ADVERTISEMENT

ಸಹಕಾರಿ ಕ್ಷೇತ್ರ | ವಿಜಯಪುರ ದೇಶಕ್ಕೆ ಮಾದರಿ: ಸಚಿವ ಶಿವಾನಂದ ಪಾಟೀಲ

ಅಂತರರಾಷ್ಟ್ರೀಯ ಸಹಕಾರ ವರ್ಷ, ಅಖಿಲ ಭಾರತ 72ನೇ ಸಹಕಾರಿ ಸಪ್ತಾಹ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2025, 5:27 IST
Last Updated 22 ನವೆಂಬರ್ 2025, 5:27 IST
ಬಸವನಬಾಗೇವಾಡಿ ತಾಲ್ಲೂಕಿನ ಮನಗೂಳಿಯಲ್ಲಿ ಹಮ್ಮಿಕೊಂಡಿದ್ದ ಅಖಿಲ ಭಾರತ 72ನೇ ಸಹಕಾರಿ ಸಪ್ತಾಹ ಸಮಾರಂಭದಲ್ಲಿ ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತರಾದ ಬಾಲಚಂದ್ರ ಮುಂಜಣ್ಣಿ, ಲೋಕನಾಥ್ ಅಗರವಾಲ, ಶಂಕರಗೌಡ ಪಾಟೀಲ ಅವರನ್ನು ಸಚಿವ ಶಿವಾನಂದ ಪಾಟೀಲ ಸನ್ಮಾನಿಸಿದರು
ಬಸವನಬಾಗೇವಾಡಿ ತಾಲ್ಲೂಕಿನ ಮನಗೂಳಿಯಲ್ಲಿ ಹಮ್ಮಿಕೊಂಡಿದ್ದ ಅಖಿಲ ಭಾರತ 72ನೇ ಸಹಕಾರಿ ಸಪ್ತಾಹ ಸಮಾರಂಭದಲ್ಲಿ ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತರಾದ ಬಾಲಚಂದ್ರ ಮುಂಜಣ್ಣಿ, ಲೋಕನಾಥ್ ಅಗರವಾಲ, ಶಂಕರಗೌಡ ಪಾಟೀಲ ಅವರನ್ನು ಸಚಿವ ಶಿವಾನಂದ ಪಾಟೀಲ ಸನ್ಮಾನಿಸಿದರು   

ಬಸವನಬಾಗೇವಾಡಿ: ಸಹಕಾರ ವ್ಯವಸ್ಥೆ ಅವಿಭಜಿತ ಧಾರವಾಡ ಜಿಲ್ಲೆಯಲ್ಲಿ ಜನ್ಮ ತಳೆದರೂ ವಿಜಯಪುರ ಜಿಲ್ಲೆಯಲ್ಲಿ ಹಾಲು, ಸಕ್ಕರೆ ಉತ್ಪಾದನೆಯಲ್ಲಿ ದೇಶಕ್ಕೆ ಮಾದರಿಯಾಗುವಂತೆ ಬಸವನಾಡಿನ ಸಹಕಾರಿ ಹೆಸರಾಗಿದೆ ಎಂದು ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.

ತಾಲ್ಲೂಕಿನ ಮನಗೂಳಿಯ ವಿನಾಯಕ ವಿವಿಧೋದ್ದೇಶ ಸಹಕಾರ ಸಂಘದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ವಿಜಯಪುರ ಜಿಲ್ಲಾ ಸಹಕಾರಿ ಯುನಿಯನ್ ನಿಯಮಿತದ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಸಹಕಾರ ವರ್ಷ ಹಾಗೂ ಅಖಿಲ ಭಾರತ 72ನೇ ಸಹಕಾರಿ ಸಪ್ತಾಹ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.

ರಾಜ್ಯದಲ್ಲಿ ನಿತ್ಯ 1.10 ಕೋಟಿ ಹಾಲು ಉತ್ಪದನೆ ಆಗುತ್ತಿದ್ದು, ವಿಜಯಪುರ ಜಿಲ್ಲೆ ಕ್ಷೀರ ಉತ್ಪಾದನೆಯಲ್ಲಿ ಮೂರನೇ ಸ್ಥಾನದಲ್ಲಿದೆ. ಈ ಸಾಧನೆಗೆ ಸಹಕಾರಿ ರಂಗ ಹಾಗೂ ಹಾಲು ಉತ್ಪಾದಕ ತಾಯಂದಿರೇ ಕಾರಣ ಎಂದು ಶ್ಲಾಘಿಸಿದರು.

