ADVERTISEMENT

‘ಕೋವಿಡ್ ಲಕ್ಷಣ ಕಂಡುಬಂದಲ್ಲಿ 1077ಗೆ ಸಂಪರ್ಕಿಸಿ’

​ಪ್ರಜಾವಾಣಿ ವಾರ್ತೆ
Published 18 ಜೂನ್ 2020, 13:01 IST
Last Updated 18 ಜೂನ್ 2020, 13:01 IST

ವಿಜಯಪುರ: ನೆಗಡಿ, ಕೆಮ್ಮು, ಜ್ವರ ಮತ್ತು ತೀವ್ರ ಉಸಿರಾಟ ತೊಂದರೆಗಳಂತಹ ಲಕ್ಷಣಗಳಿಂದ ಯಾರಾದರೂ ಬಳಲುತ್ತಿದ್ದಲ್ಲಿ ಸ್ವಯಂ ಪ್ರೇರಿತರಾಗಿ ಸಹಾಯವಾಣಿ ಸಂಖ್ಯೆ 1077ಗೆ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಮನವಿ ಮಾಡಿದರು.

ಸಹಾಯವಾಣಿ ಸಂಖ್ಯೆಗೆ ಬೆಳಿಗ್ಗೆ 8 ರಿಂದ ರಾತ್ರಿ 8 ರವರೆಗೆ ನೀಡಬಹುದಾಗಿದೆ. ಕೋವಿಡ್-19 ನಿಯಂತ್ರಣದ ಸದುದ್ದೇಶದಿಂದ ಈ ಸೌಲಭ್ಯ ಕಲ್ಪಿಸಿದ್ದು, ಯಾರಾದರು ತಪ್ಪು ಅಥವಾ ಸುಳ್ಳು ಮಾಹಿತಿ ನೀಡಿದಲ್ಲಿ ಅಂತಹವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಮಹಾನಗರ ಪಾಲಿಕೆ ವ್ಯಾಪ್ತಿಯ ನಾಗರಿಕರಿಗೆ ಸಂಬಂಧಪಟ್ಟಂತೆ ಜಿಲ್ಲಾಸ್ಪತ್ರೆಯಲ್ಲಿ ಮತ್ತು ಆಯಾ ತಾಲ್ಲೂಕುಗಳ ನಾಗರಿಕರಿಗೆ ಸಂಬಂಧಿಸಿದಂತೆ ಆಯಾ ತಾಲ್ಲೂಕು ಆಸ್ಪತ್ರೆಗಳಲ್ಲಿ ಮತ್ತು ಎಲ್ಲ ಸಮುದಾಯ ಆರೋಗ್ಯ ಕೇಂದ್ರ (ಸಿ.ಎಚ್.ಸಿ) ಗಳಲ್ಲಿ ಉಚಿತವಾಗಿ ಗಂಟಲು ದ್ರವ ಮಾದರಿ ಸಂಗ್ರಹಿಸುವ ವ್ಯವಸ್ಥೆ ಮಾಡಲಾಗಿದ್ದು, ಮೇಲ್ಕಂಡ ಲಕ್ಷಣವುಳ್ಳವರು ತಕ್ಷಣ ಇಲ್ಲಿ ಸಂಪರ್ಕಿಸಲು ಅವರು ತಿಳಿಸಿದರು.

ADVERTISEMENT

ಇಂಡಿ ತಾಲ್ಲೂಕಿಗೆ ಸಂಬಂಧಪಟ್ಟಂತೆ ಚಡಚಣ ಮತ್ತು ತಡವಲಗಾ ಸಿ.ಎಚ್.ಸಿ, ಸಿಂದಗಿ ತಾಲ್ಲೂಕಿಗೆ ಸಂಬಂಧಪಟ್ಟಂತೆ ಆಲಮೇಲ ಹಾಗೂ ಮೋರಟಗಿ, ಬಾಗೇವಾಡಿ ತಾಲ್ಲೂಕಿಗೆ ಸಂಬಂಧಪಟ್ಟಂತೆ ನಿಡಗುಂದಿ ಸಿ.ಎಚ್.ಸಿ, ಮುದ್ದೇಬಿಹಾಳ ತಾಲ್ಲೂಕಿಗೆ ಸಂಬಂಧಪಟ್ಟಂತೆ ತಾಳಿಕೋಟೆ ಮತ್ತು ನಾಲತವಾಡ ಸಿ.ಎಚ್.ಸಿ ಗಳನ್ನು ಸಂಪರ್ಕಿಸಿ ಗಂಟಲು ದ್ರವವನ್ನು ಪರೀಕ್ಷೆಗೆ ನೀಡಬಹುದಾಗಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.