ADVERTISEMENT

ವಿಜಯಪುರ: ಒಂದೇ ಕುಟುಂಬದ ಐವರು ಸೇರಿ ಆರು ಜನರಲ್ಲಿ ಕೋವಿಡ್‌–19 ದೃಢ

ಮಹಾರಾಷ್ಟ್ರ ಸಂಪರ್ಕ; ಗೋಳಗುಮ್ಮಟ ಪ್ರದೇಶ ಸೀಲ್‍ಡೌನ್

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2020, 14:10 IST
Last Updated 12 ಏಪ್ರಿಲ್ 2020, 14:10 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಿಜಯಪುರ: ಒಂದೇ ಕುಟುಂಬದ ಐವರು ಸೇರಿದಂತೆ ನಗರದ ಒಟ್ಟು ಆರು ಜನರಲ್ಲಿ ಭಾನುವಾರ ಕೋವಿಡ್‌–19 ದೃಢಪಟ್ಟಿದೆ.

ನೆರೆಯ ಜಿಲ್ಲೆಗಳಲ್ಲಿ ಕೋವಿಡ್‌–19 ಪ್ರಕರಣಗಳು ವರದಿಯಾಗಿದ್ದರೂ ಜಿಲ್ಲೆಯಲ್ಲಿ ಮಾತ್ರ ಇದುವರೆಗೆ ಒಂದೂ ಪ್ರಕರಣ ಪತ್ತೆಯಾಗಿರಲಿಲ್ಲ. ಇದೀಗ ಏಕಾಏಕಿ ಆರು ಜನರಲ್ಲಿ ಸೋಂಕು ದೃಢವಾಗಿರುವುದು ನಗರದ ಜನರ ಆತಂಕವನ್ನು ಹೆಚ್ಚಿಸಿದೆ.

ಗೋಳಗುಮ್ಮಟ ಸಮೀಪದ ಚಪ್ಪರಬಂದ್‌ ಪ್ರದೇಶದ 10 ವರ್ಷದ ಬಾಲಕ (ಪಿ230), 12 ವರ್ಷ ವಯಸ್ಸಿನ ಬಾಲಕಿ (ಪಿ229), 13 ವರ್ಷದ ಬಾಲಕ (ಪಿ228), 20 ವರ್ಷದ ಯುವತಿ (ಪಿ232), 49 ವರ್ಷ ವಯಸ್ಸಿನ ಪುರುಷ (ಪಿ231) ಒಂದೇ ಕುಟುಂಬದವರಾಗಿದ್ದಾರೆ ಎಂದುಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ ತಿಳಿಸಿದರು.

ADVERTISEMENT

ಈ ಕುಟುಂಬದಲ್ಲಿ ಒಟ್ಟು 12 ಜನರಿದ್ದು, ಉಳಿದ ಏಳು ಜನರ ವರದಿ ನೆಗೆಟಿವ್‌ ಬಂದಿದೆ ಎಂದು ಹೇಳಿದರು.

ಸ್ಥಿತಿ ಗಂಭೀರ:60 ವರ್ಷ ವಯಸ್ಸಿನ ಇನ್ನೊಬ್ಬ ಮಹಿಳೆ (ಪಿ221)ಗೆ ಕೋವಿಡ್‌–19 ದೃಢಪಟ್ಟಿದ್ದು, ಕೃತಕ ಉಸಿರಾಟ ವ್ಯವಸ್ಥೆ ಮಾಡಲಾಗಿದೆ. ಈ ಮಹಿಳೆಯ 69 ವರ್ಷ ವಯಸ್ಸಿನ ಪತಿಯ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಇವರ ಕೋವಿಡ್‌–19 ಪರೀಕ್ಷೆಯ ವರದಿ ಇನ್ನೂ ಬಂದಿಲ್ಲ ಎಂದು ಹೇಳಿದರು.

ಸೋಂಕು ದೃಢಪಟ್ಟಿರುವ 60 ವರ್ಷ ವಯಸ್ಸಿನ ಮಹಿಳೆಯ ಮನೆಯಲ್ಲಿ ಒಟ್ಟು 23 ಜನ ಸದಸ್ಯರಿದ್ದಾರೆ. ಕೋವಿಡ್‌–19 ಆಸ್ಪತ್ರೆಯಾಗಿ ಬದಲಾಯಿಸಲಾಗಿರುವ ಜಿಲ್ಲಾಸ್ಪತ್ರೆಯಲ್ಲಿ ಎಲ್ಲರನ್ನು ಐಸೋಲೋಶನ್‌ನಲ್ಲಿ ಇಡಲಾಗಿದೆ ಎಂದರು.

ಮಹಾರಾಷ್ಟ್ರ ಸಂಪರ್ಕ:ಎರಡೂ ಕುಟುಂಬಗಳಿಗೆ ಸೋಂಕು ಮಹಾರಾಷ್ಟ್ರ ಸಂಪರ್ಕದಿಂದ ತಗುಲಿರಬಹುದು ಎಂಬ ಶಂಕೆ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಈ ಕುರಿತು ಪೊಲೀಸ್ ಮತ್ತು ಆರೋಗ್ಯ ಇಲಾಖೆಯಿಂದ ತನಿಖೆ ಮುಂದುವರಿದಿದೆ ಎಂದು ಅವರು ತಿಳಿಸಿದರು.

ಕೋವಿಡ್‌–19 ದೃಢವಾಗಿರುವ ಆರು ಜನರ ಜೊತೆ ಸಂಪರ್ಕಕ್ಕೆ ಬಂದಿರುವ 160 ಜನರ ಗಂಟಲುದ್ರವವನ್ನು ಈಗಾಗಲೇ ಪರೀಕ್ಷೆಗಾಗಿ ಕಲಬುರ್ಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದರು.

ಸೀಲ್‍ಡೌನ್:ಕೋವಿಡ್‌–19 ದೃಢಪಟ್ಟಿರುವ ಗೋಳಗುಮ್ಮಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಪ್ರದೇಶವನ್ನು ಸಂಪೂರ್ಣ ಸೀಲ್‍ಡೌನ್ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.