ADVERTISEMENT

ನಾಲತವಾಡ: ಕಟಾವಿಗೆ ಬಂದ ಕಬ್ಬು, ತೊಗರಿಗೆ ಬೆಂಕಿ

​ಪ್ರಜಾವಾಣಿ ವಾರ್ತೆ
Published 10 ಜನವರಿ 2026, 2:32 IST
Last Updated 10 ಜನವರಿ 2026, 2:32 IST
ಕಟಾವಿಗೆ ಬಂದ ಕಬ್ಬು ಬೆಂಕಿಯಿಂದ ಸುಟ್ಟು ಕರಕಲಾಗಿರುವುದು
ಕಟಾವಿಗೆ ಬಂದ ಕಬ್ಬು ಬೆಂಕಿಯಿಂದ ಸುಟ್ಟು ಕರಕಲಾಗಿರುವುದು   

ನಾಲತವಾಡ: ರಕ್ಕಸಗಿ ಗ್ರಾಮದ ಹೊಲದಲ್ಲಿ ಕಟಾವಿಗೆ ಬಂದಿದ್ದ 25ಕ್ಕೂ ಹೆಚ್ಚು ಎಕರೆ ಕಬ್ಬು ಹಾಗೂ ರಾಶಿ ಮಾಡಲು ಹಾಕಿದ್ದ ತೊಗರಿ ತೆನೆಗೆ ಬೆಂಕಿ ಹೊತ್ತಿಕೊಂಡು ಹಾಳಾಗಿದೆ.

ವರ್ಷಪೂರ್ತಿ ಶ್ರಮಪಟ್ಟು ಬೆಳೆಸಿದ್ದ ಕಬ್ಬನ್ನು ಇನ್ನೇನು ಕಟಾವು ಮಾಡಿ ಕಾರ್ಖಾನೆಗೆ ಕಳುಹಿಸಬೇಕಿತ್ತು. ಆದರೆ, ಬೆಂಕಿ ಹೊತ್ತಿಕೊಂಡಿದ್ದರಿಂದ ಕೈಗೆ ಬಂದು ತುತ್ತು ಬಾಯಿಗೆ ಬರದಂತಹ ಸ್ಥಿತಿ ರೈತರದ್ದಾಗಿದೆ.

ವೀರಪ್ಪ ಭೀಮಶೆಪ್ಪ ಟಕ್ಕಳಕಿ ಇವರ 6 ಎಕರೆ ಪ್ರದೇಶದಲ್ಲಿ ಕಬ್ಬು ಕಟಾವು ಆರಂಭವಾಗಿತ್ತು. ಹೊಲದ ಪಕ್ಕದಲ್ಲಿ ದಾರಿಹೋಕರು ಬೀಡಿ ಸೇದಿ ಒಗೆದ ಪರಿಣಾಮ ಒಬ್ಬರ ಹೊಲಕ್ಕೆ ಹೊತ್ತಿಕೊಂಡ ಬೆಂಕಿಯು ಕೆಲವೇ ಕ್ಷಣಗಳಲ್ಲಿ ಹೊಲದಿಂದ ಮತ್ತೊಂದು ಹೊಲಕ್ಕೆ ಹತ್ತಿಕೊಳ್ಳುತ್ತಾ ಸಾಗಿದೆ.ಶರಣಪ್ಪ ಸಂಗನಬಸಪ್ಪ ಟಕ್ಕಳಕಿಯವರ 5 ಎಕರೆ,ಮಲ್ಲಪ್ಪ ಭೀ.ಟಕ್ಕಳಕಿಯವರ 6 ಎಕರೆ, ಅಶೋಕ ಹೂಗಾರ ಇವರ 2 ಎಕರೆ ಕಬ್ಬು ಸುಟ್ಟು ಕರಕಲಾಗಿದೆ.ಪಕ್ಕದಲ್ಲೇ ಇದ್ದ 6 ಎಕರೆ ಸಂಗಮೇಶ ನಾಗಪ್ಪ ಟಕ್ಕಳಕಿಯವರ ತೊಗರಿ ರಾಶಿಗೆ ಬೆಂಕಿ ಹೊತ್ತಿಕೊಂಡು ಉರಿದಿದೆ.

ಕಬ್ಬು ಕಟಾವಿಗೆ ಬಂದಿರುವುದರಿಂದ ರವದಿಯ ಪ್ರಮಾಣ ಜಾಸ್ತಿ ಇತ್ತು ಜೊತೆಗೆ ರಭಸವಾದ ಗಾಳಿ ಹೆಚ್ಚಾಗಿ,ಇದರಿಂದಾಗಿ ಬೆಂಕಿ ಹರಡುವಿಕೆ ತೀವ್ರವಾಗಿತ್ತು. ಮುದ್ದೇಬಿಹಾಳ ಅಗ್ನಿಶಾಮಕ ದಳದ ಸಿಬ್ಬಂದಿ ನಂದಿಸುವ ಕೆಲಸ ಮಾಡುತ್ತಿದ್ದಾರೆ.

ADVERTISEMENT

‘ಲಕ್ಷಾಂತರ ಖರ್ಚು ಮಾಡಿ, ವರ್ಷಪೂರ್ತಿ ದುಡಿದು ಕಬ್ಬು ಬೆಳೆದಿದ್ದೆವು. ಕಾರ್ಖಾನೆಗೆ ಕಬ್ಬು ಕಳುಹಿಸಬೇಕು ಎನ್ನುತ್ತಿರುವಾಗಲೇ ಬೆಂಕಿಯ ಅವಘಡ ನಡೆದಿದೆ. ಇದರಿಂದ ವರ್ಷದ ದುಡಿಮೆ ಕಣ್ಣು ಮುಂದೆಯೇ ಬೆಂಕಿಗೆ ಆಹುತಿಯಾಗಿದೆ’ ಎಂದು ರೈತರು ಸಂಕಷ್ಟ ತೋಡಿಕೊಂಡರು.