ವಿಜಯಪುರ: ‘ವಿಜಯಪುರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ 2024–25ನೇ ಸಾಲಿನಲ್ಲಿ ₹25.18 ಕೋಟಿ ನಿವ್ವಳ ಲಾಭ ಗಳಿಸಿದ್ದು, ಬ್ಯಾಂಕಿನ ಇತಿಹಾಸದಲ್ಲಿ ಇದು ದಾಖಲೆಯಾಗಿದೆ’ ಎಂದು ಬ್ಯಾಂಕಿನ ಅಧ್ಯಕ್ಷರೂ ಆದ ಸಚಿವ ಶಿವಾನಂದ ಪಾಟೀಲ ತಿಳಿಸಿದರು.
ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರು ಸ್ವಂತ ಭೂಮಿಯಲ್ಲಿ ತೋಟದ ಮನೆ ಕಟ್ಟಲು ಗರಿಷ್ಠ ₹20 ಲಕ್ಷದ ವರೆಗೆ ಶೇ 10ರಷ್ಟು ಬಡ್ಡಿ ದರದಲ್ಲಿ 10 ವರ್ಷಗಳ ಅವಧಿ ಸಾಲವನ್ನು ರಾಜ್ಯದಲ್ಲೇ ಪ್ರಥಮ ಬಾರಿಗೆ ನೀಡಲು ಅಭಿಯಾನ ಆರಂಭಿಸಿದ್ದೇವೆ. ಈಗಾಗಲೇ 51 ರೈತರಿಗೆ ತೋಟದ ಮನೆ ಸಾಲ ನೀಡಲಾಗಿದೆ’ ಎಂದರು.
‘ರಾಜ್ಯದಲ್ಲಿ ಗರಿಷ್ಠ ಕೃಷಿ ಸಾಲ ನೀಡಿದ ಬ್ಯಾಂಕುಗಳ ಸಾಲಿನಲ್ಲಿ ವಿಜಯಪುರ ಡಿಸಿಸಿ ಬ್ಯಾಂಕ್ ಮೂರನೇ ಸ್ಥಾನದಲ್ಲಿ ಇದೆ. ₹2008 ಕೋಟಿ ಕೃಷಿ ಸಾಲ ನೀಡಲಾಗಿದೆ’ ಎಂದು ಹೇಳಿದರು.
‘2024–25ರಲ್ಲಿ 2.49 ರೈತರಿಗೆ ₹1824 ಕೋಟಿ ಬೆಳೆ ಸಾಲ ಹಾಗೂ 1273 ಕೋಟಿ ಕೃಷಿಯೇತರ ಸಾಲ ಹಾಗೂ 23 ಸಕ್ಕರೆ ಕಾರ್ಖಾನೆಗಳಿಗೆ ₹716 ಕೋಟಿ ಸಾಲ ನೀಡಲಾಗಿದೆ’ ಎಂದರು.
‘2024–25ನೇ ಸಾಲಿನಲ್ಲಿ ₹7095 ಕೋಟಿ ವ್ಯವಹಾರ ದಾಖಲಿಸಿ ಇತಿಹಾಸ ಬರೆದಿದೆ. ವರ್ಷಾಂತ್ಯಕ್ಕೆ ಬ್ಯಾಂಕಿನ ಒಟ್ಟು ಸಾಲ ಬಾಕಿ ₹3280.57 ಕೋಟಿ ಗಳಷ್ಟಿದೆ. ಇದರಲ್ಲಿ ಎನ್‌ಪಿಎ ₹170.59 ಕೋಟಿಗಳಿಷ್ಟಿದೆ. ಬ್ಯಾಂಕ್ ನಿಯಮಾನುಸಾರ ನಿಷ್ಕ್ರಿಯ ಆಸ್ತಿಗೆ ಪೂರ್ಣ ಪ್ರಮಾಣದಲ್ಲಿ ಅನುವು ಕಲ್ಪಿಸಿದ್ದು, ನೆಟ್ ಎನ್‌ಪಿಎ ಪ್ರಮಾಣ ಶೂನ್ಯವಾಗಿದೆ’ ಎಂದು ಹೇಳಿದರು.
