ADVERTISEMENT

ವಿಜಯಪುರ | ಸಾವಿನ ಸಂಖ್ಯೆ ನಾಲ್ಕಕ್ಕೆ ಏರಿಕೆ

ಕಂಟೈನ್ಮೆಂಟ್ ವಲಯದ ವೃದ್ಧರ ಗಂಟಲುದ್ರವ ಪರೀಕ್ಷೆ ಕಡ್ಡಾಯ: ಡಿಸಿ

​ಪ್ರಜಾವಾಣಿ ವಾರ್ತೆ
Published 19 ಮೇ 2020, 15:30 IST
Last Updated 19 ಮೇ 2020, 15:30 IST
ಕೊರೊನಾ ವೈರಸ್‌
ಕೊರೊನಾ ವೈರಸ್‌   

ವಿಜಯಪುರ: ಕೋವಿಡ್‌–19 ಸೋಂಕಿನಿಂದ ಸೋಮವಾರ ವೃದ್ಧರೊಬ್ಬರು ಸಾವಿಗೀಡಾಗಿದ್ದು, ಈ ಮೂಲಕ ಜಿಲ್ಲೆಯಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ.

ಇಲ್ಲಿನ ಚಪ್ಪರಬಂದ್‌ ಕಂಟೈನ್ಮೆಂಟ್‌ ಪ್ರದೇಶದ 65 ವರ್ಷ ವಯಸ್ಸಿನ ವ್ಯಕ್ತಿಗೆ(ಪಿ1291) ಸೋಮವಾರ ಏಕಾಏಕಿ ಅಧಿಕ ರಕ್ತದ ಏರೊತ್ತಡ, ಎದೆನೋವು ಕಾಣಿಸಿಕೊಂಡಾಗ ಕುಟುಂಬದವರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ನ್ಯುಮೋನಿಯಾದಿಂದ ಬಳಲುತ್ತಿರುವುದು ಖಚಿತವಾಗುತ್ತಿದ್ದಂತೆಯೇ ಜಿಲ್ಲಾಸ್ಪತ್ರೆಗೆ ಸಾಗಿಸುವ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ, ಮಾರ್ಗಮಧ್ಯದಲ್ಲಿಯೇ ಅವರು ಸಾವಿಗೀಡಾದರು.

ಆಸ್ಪತ್ರೆಗೆ ಶವ ತಂದ ನಂತರ ಗಂಟಲದ್ರವ ಸಂಗ್ರಹಿಸಿ, ಪರೀಕ್ಷೆಗೆ ಕಳುಹಿಸಲಾಗಿತ್ತು. ಅವರಿಗೆ ಸೋಂಕಿರುವುದು ದೃಢಪಟ್ಟಿದೆ ಆರೋಗ್ಯ ಇಲಾಖೆ ಸಿಬ್ಬಂದಿ ಕಂಟೈನ್ಮೆಂಟ್‌ ಪ್ರದೇಶದಲ್ಲಿ ಎರಡು ಬಾರಿ ಮನೆಮನೆಗೆ ಭೇಟಿ ನೀಡಿ ಪರೀಕ್ಷಿಸಿದ್ದರು. ಆಗ ವೃದ್ಧರಿಗೆ ಯಾವುದೇ ರೋಗ ಲಕ್ಷಣಗಳು ಕಂಡುಬಂದಿರಲಿಲ್ಲ ಎಂದು ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ ತಿಳಿಸಿದರು.

ADVERTISEMENT

ವೃದ್ಧರ ತಪಾಸಣೆ ಕಡ್ಡಾಯ:ನಗರದ ಕಂಟೈನ್ಮೆಂಟ್ ವಲಯದಲ್ಲಿನ 60 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರ ಗಂಟಲು ದ್ರವ ಮಾದರಿಯನ್ನು ಮಂಗಳವಾರದಿಂದ ವೈದ್ಯಕೀಯ ಪರೀಕ್ಷೆಗೆ ರವಾನಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಮಹಾರಾಷ್ಟ್ರದಿಂದ ಸುಮಾರು 15 ಸಾವಿರ ಜನ ಜಿಲ್ಲೆಗೆ ಆಗಮಿಸಿದ್ದಾರೆ. ಜಿಲ್ಲೆಯ ಕ್ವಾರಂಟೈನ್ ಕೇಂದ್ರಗಳಲ್ಲಿರುವ 1 ಸಾವಿರದಿಂದ 1500 ಜನರ ಗಂಟಲು ದ್ರವ ಪ್ರತಿದಿನ ಸಂಗ್ರಹಿಸಲಾಗುತ್ತಿದ್ದು, ಸರ್ಕಾರದ ನಿರ್ದೇಶನದಂತೆ ಸೂಕ್ತ ಕ್ರಮ ಜರುಗಿಸಲಾಗುತ್ತಿದೆ ಎಂದು ಅವರು ಹೇಳಿದರು.

60ಕ್ಕೆಏರಿಕೆ:ಜಿಲ್ಲೆಯಲ್ಲಿ ಕೋವಿಡ್‌ ಸೋಂಕಿತರ ಸಂಖ್ಯೆ 60ಕ್ಕೆ ಏರಿಕೆಯಾಗಿದ್ದು, ಇದರಲ್ಲಿ ಈಗಾಗಲೇ 37 ಜನ ಗುಣಮುಖರಾಗಿದ್ದಾರೆ.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.