ADVERTISEMENT

ವಿಜಯಪುರ | ಸೈಕ್ಲಿಂಗ್ ವೆಲೊಡ್ರೊಮ್: ಕಾಮಗಾರಿ ಪೂರ್ಣಕ್ಕೆ ಗಡುವು

ಪರಿಶೀಲಿಸಿದ ಜಿಲ್ಲಾಧಿಕಾರಿ ಟಿ.ಭೂಬಾಲನ್

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2025, 15:21 IST
Last Updated 17 ಫೆಬ್ರುವರಿ 2025, 15:21 IST
ವಿಜಯಪುರ ನಗರ ಸಮೀಪದ ಭೂತನಾಳ ಹತ್ತಿರ ನಿರ್ಮಾಣವಾಗಿರುವ ಸೈಕ್ಲಿಂಗ್ ವೆಲೋಡ್ರೊಮ್ ಸ್ಥಳಕ್ಕೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೋಮವಾರ ಭೇಟಿ ನೀಡಿ, ಕಾಮಗಾರಿ ಪರಿಶೀಲಿಸಿದರು
ವಿಜಯಪುರ ನಗರ ಸಮೀಪದ ಭೂತನಾಳ ಹತ್ತಿರ ನಿರ್ಮಾಣವಾಗಿರುವ ಸೈಕ್ಲಿಂಗ್ ವೆಲೋಡ್ರೊಮ್ ಸ್ಥಳಕ್ಕೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೋಮವಾರ ಭೇಟಿ ನೀಡಿ, ಕಾಮಗಾರಿ ಪರಿಶೀಲಿಸಿದರು   

ವಿಜಯಪುರ: ನನೆಗುದಿಗೆ ಬಿದ್ದಿರುವ ಸೈಕ್ಲಿಂಗ್ ವೆಲೊಡ್ರೊಮ್ ಕಾಮಗಾರಿಯನ್ನು ಫೆಬ್ರುವರಿ ಅಂತ್ಯಕ್ಕೆ ಪೂರ್ಣಗೊಳಿಸುವಂತೆ ಕ್ರೀಡಾ ಇಲಾಖೆ ಅಧಿಕಾರಿಗಳಿಗೆ ಹಾಗೂ ಸಂಬಂಧಿಸಿದ ಗುತ್ತಿಗೆದಾರರಿಗೆ ಜಿಲ್ಲಾಧಿಕಾರಿ ಟಿ. ಭೂಬಾಲನ್ ಸೂಚನೆ ನೀಡಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಭೂತನಾಳ ಗ್ರಾಮದ ಹತ್ತಿರ ನಿರ್ಮಾಣವಾಗಿರುವ ಸೈಕ್ಲಿಂಗ್ ವೆಲೋಡ್ರೊಮ್ ಸ್ಥಳಕ್ಕೆ ಸೋಮವಾರ ಭೇಟಿ ನೀಡಿ, ಕಾಮಗಾರಿ ಪರಿಶೀಲಿಸಿ ಅವರು ಮಾತನಾಡಿದರು.

ಸೈಕ್ಲಿಂಗ್ ವೆಲೋಡ್ರೊಮ್ ಕಾಮಗಾರಿ ಶೇ 95ರಷ್ಟು ಮುಕ್ತಾಯಗೊಂಡಿದ್ದು, ಅಲ್ಲಲ್ಲಿ ಟ್ರ್ಯಾಕ್ ಸಮತಟ್ಟುಗೊಳಿಸುವ ಹಾಗೂ ಕೆಲವು ಕಡೆ ಬಾಕಿ ಇರುವ ಪೇಂಟಿಂಗ್ ಕಾರ್ಯವನ್ನು ಒಂದು ವಾರದಲ್ಲಿ ಪೂರ್ಣಗೊಳಿಸಬೇಕು ಹಾಗೂ ಸೈಕ್ಲಿಂಗ್ ಫೆಡರೇಶನ್ ಆಫ್ ಇಂಡಿಯಾದ ಅಧಿಕಾರಿಗಳಿಂದ ಪರಿಶೀಲನೆ ನಡೆಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ADVERTISEMENT

ಅರಣ್ಯ ಇಲಾಖೆಯ ಅಧೀನದಲ್ಲಿರುವ ಜಲ ಮೂಲದಿಂದ ಸೈಕ್ಲಿಂಗ್ ವೆಲೋಡ್ರೊಮ್‌ಗೆ ಪೈಪ್‌ಲೈನ್ ಮೂಲಕ ನೀರಿನ ವ್ಯವಸ್ಥೆ ಕಲ್ಪಿಸುವಂತೆಯೂ, ವೆಲೋಡ್ರೊಮ್ ಆವರಣದಲ್ಲಿ ಸಸಿಗಳನ್ನು ನೆಡಲು ಅಗತ್ಯ ಕ್ರಮಕ್ಕಾಗಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಒಂದು ವಾರದ ಕಾಲಾವಧಿಯಲ್ಲಿ ಬಾಕಿ ಇರುವ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಲು ತಿಳಿಸಿದರು.

ವಿಜಯಪುರ ಉಪವಿಭಾಗಾಧಿಕಾರಿ ಗುರುನಾಥ ದಡ್ಡೆ, ವಿಜಯಪುರ ತಹಶೀಲ್ದಾರ್‌ ಪ್ರಶಾಂತ ಚನಗೊಂಡ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಜಿ.ಎನ್.ಮಲಜಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರಾಜಶೇಖರ್ ದೈವಾಡಿ, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.