ADVERTISEMENT

ಅತ್ಯಾಚಾರ, ಕೊಲೆ ಪ್ರಕರಣದ ತನಿಖೆ ಇನ್ನೂ ಪೂರ್ಣವಾಗಿಲ್ಲ: ಎಸ್‌ಪಿ

​ಪ್ರಜಾವಾಣಿ ವಾರ್ತೆ
Published 24 ಮೇ 2021, 16:23 IST
Last Updated 24 ಮೇ 2021, 16:23 IST
ಅನುಪಮ್ ಅಗರವಾಲ್
ಅನುಪಮ್ ಅಗರವಾಲ್   

ವಿಜಯಪುರ: ‘ಬಾಗೇವಾಡಿ ತಾಲ್ಲೂಕಿನ ಗ್ರಾಮವೊಂದರ ಇಬ್ಬರು ಬಾಲಕಿಯರನ್ನು ಅತ್ಯಾಚಾರ ಮಾಡಿ, ಕೊಲೆಗೈದಿರುವ ಪ್ರಕರಣವನ್ನು ಮುಚ್ಚಿಹಾಕುವ ಹುನ್ನಾರ ನಡೆದಿದೆ’ ಎಂದು ಜಿಲ್ಲೆಯ ವಿವಿಧ ಸಂಘಟನೆಗಳ ಮುಖಂಡರಾದ ಅಡಿವೆಪ್ಪ ಸಾಲಗಲ್, ಉಮೇಶ ನಡುವಿನಮನಿ, ದೇವೇಂದ್ರ ಹಾದಿಮನಿ, ಗುರುರಾಜ ಗುಡಿಮನಿ, ಸಂಜು ಕಂಬಾಗಿ ಮತ್ತಿತರರು ಆರೋಪಿಸಿದ್ದಾರೆ.

ಈ ಸಂಬಂಧ ‘ಪ್ರಜಾವಾಣಿ’ಗೆ ಸೋಮವಾರ ಕರೆ ಮಾಡಿ ಮಾತನಾಡಿದ ಸಂಘಟನೆಗಳ ಮುಖಂಡರು, ‘ಬಾಲಕಿಯರ ಅತ್ಯಾಚಾರ, ಕೊಲೆ ಪ್ರಕರಣವನ್ನು ಆತ್ಮಹತ್ಯೆ ಎಂದು ಬಿಂಬಿಸುವ ಹುನ್ನಾರ ನಡೆದಿದೆ. ಇದು ಸಂಪೂರ್ಣ ಸುಳ್ಳು’ ಎಂದು ಹೇಳಿದರು.

‘ದುಷ್ಕರ್ಮಿಗಳು ಬಾಲಕಿಯರನ್ನು ಗ್ಯಾಂಗ್‌ ರೇಪ್‌ ಮಾಡಿ, ಕೊಲೆಗೈದು ಬಳಿಕ ಅವರ ಕೈಗಳನ್ನು ಕಟ್ಟಿ ಬಾವಿಗೆ ಎಸೆದಿದ್ದಾರೆ. ಪ್ರಕರಣದ ಹಿಂದೆ ಪ್ರಭಾವಿ ರಾಜಕಾರಣಿಗಳ ಕೈವಾಡವಿದ್ದು, ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ADVERTISEMENT

‘ಸಂತ್ರಸ್ತ ಬಾಲಕಿಯರ ಕುಟುಂಬಕ್ಕೆ ಸರ್ಕಾರ ಹೆಚ್ಚಿನ ಪರಿಹಾರ ನೀಡಬೇಕು. ಮುಂದೆ ಇಂತಹ ಘಟನೆಗಳು ಜಿಲ್ಲೆ, ರಾಜ್ಯದಲ್ಲಿ ನಡೆಯದಂತೆ ಸರ್ಕಾರ, ಪೊಲೀಸರು ಎಚ್ಚರ ವಹಿಸಬೇಕು’ ಎಂದು ಒತ್ತಾಯಿಸಿದರು.

