
ವಿಜಯಪುರ: ಇಂದು ಸಾಂಸ್ಕೃತಿಕ ಶಿಕ್ಷಣದ ಕೊರತೆ ಎದ್ದು ಕಾಣುತ್ತಿದೆ. ಸಾಂಸ್ಕೃತಿಕ ಶಿಕ್ಷಣ ಇಲ್ಲದ ರಾಜಕಾರಣಿಗಳು ಹಾಗೂ ವಿದ್ಯಾರ್ಥಿಗಳು ಈ ಸಮಾಜಕ್ಕೆ ಅಪಾಯಕಾರಿ. ಇದೇ ಕಾರಣಕ್ಕೆ ಇಂದಿನ ರಾಜಕಾರಣದಲ್ಲಿ ಕರ್ಕಶವಾದ ಭಾಷೆ ಪ್ರಯೋಗವಾಗುತ್ತಿದೆ. ಆಧುನಿಕ ಶಿಕ್ಷಣದೊಂದಿಗೆ ಸಾಂಸ್ಕೃತಿಕ ಶಿಕ್ಷಣ ಮತ್ತು ಸಾಮಾಜಿಕ ನಾಯಕತ್ವದ ತುರ್ತು ಅಗತ್ಯವಿದೆ ಎಂದು ಚಿಂತಕ ಡಾ.ರಹಮತ್ ತರೀಕೆರೆ ಹೇಳಿದರು.
ವಿಜಯಪುರ ನಾಗರಿಕರ ವೇದಿಕೆ ಮತ್ತು ಅಮ್ಮ ಫೌಂಡೇಶನ್ ಸಹಯೋಗದೊಂದಿಗೆ ನಗರದ ‘ಮಧುವನ’ ಹೋಟೆಲ್ ಸಭಾಂಗಣದಲ್ಲಿ ಭಾನುವಾರ ಆಯೋಜಿಸಲಾಗಿದ್ದ ರಾಷ್ಟ್ರೀಯ ಶಿಕ್ಷಣ ದಿನಾಚರಣೆ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಆಧುನಿಕ ಶಿಕ್ಷಣದಿಂದ ವೃತ್ತಿ ಜೀವನ ಸುಭದ್ರವಾಗುತ್ತಿದೆ. ಅನೇಕ ವಿದ್ಯಾರ್ಥಿಗಳು ಪ್ರತಿಭಾ ಸಂಪನ್ನರಾಗುತ್ತಿದ್ದಾರೆ. ಆದರೆ, ನಮ್ಮ ನಾಡು, ನುಡಿಯ ಸಾಂಸ್ಕೃತಿಕ ಸಿರಿವಂತಿಕೆಯ ಜ್ಞಾನದ ಅರಿವಿಲ್ಲ ಎಂದರು.
ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ದೇಶವು ಅತ್ಯಂತ ಆರೋಗ್ಯಕರ ವ್ಯಕ್ತಿಗಳ ಕೈಗೆ ಸಿಕ್ಕಿದ್ದು ಅದೃಷ್ಟ. ಮಹಾತ್ಮ ಗಾಂಧೀಜಿ, ಜವಾಹರಲಾಲ ನೆಹರು, ಸರ್ದಾರ್ ವಲ್ಲಭಭಾಯಿ ಪಟೇಲ್, ಮೌಲಾನಾ ಅಬುಲ್ ಕಲಾಂ ಆಜಾದ್, ಡಾ.ಬಿ.ಆರ್.ಅಂಬೇಡ್ಕರ್ ಪರಸ್ಪರ ಸುದೀರ್ಘವಾಗಿ ಚರ್ಚಿಸಿ, ಉದಾರತೆ, ಮಾನವೀಯತೆಯಿಂದ ದೇಶವನ್ನು ಕಟ್ಟಿದರು. ಆದರೆ, ಇಂದು ಗಾಂಧೀಜಿ, ನೆಹರು ಬಗ್ಗೆಯೂ ತುಚ್ಛವಾಗಿ ಮಾತನಾಡುವ ಕೆಟ್ಟ ಬೆಳವಣಿಗೆ ಬೆಳೆಯುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಮೌಲಾನಾ ಅಬುಲ್ ಕಲಾಂ ಆಜಾದ್ ಶ್ರೇಷ್ಠ ಧಾರ್ಮಿಕ ಪಂಡಿತರಾಗಿದ್ದರೂ ಸಹ ಆಧುನಿಕ ಶಿಕ್ಷಣವನ್ನು ಅವರು ಪ್ರತಿಪಾದಿಸಿದ್ದರು ಎಂದು ಹೇಳಿದರು.
