
ಮುದ್ದೇಬಿಹಾಳ: ‘ಗ್ಯಾರಂಟಿ ಯೋಜನೆಗಳಿಗಾಗಿ ರಾಜ್ಯ ಸರ್ಕಾರ ₹55 ಸಾವಿರ ಕೋಟಿ ರೂ.ವೆಚ್ಚ ಮಾಡುತ್ತಿದೆ.ಗ್ಯಾರಂಟಿ ಯೋಜನೆಗಳನ್ನು ಟೀಕಿಸುವವರು, ಸ್ಥಿತಿವಂತರು ಈ ಯೋಜನೆಗಳ ಲಾಭ ಪಡೆಯುವುದರ ಬದಲಿಗೆ ಬಿಟ್ಟುಕೊಡುವ ಕಾರ್ಯ ಮಾಡಿ’ ಎಂದು ಶಾಸಕ ಸಿ.ಎಸ್.ನಾಡಗೌಡ ಹೇಳಿದರು.
ಪಟ್ಟಣದ ಆಲಮಟ್ಟಿ ರಸ್ತೆಯಲ್ಲಿ ರಾಜ್ಯ ರಸ್ತೆ ಸುರಕ್ಷತಾ ನಿಧಿ ಯೋಜನೆಯಡಿ ರಾಜ್ಯ ಹೆದ್ದಾರಿ 161ರಲ್ಲಿ ಚತುಷ್ಪಥ ಅಭಿವೃದ್ಧಿ ಕಾಮಗಾರಿಗೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.
‘ಅಭಿವೃದ್ಧಿ ಮಾಡಲು ಜನ ಆಯ್ಕೆ ಮಾಡಿ ಕಳಿಸಿದ್ದಾರೆ. ನಿರೀಕ್ಷಿತ ಅಭಿವೃದ್ಧಿ ಆಗಿಲ್ಲ ಎಂಬ ಕೊರಗು ಹಲವರಲ್ಲಿದೆ. ಆದರೆ ಹಿಂದಿನ ಸರ್ಕಾರದ ₹1.20 ಲಕ್ಷ ಕೋಟಿ ಬಿಲ್ ಪಾವತಿ ಹೊಣೆಯನ್ನು ಕಾಂಗ್ರೆಸ್ ಸರ್ಕಾರದ ಮೇಲೆ ಬಿದ್ದಿವೆ’ ಎಂದು ಹೇಳಿದರು.
‘33 ಸಾವಿರ ಕೋಟಿ ರೂ.ಗುತ್ತಿಗೆದಾರರ ಬಿಲ್ ಬಾಕಿ ಇದೆ. ಅಭಿವೃದ್ಧಿ ನಿಲ್ಲದ ಹಾಗೆ ಸರ್ಕಾರ ಪ್ರಯತ್ನ ಮಾಡುತ್ತಿದೆ. ಮತಕ್ಷೇತ್ರದ ಅಭಿವೃದ್ಧಿಗೆ ಮುಖ್ಯಮಂತ್ರಿ ಎರಡು ವರ್ಷಗಳಲ್ಲಿ ಸಾಕಷ್ಟು ಅನುದಾನ ನೀಡಿದ್ದಾರೆ’ ಎಂದರು.
ಪಿಡಬ್ಲುಡಿ ಎಇಇ ಅಯ್ಯಪ್ಪಗೌಡ ರೆಡ್ಡಿ ಮಾತನಾಡಿ, ‘ಪಟ್ಟಣದ ಆಲಮಟ್ಟಿ ರಸ್ತೆಯಲ್ಲಿ 500 ಮೀ. ರಸ್ತೆಯನ್ನು ₹6.83 ಕೋಟಿ ವೆಚ್ಚದಲ್ಲಿ ಚತುಷ್ಪಥ ರಸ್ತೆಯನ್ನಾಗಿ ನಿರ್ಮಿಸಲಾಗುತ್ತಿದ್ದು, ಅಕ್ಕಪಕ್ಕದಲ್ಲಿ ಚರಂಡಿ ಮಧ್ಯದಲ್ಲಿ ವಿಭಜಕ, ಬೀದಿದೀಪ ಅಳವಡಿಸಲಾಗುತ್ತದೆ’ ಎಂದರು.
ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ, ಉಪಾಧ್ಯಕ್ಷೆ ಪ್ರೀತಿ ದೇಗಿನಾಳ, ಕೆಪಿಸಿಸಿ ಸದಸ್ಯ ರಮೇಶ ಓಸ್ವಾಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಉದ್ಯಮಿ ಎ. ಗಣೇಶ ನಾರಾಯಣಸ್ವಾಮಿ, ಸತೀಶ ಓಸ್ವಾಲ್, ಸ್ಥಾಯಿ ಸಮಿತಿ ಅಧ್ಯಕ್ಷ ಯಲ್ಲಪ್ಪ ನಾಯ್ಕಮಕ್ಕಳ, ಪ್ರಥಮ ದರ್ಜೆ ಗುತ್ತಿಗೆದಾರ ಕೆ.ಎಸ್. ಪಾಟೀಲ, ವಾಸುದೇವ ಶಾಸ್ತ್ರಿ, ಪ್ರಭುರಾಜ ಕಲ್ಬುರ್ಗಿ, ಕಾಮರಾಜ ಬಿರಾದಾರ, ಶರಣು ಸಜ್ಜನ, ಸಂಗನಗೌಡ ಬಿರಾದಾರ, ಸುರೇಶಗೌಡ ಪಾಟೀಲ ಇಂಗಳಗೇರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.