾವಣೆಯಲ್ಲಿ ಮತದಾರರು ಹುರುಪಿನಿಂದ ಪಾಲ್ಗೊಂಡು, ಸರದಿಯಲ್ಲಿ ನಿಂತು ಮತ ಚಲಾಯಿಸಿದರು. ಸಚಿವ ಶಿವಾನಂದ ಪಾಟೀಲ ಅವರು ತಮ್ಮ ಹಕ್ಕು ಚಲಾಯಿಸಿದರು. ಮತ ಕೇಂದ್ರ ಸುತ್ತ ಎತ್ತ ನೋಡಿದರೂ ಸಹ ಬ್ಯಾಂಕ್ ಸದಸ್ಯರ ದಂಡೇ ಕಾಣಿಸಿತು.
ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಪ್ರವೇಶ ದ್ವಾರದಲ್ಲಿಯೇ ನಿಂತು ಮತದಾರರಿಗೆ ತಮ್ಮ ಪರವಾಗಿ ಮತ ಚಲಾಯಿಸುವಂತೆ ಕೈಮುಗಿದು ಮನವೊಲಿಕೆಯಲ್ಲಿ ನಿರತರಾಗಿದ್ದರು. ಸ್ಪರ್ಧಾಳುಗಳ ಬೆಂಬಲಿಗರು ಮತ ಪತ್ರಗಳನ್ನು ನೀಡಿ ಆಯಾ ಪೆನಲ್ ಸದಸ್ಯರಿಗೆ ಮತ ಚಲಾಯಿಸುವಂತೆ ಕೋರಿದರು.
ಒಟ್ಟು 9302 ಮತದಾರರ ಪೈಕಿ 7,494 ಮತಗಳು ಚಲಾವಣೆಯಾಗಿವೆ ಎಂಬ ಮಾಹಿತಿ ಪ್ರಾಥಮಿಕ ಮಾಹಿತಿ ಅನ್ವಯ ಲಭ್ಯವಾಗಿದೆ. ಮಧ್ಯರಾತ್ರಿ ವೇಳೆಗೆ ಫಲಿತಾಂಶ ಪ್ರಕಟವಾಗುವ ಸಾಧ್ಯತೆ ಇದೆ.
ಬ್ಯಾಂಕಿನ ಒಟ್ಟು 19 ಸ್ಥಾನಗಳಿಗೆ ನಡೆದಿರುವ ಚುನಾವಣೆಗೆ 39 ಜನ ಆಕಾಂಕ್ಷಿಗಳು ಸ್ಪರ್ಧೆ ಮಾಡಿದ್ದು, ಸಾಮಾನ್ಯ ಕ್ಷೇತ್ರದ 13 ಸ್ಥಾನಕ್ಕೆ 22 ಜನ ಹಣಾಹಣಿ ನಡೆಸಿದ್ದಾರೆ. ಹಳೆ ಪೆನಾಲ್ ಮತ್ತು ಅಭಿವೃದ್ಧಿ ಪರ ಪೆನಾಲ್ ನಡುವೆ ಪೈಪೋಟಿ ಏರ್ಪಟ್ಟಿತ್ತು.
ಹಿಂದುಳಿದ ವರ್ಗ ಅ ಕ್ಷೇತ್ರದ 1 ಸ್ಥಾನಕ್ಕೆ ಇಬ್ಬರು, ಹಿಂದುಳಿದ ವರ್ಗ ಬ 1 ಸ್ಥಾನಕ್ಕೆ 4 ಜನ ಸ್ಪರ್ಧಿಸಿದ್ದಾರೆ. ಪರಿಶಿಷ್ಟ ಜಾತಿ ಕ್ಷೇತ್ರದ 1 ಸ್ಥಾನಕ್ಕೆ 5 ಜನ ಸ್ಪರ್ಧಿಸಿದ್ದಾರೆ. ಪರಿಶಿಷ್ಟ ಪಂಗಡ ಕ್ಷೇತ್ರದ ಒಂದು ಸ್ಥಾನಕ್ಕೆ ಇಬ್ಬರು ಸ್ಪರ್ಧಿಸಿದ್ದಾರೆ. ಇನ್ನೂ ಮಹಿಳಾ ಮೀಸಲಾತಿ ಕ್ಷೇತ್ರದ ಎರಡು ಸ್ಥಾನಕ್ಕೆ ನಾಲ್ಕು ಜನ ಸ್ಪರ್ಧಿಸಿದ್ದಾರೆ.
ಬ್ಯಾಂಕಿನ ಒಟ್ಟು ಮತದಾರರು 9302 | ಬ್ಯಾಂಕಿನ 19 ನಿರ್ದೇಶಕ ಸ್ಥಾನಗಳಿಗೆ ಚುನಾವಣೆ | 39 ಜನ ಆಕಾಂಕ್ಷಿಗಳಿಂದ ಪೈಪೋಟಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.