ತರಬೇತಿ ಕೇಂದ್ರ ನಿರ್ಮಾಣ: ‘ಡಿಸಿಸಿ ಬ್ಯಾಂಕ್ ಪಕ್ಕದಲ್ಲೇ ₹85 ಕೋಟಿ ಮೊತ್ತದಲ್ಲಿ ಸುಸಜ್ಜಿತ, ಅತ್ಯಾಧುನಿಕ ಸಹಕಾರ ತರಬೇತಿ ಕೇಂದ್ರದ ಕಟ್ಟಡ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಒಮ್ಮೆಗೆ 2500 ಜನರಿಗೆ ತರಬೇತಿ ನೀಡಲು ಅಗತ್ಯ ಇರುವ ಸಭಾಂಗಣ, ವಿಐಪಿಗಳು ಉಳಿದುಕೊಳ್ಳಲು 20 ಕೊಠಡಿಗಳು, ಅಡುಗೆ ಮನೆ, ಮೀಟಿಂಗ್ ಹಾಲ್ ಇರಲಿದೆ ’ಎಂದರು.
ನಬಾರ್ಡ್ ಪುನರ್ಧನ ಕಡಿಮೆ: ‘ಡಿಸಿಸಿ ಬ್ಯಾಂಕುಗಳಿಗೆ ನಬಾರ್ಡ್ ನೀಡುತ್ತಿರುವ ಪುನರ್ಧನ ಪ್ರಮಾಣ ಕಡಿಮೆವಾಗಿದ್ದು, ಸದ್ಯ ಶೇ 13ರಷ್ಟು ಮಾತ್ರ ನೀಡುತ್ತಿದೆ. ಕೇಂದ್ರ ಸರ್ಕಾರದ ಈ ನೀತಿಯಿಂದ ರೈತರಿಗೆ ಕೃಷಿ ಸಾಲ ನೀಡಲು ತೊಂದರೆಯಾಗುತ್ತಿದೆ. ಸಂಸದರು ಈ ಬಗ್ಗೆ ಧ್ವನಿ ಎತ್ತಬೇಕು‘ ಎಂದು ಆಗ್ರಹಿಸಿದರು.
ಬ್ಯಾಂಕಿನ ನಿರ್ದೇಶಕರಾದ ಸುರೇಶ ಬಿರಾದಾರ, ಎಸ್.ಕೆ.ಭಾಗ್ಯಶ್ರೀ, ಶೇಖರ ದಳವಾಯಿ, ಜೆ.ಕೊಟ್ರೇಶಿ, ಕಲ್ಲನಗೌಡ ಬಿ.ಪಾಟೀಲ, ಹಣಮಂತ್ರಾಯಗೌಡ ಪಾಟೀಲ, ಗುರುಶಾಂತ ನಿಡೋಣಿ,ಬಾಪುಗೌಡ ಪಾಟೀಲ, ಚಂದ್ರಶೇಖರ ಎಸ್.ಪಾಟೀಲ ಇದ್ದರು.
ವಿಜಯಪುರ ಡಿಸಿಸಿ ಬ್ಯಾಂಕಿನ ಅಧ್ಯಕ್ಷನಾಗಿ 27 ವರ್ಷಗಳ ಗರಿಷ್ಠ ಸೇವೆ ಸಲ್ಲಿಸಿದ್ದು ಈ ಅವಧಿಯಲ್ಲಿ ಬ್ಯಾಂಕಿಗೆ ಶೇ 97.44ರಷ್ಟು ಲಾಭ ತಂದುಕೊಟ್ಟಿದ್ದೇನೆ ಶಿವಾನಂದ ಪಾಟೀಲ ಅಧ್ಯಕ್ಷ ಡಿಸಿಸಿ ಬ್ಯಾಂಕ್ ವಿಜಯಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.