ಕಠಿಣ ಶಿಕ್ಷೆಗೆ ಆಗ್ರಹ

‘ಬಾಲಕಿಯರನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಆರೋಪಿಗಳನ್ನು ಕಾನೂನು ಪ್ರಕಾರ ಕಠಿಣ ಶಿಕ್ಷೆಗೆ ಒಳಪಡಿಸಬೇಕು’ ಎಂದು ದಲಿತ ಸಮನ್ವಯ ಸಮಿತಿ ರಾಜ್ಯ ಸಂಚಾಲಕ ಅಡಿವೆಪ್ಪ ಸಾಲಗಲ್ ಅಗ್ರಹಿಸಿದ್ದಾರೆ.

ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರನ್ನು ನಗರದ ಪ್ರವಾಸಿ ಮಂದಿರದಲ್ಲಿ ಭೇಟಿ ಮಾಡಿ ಈ ಸಂಬಂಧ ಅವರು ಮನವಿ ಸಲ್ಲಿಸಿದ್ದಾರೆ.

‘ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ರಕ್ಷಣೆ ಮಾಡುವಲ್ಲಿ ವಿಫಲವಾಗಿದೆ. ದಲಿತ ವಿರೋಧಿ ಧೋರಣೆ ತೋರುತ್ತಿರುವುದು ಖಂಡನೀಯ’ ಎಂದಿದ್ದಾರೆ.

‘ಕಾರಜೋಳ ಅವರು ಮಧ್ಯಪ್ರವೇಶಿಸಿ ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಕೊಡಮಾಡುವ ಪರಿಹಾರ ಧನ ಶೀಘ್ರದಲ್ಲೇ ಮಂಜೂರು ಮಾಡಬೇಕು’ ಎಂದು ದಲಿತ ಸಮನ್ವಯ ಸಮಿತಿ ರಾಜ್ಯ ಸಂಚಾಲಕರಾದ ಅಡಿವೆಪ್ಪ ಸಾಲಗಲ್, ಮಲ್ಲು ಬನಸೋಡೆ, ಸಿದ್ದಾರ್ಥ ಪರನಾಕರ, ಸುರೇಶ ಬಬಲೇಶ್ವರ, ಸಂಜೀವ ತೊರವಿ, ಬಸವರಾಜ ಪಡಗಾನೂರ, ಸುನೀಲ ದ್ಯಾಬೇರಿ, ಮನೋಜ ಪರನಾಕರ, ದತ್ತಾತ್ರೇಯ ಉಕ್ಕಲಿ, ರೂಪೇಶ ಪೀರಾಕರ ಒತ್ತಾಯ ಮಾಡಿದರು.

ಖಂಡನೆ: ‘ಪುನೀತ್ ಎಂಬ ಯುವಕನಿಗೆ ಮೂತ್ರ ಕುಡಿಸಿರುವ ಚಿಕ್ಕಮಗಳೂರು ಜಿಲ್ಲೆ ಗೋಣಿಬೀಡು ಪಿಎಸ್‍ಐ ಕ್ರಮ ಅಮಾನವೀಯ. ಈ ಕೂಡಲೇ ಪಿಎಸ್‍ಐ ತಲೆದಂಡವಾಗಲೇಬೇಕು’ ಎಂದು ಕರ್ನಾಟಕ ರಾಜ್ಯ ದಲಿತ ಸಮನ್ವಯ ಸಮಿತಿ ಆಗ್ರಹ ಪಡಿಸಿದೆ.

***

ಬಾಲಕಿಯರ ಅತ್ಯಾಚಾರ, ಕೊಲೆ ಪ್ರಕರಣದ ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ಅದರ ಸಂಪೂರ್ಣ ತನಿಖೆ ಮತ್ತು ಮರಣೋತ್ತರ ಪರೀಕ್ಷಾ ವರದಿ ಬಂದ ಬಳಿಕ ಸತ್ಯಾಂಶ ತಿಳಿಯಲಿದೆ. ಅಪರಾಧಿಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು

-ಅನುಪಮ್‌ ಅಗರವಾಲ್‌,ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.