ADVERTISEMENT

ನಾಲತವಾಡ | 'ಶೀಘ್ರ ಬೆಳೆ ಪರಿಹಾರ ನೀಡದಿದ್ದರೆ ಉಗ್ರ ಹೋರಾಟ'

ರಾಜ್ಯ ಸರ್ಕಾರಕ್ಕೆ ರೈತರ ಎಚ್ಚರಿಕೆ: ಸಿ.ಎಂ ಸಿದ್ದರಾಮಯ್ಯ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2025, 4:57 IST
Last Updated 19 ನವೆಂಬರ್ 2025, 4:57 IST
<div class="paragraphs"><p>&nbsp;ಪ್ರಾತಿನಿಧಿಕ ಚಿತ್ರ</p></div>

 ಪ್ರಾತಿನಿಧಿಕ ಚಿತ್ರ

   

ನಾಲತವಾಡ: ‘ಅತೀವೃಷ್ಠಿಯಿಂದ ರೈತರಿಗೆ ತೀವ್ರ ಸಂಕಷ್ಟ ಎದುರಾಗಿದೆ. 10 ದಿನದೊಳಗೆ ಬೆಳೆ ಪರಿಹಾರ ಬಿಡುಗಡೆ ಮಾಡದಿದ್ದರೆ  ರೈತ ಸಮೂಹದೊಂದಿಗೆ ಕಬ್ಬು ಬೆಳೆಗಾರರ ಹೋರಾಟದ ಮಾದರಿಯಲ್ಲಿ ಉಗ್ರ ಹೋರಾಟ ಮಾಡಲಾಗುವುದು’ ಎಂದು ಬಿಜೆಪಿ ಮುಖಂಡ ಮುತ್ತು ಸಾಹುಕಾರ ಅಂಗಡಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತಾಲ್ಲೂಕಿನಲ್ಲಿ ವಾಡಿಕೆಗಿಂತ ಹೆಚ್ಚಿನ ಪ್ರಮಾಣದ ಮಳೆ ಆಗಿದ್ದರಿಂದ ಬೆಳೆಹಾನಿಯಾಗಿ ಫಸಲು ಕೈಗೆ ಬಾರದ ಸ್ಥಿತಿ ನಿರ್ಮಾಣವಾಗಿದೆ. ಅಲ್ಪಸ್ವಲ್ಪ ಬೆಳೆ ಉಳಿದರೂ ಗುಣಮಟ್ಟದಿಂದ ಕೂಡಿಲ್ಲ’ ಎಂದರು.

ADVERTISEMENT

ರೈತ ಸಂಘಟನೆ ಮುಖಂಡ ಮಲ್ಲಿಕಾರ್ಜುನ ಸಿದರೆಡ್ಡಿ ಮಾತನಾಡಿ, ‘ಒಕ್ಕಲುತನದ ವೆಚ್ಚ ನೌಕರರ ವೇತನ ರೀತಿ ಮೂರು ಪಟ್ಟು ಹೆಚ್ಚಾಗಿದೆ. ಲಾಭ ಶೂನ್ಯವಾಗಿದೆ. ಸರ್ಕಾರ ಎನ್‌ಡಿಆರ್‌ಎಫ್ ಅಥವಾ ಎಸ್‌ಟಿಆರ್‌ಎಫ್ ಮಾದರಿಯಲ್ಲಿ ಪರಿಹಾರ ಬಿಡುಗಡೆ ಮಾಡಬೇಕು. ಇಲ್ಲದಿದ್ದಲ್ಲಿ ತಹಶೀಲ್ದಾರ್ ಕಚೇರಿ ಮುಂದೆ ಧರಣಿ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಶಶಿಧರ ಬಂಗಾರಿ ಮಾತನಾಡಿ, ‘ಪಕ್ಕದ ಕಲಬುರಗಿ ಜಿಲ್ಲೆಯಲ್ಲಿ ಪರಿಹಾರದ ಹಣ ಬಿಡುಗಡೆ ಆಗಿದೆ. ನಮ್ಮ ವಿಜಯಪುರ ಜಿಲ್ಲೆಯಲ್ಲಿ 8 ಜನ ಶಾಸಕರಿದ್ದು, ರೈತರಿಗೆ ಪರಿಹಾರ ಕೊಡಿಸುವಲ್ಲಿ ವಿಫಲರಾಗಿದ್ದಾರೆ. ತಾಲ್ಲೂಕಿನಲ್ಲಿ ರೈತರ ಹೊಲಗಳಿಗೆ ಹೋಗುವ ರಸ್ತೆ, ಕಾಲುವೆ ಹಾಳಾಗಿವೆ. ಬೆಳೆಹಾನಿ ಸಮೀಕ್ಷೆ ಮಾಡುವಾಗಲೂ ಸರ್ಕಾರ ಮೀನಮೇಷ ಎಣಿಸಿತು. ಈಗ ಪರಿಹಾರ ಕೊಡುವಾಗಲೂ ಮೀನಮೇಷ ಎಣಿಸುವ ಸರ್ಕಾರದ ಧೋರಣೆ ಖಂಡನೀಯ. ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಕ್ಟೇರ್‌ಗೆ ₹17 ಸಾವಿರ ಕೊಡುವುದಾಗಿ ತಿಂಗಳ ಹಿಂದೆ ಹೇಳಿದ್ದು, ಇದು ರೈತರ ಕಣ್ಣೊರೆಸುವ ತಂತ್ರವಾಗಿದೆ' ಎಂದು ಕಿಡಿಕಾರಿದರು.

ಮುಖಂಡ ಸಂಗಣ್ಣ ಕುಳಗೇರಿ ಮಾತನಾಡಿ, ‘ರೈತರು ಶೋಚನೀಯ ಸ್ಥಿತಿಯಲ್ಲಿದ್ದಾರೆ. ಈಗಲಾದರೂ ಪರಿಹಾರ ಹಣ ಕಲ್ಪಿಸಬೇಕು. ಇಲ್ಲದಿದ್ದರೆ ಹೋರಾಟ ಮಾಡಲಾಗುವುದು’ ಎಂದರು.

ಮುಖಂಡ ಬಾಲಚಂದ್ರ ಗದಗೀನ, ಪಿ.ಜಿ.ಬಿರಾದಾರ, ಮಲ್ಲನಗೌಡ ಸಿದರೆಡ್ಡಿ, ಶಶಿ ಬಂಗಾರಿಗೌಡ, ಗದ್ದೆಪ್ಪ ಬಂಡಿವಡ್ಡರ, ಪಾವಡಬಸು ದೇಶಮುಖ, ಬಾಪುಗೌಡ ಎಸ್. ಪಾಟೀಲ, ಸಂಗಣ್ಣ ಕುಳಗೇರಿ, ಅಜಯ ಕೋಟಿಖಾನಿ, ಸಂಗಣ್ಣ ಹಾವರಗಿ, ಗೂಲಪ್ಪ ಗಂಗನಗೌಡ್ರ, ರಾಮನಗೌಡ ಹಂಪನಗೌಡ, ಈರಣ್ಣ ಮುದನೂರ, ಚೆನ್ನಪ್ಪಗೌಡ ಹಂಪನಗೌಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.