ADVERTISEMENT

ಪಡಿತರ ವಿತರಣೆ ಆರಂಭ

ರಜೆಯಲ್ಲೂ ಕಾರ್ಯ ನಿರ್ವಹಣೆಗೆ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಸೂಚನೆ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2020, 10:35 IST
Last Updated 5 ಏಪ್ರಿಲ್ 2020, 10:35 IST
ವೈ.ಎಸ್‌.ಪಾಟೀಲ
ವೈ.ಎಸ್‌.ಪಾಟೀಲ   

ವಿಜಯಪುರ: ಸಾರ್ವಜನಿಕ ವಿತರಣಾ ಪದ್ಧತಿಯಡಿ ಪಡಿತರ ಚೀಟಿದಾರರಿಗೆ ಏಪ್ರಿಲ್‌ ಮತ್ತು ಮೇ ಎರಡೂ ತಿಂಗಳ ಆಹಾರ ಪದಾರ್ಥಗಳ ವಿತರಣೆ ಕಾರ್ಯ ಜಿಲ್ಲೆಯಾದ್ಯಂತ ಆರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ತಿಳಿಸಿದ್ದಾರೆ.

ಕೊರೊನಾ ಸೋಂಕು ಹರಡುವುದನ್ನು ತಡೆಯುವ ಉದ್ದೇಶದಿಂದ ಲಾಕ್‌ಡೌನ್‌ ಮಾಡಲಾಗಿರುವ ಹಿನ್ನೆಲೆಯಲ್ಲಿ ಬಡವರಿಗೆ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ಎರಡು ತಿಂಗಳ ಪಡಿತರವನ್ನು ಮುಂಗಡವಾಗಿ ವಿತರಿಸಲಾಗುತ್ತಿದೆ ಎಂದರು.

ಜಿಲ್ಲೆಗೆ 18,038 ಕ್ವಿಂಟಲ್‌ ಅಕ್ಕಿ ಹಾಗೂ 1870 ಕ್ವಿಂಟಲ್‌ ಗೋಧಿ ಹಂಚಿಕೆಯಾಗಿದೆ. ಜಿಲ್ಲೆಯಲ್ಲಿ 835 ನ್ಯಾಯ ಬೆಲೆ ಅಂಗಡಿಗಳು ಕಾರ್ಯನಿರ್ವಹಿಸುತ್ತಿದ್ದು, ಈಗಾಗಲೇ ಸುಮಾರು 400 ಅಂಗಡಿಗಳಿಗೆ ಅಕ್ಕಿ ಮತ್ತು ಗೋಧಿಯನ್ನು ಪೂರೈಕೆ ಮಾಡಲಾಗಿದೆ. ಉಳಿದ ಅಂಗಡಿಗಳಿಗೂ ವಿತರಿಸುವ ಕಾರ್ಯ ನಡೆದಿದೆ ಎಂದು ಹೇಳಿದರು.

ADVERTISEMENT

ಅನ್ನಭಾಗ್ಯ ಯೋಜನೆಯಡಿ ಪ್ರತಿ ಅಂತ್ಯೋದಯ ಪಡಿತರ ಚೀಟಿದಾರರಿಗೆ 70 ಕೆ.ಜಿ ಅಕ್ಕಿ, ಬಿಪಿಎಲ್ ಪಡಿತರ ಚೀಟಿದಾರರಿಗೆ ಪ್ರತಿ ಯೂನಿಟ್‌ಗೆ 10 ಕೆ.ಜಿ ಅಕ್ಕಿ ಹಾಗೂ ಪ್ರತಿ ಬಿಪಿಎಲ್ ಪಡಿತರ ಚೀಟಿಗೆ 4 ಕೆ.ಜಿ ಗೋಧಿಯನ್ನು ಉಚಿತವಾಗಿ ವಿತರಣೆ ಮಾಡಲಾಗುವುದು ಎಂದರು.

ಜಿಲ್ಲೆಯ ಎಲ್ಲ ನ್ಯಾಯ ಬೆಲೆ ಅಂಗಡಿಗಳು ಕಾರ್ಯಾರಂಭ ಮಾಡಲು ಈಗಾಗಲೇ ಸೂಚಿಸಲಾಗಿದ್ದು, ರಜಾ ದಿನಗಳಲ್ಲೂ ಕಾರ್ಯ ನಿರ್ವಹಿಸಲು ಆಯಾ ತಾಲ್ಲೂಕಿನ ತಹಶೀಲ್ದಾರರು ಅಗತ್ಯ ಕ್ರಮಗಳನ್ನು ಕೈಗೊಂಡಿರುತ್ತಾರೆ ಎಂದು ತಿಳಿಸಿದರು.

ಕೋವಿಡ್-19 ವೈರಸ್ ಹರಡುವಿಕೆ ತಡೆಗಟ್ಟ್ಟುವ ನಿಟ್ಟಿನಲ್ಲಿ ನ್ಯಾಯ ಬೆಲೆ ಅಂಗಡಿಗಳ ಮುಂದೆ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಸಮಾಧಾನದಿಂದ ಪಡಿತರ ವಸ್ತುಗಳನ್ನು ತೆಗೆದುಕೊಂಡು ಹೋಗಬೇಕು ಎಂದು ಪಡಿತರ ಚೀಟಿದಾರರಿಗೆ ಸೂಚಿಸಿದರು.

ಪಡಿತರ ವಸ್ತುಗಳು ಸಿಗುವುದಿಲ್ಲ ಎಂದು ಯಾವುದೇ ಪಡಿತರ ಚೀಟಿದಾರರು ಆತಂಕಪಡುವ ಅವಶ್ಯಕತೆ ಇಲ್ಲ. ಪಡಿತರ ವಸ್ತುಗಳ ವಿತರಣೆಗೆ ಸಂಬಂಧಿಸಿದಂತೆ ಏನಾದರು ದೂರುಗಳು ಇದ್ದಲ್ಲಿ ಸಹಾಯವಾಣಿ ಸಂಖ್ಯೆ 1967 ಅಥವಾ ಜಿಲ್ಲಾಧಿಕಾರಿಗಳ ಕಚೇರಿಯ ಆಹಾರ ಶಾಖೆಯ ದೂರವಾಣಿ ಸಂಖ್ಯೆ 08352-250419ಗೆ ಸಂಪರ್ಕಿಸಿ ತಮ್ಮ ಅಹವಾಲನ್ನು ದಾಖಲಿಸಬಹುದಾಗಿದೆ ಎಂದು ತಿಳಿಸಿದ್ದಾರೆ.

ಸರ್ಕಾರದ ನಿರ್ದೇಶನದಂತೆ ಪಡಿತರ ವಸ್ತುಗಳನ್ನು ಒಟಿಪಿ ಮೂಲಕ ವಿತರಣೆ ಮಾಡಲು ಜಿಲ್ಲೆಯ ಎಲ್ಲ ನ್ಯಾಯ ಬೆಲೆ ಅಂಗಡಿಯವರಿಗೆ ಸೂಚಿಸಲಾಗಿದೆ. ಒಂದು ವೇಳೆ ಪಡಿತರ ಚೀಟಿದಾರರಿಂದ ಏನಾದರೂ ದೂರುಗಳು ಬಂದು, ಲೋಪಗಳು ದೃಡಪಟ್ಟಲ್ಲಿ ಅಂತಹ ನ್ಯಾಯ ಬೆಲೆ ಅಂಗಡಿಗಳ ಲೈಸನ್ಸ್‌ ರದ್ದುಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.