ADVERTISEMENT

ಕೊರೊನಾ ವಾರಿಯರ್ಸ್‌ ವಿಮಾ ಯೋಜನೆ ರದ್ದು: ಖಂಡನೆ

ವಿಮಾ ಪರಿಹಾರದ ಸೌಲಭ್ಯ ನೀಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2021, 14:17 IST
Last Updated 19 ಏಪ್ರಿಲ್ 2021, 14:17 IST
ಮಲ್ಲಿಕಾರ್ಜುನ ಎಚ್.ಟಿ.
ಮಲ್ಲಿಕಾರ್ಜುನ ಎಚ್.ಟಿ.   

ವಿಜಯಪುರ: ಕೊರೊನಾ ವಾರಿಯರ್ಸ್‌ಗಳು ಆಕಸ್ಮಿಕವಾಗಿ ಸಾವಿಗೀಡಾದರೆ ₹ 50 ಲಕ್ಷ ವಿಮೆ ನೀಡುವ ಯೋಜನೆಯನ್ನು ತೆಗೆದುಹಾಕಿರುವ ಕೇಂದ್ರ ಸರ್ಕಾರದ ಕ್ರಮವನ್ನುಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ವಿಜಯಪುರ ಜಿಲ್ಲಾ ಘಟಕ ತೀವ್ರವಾಗಿ ಖಂಡಿಸಿದೆ.

ದೇಶದಲ್ಲಿ ಎರಡನೇ ಅಲೆ ತೀವ್ರ ಸ್ಪರೂಪದ್ದಾಗಿದ್ದು, ಅಧಿಕ ಸಾವುಗಳಿಗೆ ಕಾರಣವಾಗುತ್ತಿದೆ. ಇಂತಹ ಸಮಯದಲ್ಲಿ ಆರೋಗ್ಯ ಕಾರ್ಯಕರ್ತರು ತಮ್ಮ ಜೀವವನ್ನೇ ಪಣಕ್ಕಿಟ್ಟು ಕಾರ್ಯ ನಿರ್ವಹಿಸುತ್ತಿದ್ದಾರೆ. ಕೊರೊನಾ ಸಂಕಷ್ಟದಲ್ಲಿ ಹಗಲು-ರಾತ್ರಿ ದುಡಿಯುತ್ತಿರುವ ಇವರಿಗೆ ಕೇಂದ್ರ ಸರ್ಕಾರ ಈಗ ಆಘಾತ ನೀಡಿದೆ.ಇದು ನಿಜಕ್ಕೂ ಅಮಾನವೀಯ ಎಂದು ಸಂಘ ಹೇಳಿದೆ.

ದೇಶದಲ್ಲಿ ಕೊರೊನಾ ಸೋಂಕು ದಿನೇ ದಿನೇ ಉಲ್ಬಣವಾಗುತ್ತಿದೆ. ಕೋವಿಡ್‌ ಪರಿಸ್ಥಿತಿ ಗಂಭೀರ ಆಗುತ್ತಿರುವ ಹೊತ್ತಿನಲ್ಲಿ ಜನರ ಜೀವ ಉಳಿಸಲು ಹೆಣಗಾಡುತ್ತಿರುವ ವೈದ್ಯರು, ತಳಮಟ್ಟದ ಆಶಾ ಕಾರ್ಯಕರ್ತೆಯರು, ಅಂಬುಲೆನ್ಸ್ ಚಾಲಕರು, ಆರೋಗ್ಯ ಸಿಬ್ಬಂದಿಯಂತಹ ಬಡಪಾಯಿಗಳಿಗೆ ಇನ್ನು ವಿಮೆ ಭದ್ರತೆ ಇಲ್ಲದಂತಾಗಿರುವುದು ಖಂಡನೀಯ ಎಂದು ಸಂಘ ತಿಳಿಸಿದೆ.

ADVERTISEMENT

ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುವುದು, ಅವರನ್ನು ಭೇಟಿ ಮಾಡುವುದು ಮತ್ತಿತರ ಕಾರ್ಯಗಳಲ್ಲಿ ತೊಡಗಿದ್ದ ಯಾವುದೇ ಆರೋಗ್ಯ ವೃತ್ತಿಪರರು ಅವಘಡದಲ್ಲಿ ಸಿಲುಕಿ ಅವರು ಸಾವನ್ನಪ್ಪಿದರೆ ಅವರ ಕುಟುಂಬಕ್ಕೆ ₹ 50 ಲಕ್ಷ ವಿಮಾ ಪರಿಹಾರ ನೀಡುವ ಯೋಜನೆಯನ್ನು ಮತ್ತೆ ಜಾರಿಮಾಡಬೇಕು ಎಂದು ಒತ್ತಾಯಿಸಿದೆ.

ವಿಮಾ ಪರಿಹಾರದ ಸೌಲಭ್ಯದ ಮೂಲಕ ಮಾನಸಿಕ ಧೈರ್ಯ ನೀಡಿ, ನೈತಿಕವಾಗಿ ನಮ್ಮ ಪ್ರಭುತ್ವ ಕನಿಷ್ಠ ಜವಾಬ್ದಾರಿಯನ್ನು ಮೆರೆಯಬೇಕು ಎಂದು ಹೇಳಿದೆ.

ಒಂದನೇ ಅಲೆಯಲ್ಲಿ 10ಕ್ಕೂ ಹೆಚ್ಚು ಆಶಾಗಳು ಜೀವ ಕಳೆದುಕೊಂಡಿದ್ದಾರೆ. ಕೇವಲ ಒಬ್ಬ ಆಶಾ ಕುಟುಂಬಕ್ಕೆ ₹ 50 ಲಕ್ಷ ವಿಮೆ ಬಂದಿದೆ. ಉಳಿದ ಕುಟುಂಬಗಳು ವಿಮೆ ಇಲ್ಲದೆ ಸಂಕಷ್ಟದಲ್ಲಿ ಇದ್ದಾರೆ. ಈ ಬಗ್ಗೆ ಅಧಿಕಾರಿಗಳೊಂದಿಗೆ ಹಲವಾರು ಬಾರಿ ಚರ್ಚಿಸಲಾಗಿದೆ, ಮನವಿ ನೀಡಲಾಗಿದೆ. ಇಲ್ಲಿಯವರೆಗೆ ಸ್ಪಂದನೆ ಇಲ್ಲ. ಮುಂದೆ ಸಿಗಬಹುದು ಎನ್ನುವ ನಿರೀಕ್ಷೆಯಲ್ಲಿರುವರು. ಈ ಬಗ್ಗೆ ಕೂಡಲೇ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಂಘದ ಜಿಲ್ಲಾ ಘಟಕದ ಅಧ್ಯಕ್ಷಮಲ್ಲಿಕಾರ್ಜುನ ಎಚ್.ಟಿ. ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.