ADVERTISEMENT

ಬಿಎಲ್‌ಡಿಇ ಆಸ್ಪತ್ರೆಗೆ ಡಿಸಿ ಭೇಟಿ; ಪರಿಶೀಲನೆ

ಕೋವಿಡ್ ತೀವ್ರತರ ರೋಗ ಲಕ್ಷಣ ಹೊಂದಿರುವ ರೋಗಿಗಳಿಗೆ ತಕ್ಷಣ ಚಿಕಿತ್ಸೆಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 4 ಮೇ 2021, 14:40 IST
Last Updated 4 ಮೇ 2021, 14:40 IST
ವಿಜಯಪುರ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ನೇತೃತ್ವದಲ್ಲಿ ವಿಶೇಷ ತಜ್ಞ ವೈದ್ಯರ ತಂಡ ನಗರದ ಬಿಎಲ್‌ಡಿಇ ವೈದ್ಯಕೀಯ ಮಹಾವಿದ್ಯಾಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು
ವಿಜಯಪುರ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ನೇತೃತ್ವದಲ್ಲಿ ವಿಶೇಷ ತಜ್ಞ ವೈದ್ಯರ ತಂಡ ನಗರದ ಬಿಎಲ್‌ಡಿಇ ವೈದ್ಯಕೀಯ ಮಹಾವಿದ್ಯಾಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು   

ವಿಜಯಪುರ: ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಅವರ ನೇತೃತ್ವದಲ್ಲಿ ವಿಶೇಷ ತಜ್ಞ ವೈದ್ಯರ ತಂಡ ನಗರದ ಬಿಎಲ್‌ಡಿಇ ವೈದ್ಯಕೀಯ ಮಹಾವಿದ್ಯಾಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಕೋವಿಡ್‌-19 ರೋಗಿಗಳನ್ನು ದಾಖಲು ಮಾಡಿದ ವಾರ್ಡ್‌ಗಳನ್ನು ಪರಿಶೀಲಿಸಿ, ಸರ್ಕಾರದ ಮಾರ್ಗಸೂಚಿಗಳನ್ವಯ ಚಿಕಿತ್ಸೆ ನೀಡಲು ಜಿಲ್ಲಾಧಿಕಾರಿ ಸೂಚಿಸಿದರು.

ವೆಂಟಿಲೇಟರ್, ಎಚ್.ಎಫ್.ಎನ್.ಸಿ ಹಾಗೂ ಮಲ್ಟಿ ಫ್ಯಾರಾ ಮಾನಿಟರ್‌ಗಳ ಲಭ್ಯತೆಯ ಬಗ್ಗೆ ಪರಿಶೀಲಿಸಿ ಸುಸ್ಥಿತಿಯಲ್ಲಿಡಲು ತಿಳಿಸಿದರು.

ADVERTISEMENT

ಆಸ್ಪತ್ರೆಗೆ ದಾಖಲಾದ ತೀವ್ರತರ ರೋಗ ಲಕ್ಷಣಗಳನ್ನು ಹೊಂದಿರುವ ರೋಗಿಗಳಿಗೆ ತಕ್ಷಣ ಚಿಕಿತ್ಸೆ ಪ್ರಾರಂಭಿಸಿ ಸಾವಿನ ಪ್ರಮಾಣವನ್ನು ಕಡಿಮೆ ಮಾಡಲು ಅವರು ಸೂಚಿಸಿದರು.

ಆಮ್ಲಜನಕ ದಾಸ್ತಾನನ್ನು ಸಾಕಷ್ಟು ಪ್ರಮಾಣದಲ್ಲಿ ಸಂಗ್ರಹಿಸಿ ಯಾವುದೇ ರೋಗಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಅವರು ಸೂಚಿಸಿದರು.