ADVERTISEMENT

ಸಹಕಾರಿ ಚಳವಳಿ ಹುಟ್ಟು ಹಾಕಿದ ಧಾರವಾಡ ಜಿಲ್ಲೆಯ ಕಣಗಿನಹಾಳದ ಸಿದ್ಧನಗೌಡ ಪಾಟೀಲ, ಸಹಕಾರಿ ಬೆಳವಣಿಗೆಗೆ ಬೆನ್ನೆಲುಬಾಗಿ ನಿಂತ ದೇಶದ ಮೊದಲ ಪ್ರಧಾನಿ ಪಂ.ಜವಾಹರಲಾಲ್ ನೆಹರು, ಕ್ಷೀರಕ್ರಾಂತಿ ಮಾಡಿದ ಪ್ರೊ.ಕುರಿಯನ್ ಅವರ ಪರಿಣಾಮ ವಿದೇಶಕ್ಕೆ ಭಾರತ ಹಾಲು ಕಳಿಸುವ ಮಟ್ಟಕ್ಕೆ ಬೆಳೆದಿದೆ. ವಿಜಯಪುರ ಜಿಲ್ಲೆಯೂ ಸಹಕಾರಿ ಪ್ರಗತಿ ಸಾಧಿಸುವಲ್ಲಿ ಶ್ರಮಿಸಿದ ದೇಸಾಯಿ ಪಾಂಡುರಂಗರಾವ್, ಫ.ಗು. ಹಳಕಟ್ಟಿ ಅವರು ಸದಾ ಸ್ಮರಣೀಯರು ಎಂದರು.

ವಿಡಿಸಿಸಿ ಬ್ಯಾಂಕ್ ನಿವೃತ್ತ ಅಧಿಕಾರಿ ಆರ್.ಎಂ.ಬಣಗಾರ ಉಪನ್ಯಾಸ ನೀಡಿದರು. ಗುರುಪಾದಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಅಪ್ಪುಗೌಡ ಪಾಟೀಲ, ಜಿಲ್ಲಾ ಸಹಕಾರಿ ಯುನಿಯನ್ ಅಧ್ಯಕ್ಷ ಎಂ.ಸಿ. ಮುಲ್ಲಾ, ಕರ್ನಾಟಕ ರಾಜ್ಯ ಸಹಕಾರಿ ವಿಮಾ ಮಹಾಮಂಡಳದ ಅಧ್ಯಕ್ಷ ಶಿವನಗೌಡ ಬಿರಾದಾರ, ಬಸವನಬಾಗೇವಾಡಿ ಪಿಎಲ್‌ಡಿಇ ಬ್ಯಾಂಕ್ ಅಧ್ಯಕ್ಷ ಐ.ಸಿ. ಪಟ್ಟಣಶೆಟ್ಟಿ, ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತರಾದ ಬಾಲಚಂದ್ರ ಮುಂಜಣ್ಣಿ, ಲೋಕನಾಥ್ ಅಗರವಾಲ, ಶಂಕರಗೌಡ ಪಾಟೀಲ, ಜಿಲ್ಲಾ ಸಹಕಾರಿ ಯುನಿಯನ್ ನಿರ್ದೇಶಕರಾದ ವಿಶ್ವನಾಥಗೌಡ ಪಾಟೀಲ, ಸಂಗನಬಸಪ್ಪ ತಳೇವಾಡ, ವಿಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಶೇಖರ ದಳವಾಯಿ, ಚಂದ್ರಶೇಖರಗೌಡ ಪಾಟೀಲ, ಶ್ರೀಕಾಂತ ಸಾರವಾಡ, ಸಹಕಾರ ಸಂಘಗಳ ಉಪನಿಬಂಧಕಿ ಎಸ್.ಕೆ.ಭಾಗ್ಯಶ್ರೀ, ಅಭಿವೃದ್ಧಿ ಅಧಿಕಾರಿ ಶ್ರೀಶೈಲ ಹಂಗರಗಿ, ಕೆ.ಎನ್.ಪಾರಗೊಂಡ, ಸೌಮ್ಯ ಜಕ್ಕಣ್ಣವರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.