ವಿಜಯಪುರ ಜಿಲ್ಲೆಯು ಆರ್ಥಿಕವಾಗಿ ಬಡತನ ಹೊಂದಿದ್ದರೂ ಸಾಂಸ್ಕೃತಿಕ ಸಿರಿತನ ಹೊಂದಿದ ಪ್ರದೇಶ. ನನ್ನ ಆದಿಯಾಗಿ ಅನೇಕ ಸಂಶೋಧಕರಿಗೆ ವಿಜಯಪುರ ಕರ್ಮಭೂಮಿಯಾಗಿದೆ. ಇಲ್ಲಿನ ಸಾಂಸ್ಕೃತಿಕ ಸಂಪತ್ತು, ಚಾರಿತ್ರಿಕ ಹಿನ್ನೆಲೆ, ವಿದ್ವತ್ ಸಿರಿವಂತಿಕೆ ಬಲು ದೊಡ್ಡದು. ನನ್ನ ಪ್ರತಿ ಸಂಶೋಧನೆಯಲ್ಲೂ ವಿಜಯಪುರದ ಮುದ್ರೆ ಇದ್ದೇ ಇದೆ ಎಂದು ತರೀಕೆರೆ ಹೇಳಿದರು.
ವಿಜಯಪುರ ನಾಗರಿಕ ವೇದಿಕೆ ಅಧ್ಯಕ್ಷ ಎಸ್.ಎಂ.ಪಾಟೀಲ ಗಣಿಹಾರ ಮಾತನಾಡಿ, ಮುಸ್ಲಿಮರು ಈ ದೇಶಕ್ಕೆ ಏನೂ ಕೊಡುಗೆ ನೀಡಿಲ್ಲ ಎಂಬ ಭಾವನೆ ಬಿತ್ತಲೆಯಾಗುತ್ತಿದೆ. ಮುಸ್ಲಿಮರು ಮಸೀದಿ, ಮನೆಗೆ ಸಿಮೀತವಾಗಿದೇ ನಮ್ಮ ಇತಿಹಾಸ ತಿಳಿದು, ಪ್ರಚಾರ ಮಾಡಬೇಕಿದೆ ಎಂದು ಹೇಳಿದರು.
ದೇಶದ ಶಿಕ್ಷಣ ವ್ಯವಸ್ಥೆಗೆ ಭದ್ರ ಬುನಾದಿ ಹಾಕಿದವರು ಡಾ.ಮೌಲಾನಾ ಅಬ್ದುಲ್ ಕಲಾಂ ಅಜಾದ್ ಆಗಿದ್ದಾರೆ. ದೇಶದ ಶಿಕ್ಷಣ ಮಂತ್ರಿಯಾಗಿ ಉತ್ತಮ ಕಾರ್ಯನಿರ್ವಹಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಮೊದಲ ಮುಸ್ಲಿಂ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ ಎಂದರು.
ವಿಜಯಪುರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಪರಶುರಾಮ ಭಾಸಗಿ, ಸುನೀಲ ಕಾಂಬಳೆ, ಸುರೇಶ ಬಿಜಾಪೂರ, ನಿಂಗಪ್ಪ ನಾವಿ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ ಯಡಹಳ್ಳಿ ಅವರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಎಂ.ಸಿ. ಮುಲ್ಲಾ, ಸಿಕ್ಯಾಬ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎ.ಎಸ್.ಪಾಟೀಲ, ನಿರ್ದೇಶಕ ಸಲಾದ್ದೀನ್ ಪುಣೇಕರ, ವಕೀಲ ನಾಗರಾಜ ಲಂಬು, ಫಯಾಜ್ ಕಲಾದಗಿ, ಅಮ್ಮ ಫೌಂಡೇಷನ್ ಸಂಚಾಲಕ ಕಬೂಲ್ ಕೊಕಟನೂರ, ಡಾ.ವಿ.ಎಂ.ಬಾಗಾಯತ್ ಉಪಸ್ಥಿತರಿದ್ದರು.
ಮೌಲಾನಾ ಅಬ್ದುಲ್ ಕಲಾಂ ಅಜಾದ್ ಅವರು ಶೈಕ್ಷಣಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆ ದೇಶ ಸೇವೆ ಇಂದಿನ ಪೀಳಿಗೆಗೆ ತಿಳಿದಿಲ್ಲ ಅವರ ಬಗ್ಗೆ ತಿಳಿಸುವ ಕೆಲಸವಾಗಬೇಕು.ಅರಿವಿನ ಕೊರತೆಯಿಂದಾಗಿ ಯುವಕರಿಗೆ ನೈಜ ಮಹಾತ್ಮರ ಪರಿಚಯವಾಗುತ್ತಿಲ್ಲರಫೀಕ್ ಭಂಡಾರಿ ಪತ್ರಕರ್ತ
ಜನರು ಶಿಕ್ಷಣವಂತರಾಗುದ್ದಾರೆ ಆದರೆ ಸಂಸ್ಕಾರ ಮೌಲ್ಯ ಕಳೆದುಕೊಳ್ಳುತ್ತಿದ್ದಾರೆ. ಸಾಮಾರಸ್ಯ ಜಾತ್ಯತೀತ ಧರ್ಮಾತೀತ ಸಮಾಜ ಇದ್ದಾಗ ಮಾತ್ರ ದೇಶ ಅಭಿವೃದ್ಧಿ ಸಾಧಿಸಲು ಸಾಧ್ಯ. ಈ ನಿಟ್ಟಿನಲ್ಲಿ ನಮ್ಮ ಮಕ್ಕಳನ್ನು ಬೆಳೆಸಬೇಕಾಗಿದೆಡಾ.ಪ್ರಭುಗೌಡ ಪಾಟೀಲ ವೈದ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.