
ಸಿಂದಗಿ: ಕೃಷಿಗೆ, ಹೈನುಗಾರಿಕೆಗೆ ಅತ್ಯಂತ ಪೂರಕ ಎಂಬ ದೂರದೃಷ್ಠಿಯಿಂದ ಮುಖ್ಯಮಂತ್ರಿ ಸಿದ್ಧರಾಮಯ್ಯ ಸರ್ಕಾರ ಹಸುಗಳನ್ನು ನೀಡುವ ಮೂಲಕ ಹೈನುಗಾರಿಕೆಗೆ ಉತ್ತೇಜನ ಕೊಡುತ್ತಿದ್ದಾರೆ. ಅಂತೆಯೇ ಮತಕ್ಷೇತ್ರದ ರಾಂಪೂರ ಪಿ.ಎ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಗ್ರಾಮಗಳ ರೈತ ಫಲಾನುಭವಿಗಳಿಗೆ ತಲಾ ₹30 ಸಾವಿರ ಮೊತ್ತದ 33 ಹಸುಗಳನ್ನು ನೀಡಲಾಗಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಪಟ್ಟಣದ ಕೃಷಿ ಸಹಾಯಕ ನಿರ್ದೇಶಕರ ಕಾರ್ಯಾಲಯದ ಆವರಣದಲ್ಲಿ ಬುಧವಾರ ಜಲಾನಯನ ಅಭಿವೃದ್ಧಿ ಇಲಾಖೆ ರಫ್ತಾರ್ ಯೋಜನೆಯಡಿ ಹಸುಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಿ ಮಾತನಾಡಿದರು.
ರೈತರು ಕೃಷಿಗೆ ಸಂಬಂಧಿತ ಯೋಜನೆಗಳನ್ನು ಸದುಪಯೋಗ ಪಡೆದುಕೊಳ್ಳಬೇಕು. ಈಗ ಪಡೆದುಕೊಂಡ ಹಸುಗಳನ್ನು ಹೈನುಗಾರಿಕೆಯಿಂದ ಆರ್ಥಿಕ ಸಬಲೀಕರಣಗೊಳ್ಳಬೇಕು. ಯಾವುದೇ ಕಾರಣಕ್ಕೂ ಹಸುಗಳನ್ನು ಮಾರಾಟ ಮಾಡಕೂಡದು ಎಂದು ಅವರು ಮನವಿ ಮಾಡಿದರು.
‘ಕೃಷಿಗೆ ಪೂರಕವಾಗಿರುವ ಕುರಿ ಸಾಕಾಣಿಕೆಯಂಥ ಯೋಜನೆಗಳ ಲಾಭ ಪಡೆದುಕೊಳ್ಳಬೇಕು. ನಾನು ಶಾಸಕನಾಗುವ ಪೂರ್ವದಲ್ಲಿ 70 ಆಕಳ ಸಾಕಾಣಿಕೆಯಲ್ಲಿ ತೊಡಗಿಕೊಂಡಿದ್ದೆ. ಈ ಭಾಗದ ರೈತರಲ್ಲಿ ಕಬ್ಬು ಬೆಳೆ ಸಾಮಾನ್ಯವಾಗಿದೆ. ಇದು ಮಾತ್ರವಲ್ಲದೇ ಬೇರೆ, ಬೇರೆ ಬೆಳೆಗಳನ್ನು ಪ್ರತಿ ಮೂರು ವರ್ಷಕ್ಕೊಮ್ಮೆ ಬದಲಿಸಬೇಕು’ ಎಂದು ತಿಳಿಸಿದರು.
ಕೃಷಿಕ ಸಮಾಜ ತಾಲ್ಲೂಕು ಶಾಖೆ ಅಧ್ಯಕ್ಷ ಶಿವಪ್ಪಗೌಡ ಬಿರಾದಾರ ಮಾತನಾಡಿ, ಜಾನುವಾರಗಳಿಲ್ಲದ ಕೃಷಿ ಕೃಷಿಯೇ ಅಲ್ಲ. ಪ್ರಸ್ತುತ ಪಡೆದುಕೊಂಡ ಹಸುಗಳನ್ನು ಮಾರಾಟ ಮಾಡಬೇಡಿ ಎಂದು ರೈತರಲ್ಲಿ ಕೇಳಿಕೊಂಡರು.
