ADVERTISEMENT

ಸಹೋದರನ ಸಾವಿನ ನಡುವೆಯೂ ಕೋವಿಡ್‌ ಪೀಡಿತರ ಸೇವೆ!

​ಪ್ರಜಾವಾಣಿ ವಾರ್ತೆ
Published 9 ಮೇ 2021, 14:33 IST
Last Updated 9 ಮೇ 2021, 14:33 IST
ಅಶೋಕ ಮಾದರ
ಅಶೋಕ ಮಾದರ   

ಇಂಡಿ: ಒಂದು ವಾರದ ಹಿಂದೆ ಸಹೋದರನ್ನು ಕಳೆದುಕೊಂಡಿರುವ ದುಃಖ ಮಾಸುವ ಮುನ್ನವೇ ಕರ್ತವ್ಯಕ್ಕೆ ಹಾಜರಾಗಿದ್ದಾರೆ ಇಂಡಿ ಪಟ್ಟಣದ ಸರ್ಕಾರಿ ಆಸ್ಪತ್ರೆಯ ಸ್ಟಾಫ್‌ ನರ್ಸ್‌ ಅಶೋಕ ಮಾದರ.

ಕೋವಿಡ್‌ ಪೀಡಿತರ ಸೇವೆಯಲ್ಲಿ ವಯಕ್ತಿಕ ಕಷ್ಟ, ನೋವು ಮರೆತು ಹೋಗುತ್ತಿದೆ. ಸರ್ಕಾರದ ಕೆಲಸ ದೇವರ ಕೆಲವೆಂದು ನಂಬಿದ್ದೇನೆ. ಜನಸಾಮಾನ್ಯರು ಸಂಕಷ್ಟದಲ್ಲಿದ್ದಾರೆ. ಅವರ ಸಂಕಷ್ಟ ನೋಡಲಾಗುತ್ತಿಲ್ಲ. ಆಸ್ಪತ್ರೆಯಲ್ಲಿ ಇದ್ದ ಸವಲತ್ತುಗಳನ್ನೇ ಉಪಯೋಗಿಸಿಕೊಂಡು ಕೋವಿಡ್ ರೋಗಿಗಳಿಗೆ ಸೇವೆ ಮಾಡುತ್ತಿದ್ದೇವೆ ಎನ್ನುತ್ತಾರೆ ಅವರು.

ಕೆಲವು ಕೋವಿಡ್ ರೋಗಿಗಳು ಗುಣಮುಖರಾಗುವ ಹಂತದಲ್ಲಿದ್ದರೂ ಕೂಡಾ ರೋಗದ ಬಗ್ಗೆ ಹೆದರುತ್ತಿದ್ದಾರೆ. ಅಂತಹ ರೋಗಿಗಳಿಗೆ ನನ್ನ ಕೈಲಾದಷ್ಟು ಧೈರ್ಯ ತುಂಬುವ ಕೆಲಸವೂ ಕೂಡಾ ಮಾಡುತ್ತಿದ್ದೇವೆ.

ADVERTISEMENT

ನಮ್ಮ ಮನೆ ಸಮೀಪವೇ ಕೆಲವು ಕೋವಿಡ್ ರೋಗಿಗಳು ಸಾವನಪ್ಪಿದ್ದು, ಅವರ ಸಂಬಂಧಿಕರ ಆಕ್ರಂದನ ನನ್ನ ಮನಸ್ಸನ್ನು ಘಾಸಿಗೊಳಿಸಿದೆ. ಇಂತಹ ಘಟನೆಗಳು ಮತ್ತೆ ಮತ್ತೆ ಸಂಭವಿಸಬಾರದು ಎಂದು ದೇವರಲ್ಲಿ ಪ್ರಾರ್ಥಿಸಿಕೊಂಡು ಸೇವೆಯಲ್ಲಿದ್ದೇನೆ.

ಕೋವಿಡ್ ರೋಗಳಿಗೆ ತುರ್ತಾಗಿ ಆಮ್ಲಜನಕ, ವೆಂಟಿಲೇಟರ್‌, ರೆಮ್‌ಡಿಸಿವಿರ್‌ ಸೌಲಭ್ಯಗಳು ಲಭ್ಯವಾಗುತ್ತಿಲ್ಲ. ಇದರಿಂದಾಗಿ ಸಅವು,ನೋವು ಹೆಚ್ಚಾಗಿದೆ. ಈ ಸೌಲಭ್ಯ ಹೆಚ್ಚಿನ ಪ್ರಮಾಣದಲ್ಲಿ ಲಭಿಸಿದರೆ ಸಾವು ನೋವುಗಳ ಸಂಖ್ಯೆ ಕಡಿಮೆಗೊಳಿಸಬಹುದು.

ಆಸ್ಪತ್ರೆಯಲ್ಲಿ ದಾಖಲಾಗಿರುವ ಕೋವಿಡ್ ರೋಗಿಗಳಿಗೆ ಅವರ ಸಂಬಂಧಿಕರನ್ನು ಭೇಟಿ ಮಾಡಲು ಬಿಡುತ್ತಿಲ್ಲ. ಹೊರಗಡೆ ಉಳಿದುಕೊಂಡಿರುವ ಅವರ ಸಂಬಂಧಿಕರಿಗೆ ಸಮಯ ಸಿಕ್ಕಾಗ ರೋಗಿಗಳ ಪರಿಸ್ಥಿತಿಯ ಬಗ್ಗೆ ಮನವರಿಕೆ ಮಾಡಿ, ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದೇನೆ. ಈ ನನ್ನ ಕೆಲಸ ನನಗೆ ಸಂಪೂರ್ಣ ತೃಪ್ತಿ ತಂದಿದೆ ಎನ್ನುತ್ತಾರೆ ಅಶೋಕ ಮಾದರ.

ನಿರೂಪರಣೆ: ಎ.ಸಿ.ಪಾಟೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.