ಆಸ್ಪತ್ರೆಯಲ್ಲಿ ಒಂದು ವಾರಕ್ಕಿಂತ ಹೆಚ್ಚು ಕಾಲ ದಾಖಲಾಗಿ ಉಳಿದ ರೋಗಗಳ ರಕ್ತದ ಮಾದರಿಯನ್ನು ತಪಾಸಣೆಗೆ ಕಡ್ಡಾಯವಾಗಿ ಕಳುಹಿಸಲು ಅವರು ತಿಳಿಸಿದರು.

ಬೆಡ್‌ಗಳ ಲಭ್ಯತೆ ಹಾಗೂ ಅಲಭ್ಯತೆ ಬಗ್ಗೆ ಮಾಹಿತಿಯನ್ನು ತಂತ್ರಾಂಶದಲ್ಲಿ ಕಾಲಕಾಲಕ್ಕೆ ನಮೂದಿಸಬೇಕು ಹಾಗೂ ಆಸ್ಪತ್ರೆ ಆವರಣದಲ್ಲಿ ಪ್ರದರ್ಶಿಸಬೇಕು. ಗಂಟಲು ದ್ರವ ಮಾದರಿಗಳನ್ನು ಆರ್‌ಟಿಪಿಸಿಆರ್‌ ತಪಾಸಣೆಗಾಗಿ ಸಂಗ್ರಹಿಸುವ ವೇಳೆಯಲ್ಲಿ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಗಳನ್ನು ಕಡ್ಡಾಯವಾಗಿ ಪೋರ್ಟಲ್‌ನಲ್ಲಿ ನಮೂದಿಸಲು ಅವರು ಸೂಚಿಸಿದರು.

ಆರೋಗ್ಯ ಕರ್ನಾಟಕ ಯೋಜನೆ ಅಡಿಯಲ್ಲಿ ದಾಖಲಾದ ಪ್ರಕರಣಗಳನ್ನು ಪರಿಶೀಲಿಸಿದ ಅವರು, ಪ್ರತಿ ರೋಗಿಯಿಂದ ಚಿಕಿತ್ಸೆಯ ಕುರಿತಾಗಿ ಒಪ್ಪಿಗೆ ಪತ್ರ ತೆಗೆದುಕೊಳ್ಳಲು ಅವರು ತಿಳಿಸಿದರು.

ಸರ್ಕಾರಿ ಆಸ್ಪತ್ರೆಯಿಂದ ರೆಫರಲ್ ಕಾರ್ಡ್‌ನೊಂದಿಗೆ ಕಳುಹಿಸಿಕೊಡುವ ರೋಗಿಗಳಿಗೆ ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡಲು ಅವರು ಸೂಚಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಮಹೇಂದ್ರ ಕಾಪಸೆ, ಜಿಲ್ಲಾ ಶಸ್ತ್ರ ಚಿಕಿತ್ಸ ಡಾ.ಶರಣಪ್ಪ ಕಟ್ಟಿ, ಬಿ.ಎಲ್. ಡಿ. ಇ. ವೈದ್ಯಕೀಯ ಮಹಾವಿದ್ಯಾಲಯ ವೈದ್ಯಕೀಯ ವಿಭಾಗ ಮುಖ್ಯಸ್ಥ ಡಾ.ಶರಣ ಬಡಿಗೇರ, ಅಲ್-ಅಮೀನ್ ವೈದ್ಯಕೀಯ ಮಹಾವಿದ್ಯಾಲಯ ಅನಸ್ತೇಶಿಯಾ ವಿಭಾಗ ಮುಖ್ಯಸ್ಥ ಡಾ. ರಾಜೇಂದ್ರಕುಮಾರ್, ಬಿಎಲ್‌ಡಿಇ ವೈದ್ಯಕೀಯ ಮಹಾವಿದ್ಯಾಲಯ ಔಷಧ ವಿಭಾಗ ಮುಖ್ಯಸ್ಥ ಡಾ. ಸಂತೋಷ್ ನೇಮಿಗೌಡ, ಸ್ವಯಂ ಸೇವಾ ಸಂಸ್ಥೆ ಮುಖ್ಯಸ್ಥ ಪೀಟರ್ ಅಲೆಕ್ಸಾಂಡರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.