ಕೃಷಿ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ಮಾತನಾಡಿ, ಕೃಷಿ ಎಂದರೆ ಬೆಳೆ ಬೆಳೆಯುವದಲ್ಲ. ಅದಕ್ಕೆ ಪೂರಕವಾಗಿ ಸಮಗ್ರ ಕೃಷಿಗೆ ಪೂರಕವಾದ ಹಸುಗಳು ಸಾವಯವ ಕೃಷಿಗೆ ಅತ್ಯಂತ ಉಪಯುಕ್ತ. ಹಾಲು ಉತ್ಪಾದನೆ ಜೊತೆಗೆ ಸೆಗಣಿ, ಗಂಜಲು ಅತ್ಯತ್ತಮವಾದ ಸಾವಯವ ಗೊಬ್ಬರವಾಗುವುದು. ಆಲಮೇಲ ಪಟ್ಟಣದಲ್ಲಿ ಹತ್ತಿ ಖರೀದಿ ಕೇಂದ್ರ ಪ್ರಾರಂಭಗೊಂಡಿದೆ. ರೈತರು ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಸಿಂದಗಿ, ದೇವರಹಿಪ್ಪರಗಿ ಮತ್ತು ಆಲಮೇಲ ಮೂರು ತಾಲ್ಲೂಕುಗಳಲ್ಲಿ ಕೇವಲ ಮೂವರು ಕೃಷಿ ಅಧಿಕಾರಿಗಳಿದ್ದಾರೆ. ಕೊರತೆ ಪರಿಹಾರಕ್ಕಾಗಿ ಶಾಸಕರಲ್ಲಿ ಕೇಳಿಕೊಂಡರು.
ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸುರೇಶ ಪೂಜಾರಿ ಮಾತನಾಡಿದರು. ಕೃಷಿ ಸಹಾಯಕ ನಿರ್ದೇಶಕ ಪ್ರಶಾಂತ ಸಾಣಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕೃಷಿ ಉಪನಿರ್ದೇಶಕ ಚಂದ್ರಕಾಂತ ಪವಾರ, ಪ್ರಗತಿಪರ ರೈತ ಭಾಗಪ್ಪಗೌಡ ಪಾಟೀಲ ಆಹೇರಿ, ಎಪಿಎಂಸಿ ಅಧ್ಯಕ್ಷ ಕಲ್ಲಪ್ಪ ನಾಯ್ಕೋಡಿ, ನಗರಾಭಿವೃದ್ದಿ ಯೋಜನಾ ಪ್ರಾಧಿಕಾರ ಅಧ್ಯಕ್ಷ ಬಸವರಾಜ ಕಾಂಬಳೆ, ಬಸಯ್ಯ ಹಿರೇಮಠ, ಸಂದೀಪ ಚೌರ, ನಿಂಗಣ್ಣ ಬುಳ್ಳಾ, ಮಹಾನಂದ ಬಮ್ಮಣ್ಣಿ ಪಾಲ್ಗೊಂಡಿದ್ದರು.
ಶಾಸಕ ಅಶೋಕ ಮನಗೂಳಿ ಅವರು ಹುಡುಕಿ ಹೊಸ ಯೋಜನೆಗಳನ್ನು ತರುತ್ತಿದ್ದಾರೆ. ನಾನು ವಿರೋಧಪಕ್ಷದವನಾಗಿದ್ದರೂ ಅವರ ಕಾರ್ಯ ಮೆಚ್ಚುತ್ತೇನೆ. ಜೋಡೆತ್ತಿನ ಕೃಷಿಕರಿಗೆ ಪ್ರೋತ್ಸಾಹಿಸುವ ಕಾರ್ಯ ಶಾಸಕರಿಂದ ಆಗಬೇಕು–ಅಶೋಕ ಅಲ್ಲಾಪೂರ, ಲಿಂಬೆ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ
ಈ ಯೋಜನೆಯಿಂದ ಹಿಂದಿನ ವರ್ಷ ಹಲವರು ಸರ್ಕಾರದ ಹಣ ಪಡೆದುಕೊಂಡರು. ಆದರೆ ಹಸು ಖರೀದಿಸಲೇ ಇಲ್ಲ. ಆದರೆ ಈ ಬಾರಿ ಹಸುಗಳನ್ನೇ ವಿತರಣೆ ಮಾಡುತ್ತಿರುವ ಶಾಸಕರ ಯೋಚನೆ ಅಭಿನಂದನಾರ್ಹಗಂಗಾಧರ ಚಿಂಚೋಳಿ, ಸರ್ಕಾರದ ನಾಮನಿರ್ದೇಶಿತ ಕೆಡಿಪಿ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.