ADVERTISEMENT

ಯತ್ನಾಳಗೆ ತಾಕತ್ತಿದ್ದರೆ ರಾಜೀನಾಮೆ ನೀಡಲಿ: ಎಸ್‌.ಎಂ.ಪಾಟೀಲ ಗಣಿಹಾರ ಸವಾಲು

​ಪ್ರಜಾವಾಣಿ ವಾರ್ತೆ
Published 3 ಮೇ 2025, 14:23 IST
Last Updated 3 ಮೇ 2025, 14:23 IST
ಎಸ್‌.ಎಂ.ಪಾಟೀಲ ಗಣಿಹಾರ
ಎಸ್‌.ಎಂ.ಪಾಟೀಲ ಗಣಿಹಾರ   

ವಿಜಯಪುರ: ‘ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಸವಾಲನ್ನು ಸ್ವೀಕರಿಸಿ ಸಚಿವ ಶಿವಾನಂದ ಪಾಟೀಲ ಅವರು ಈಗಾಗಲೇ ರಾಜೀನಾಮೆ ನೀಡಿದ್ದಾರೆ. ಯತ್ನಾಳಗೆ ದಮ್ಮು, ತಾಕತ್ತು ಇದ್ದರೆ ತಾವೇ ಹಾಕಿದ ಸವಾಲಿಗೆ ಬದ್ಧರಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಚುನಾವಣೆ ಎದುರಿಸಬೇಕು’ ಎಂದು ಕೆಪಿಸಿಸಿ ವಕ್ತಾರ ಎಸ್‌.ಎಂ.ಪಾಟೀಲ ಗಣಿಹಾರ ಸವಾಲು ಹಾಕಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಚಿವ ಶಿವಾನಂದ ಪಾಟೀಲರು ರಾಜೀನಾಮೆ ನೀಡಿದ ತಕ್ಷಣ ಅವರ ರಾಜೀನಾಮೆ ಪ್ರಕ್ರಿಯೆ ಕುರಿತು ವಿಶ್ಲೇಷಣೆ ಮಾಡುವ ಬದಲು ತಾವು ರಾಜೀನಾಮೆ ನೀಡುವ ಮೂಲಕ ನುಡಿದಂತೆ ನಡೆದುಕೊಳ್ಳಬೇಕಿತ್ತು’ ಎಂದರು.

‘ಶಿವಾನಂದ ಪಾಟೀಲ ಅವರು ಯತ್ನಾಳ ಹಾಕಿದ ಸವಾಲು ಸ್ವೀಕರಿಸಿ ರಾಜೀನಾಮೆ ನೀಡಿ ತಾವೊಬ್ಬ ಗಂಡುಗಲಿ ಎಂಬುದನ್ನು ಸಾಬೀತು ಮಾಡಿದ್ದಾರೆ. ತಾವೇ ಹಾಕಿದ ಸವಾಲನ್ನು ಸ್ವೀಕರಿಸಲಾಗದೇ ಸೋತು ಓಡಿಹೋಗುವ ಮೂಲಕ ಯತ್ನಾಳ ಹಿಂದು ಇಲಿಯಾಗಿದ್ದಾರೆ’ ಎಂದು ಟೀಕಿಸಿದರು.

ADVERTISEMENT

‘ಯತ್ನಾಳಗೆ ಯಾವುದೇ ಸಂಸ್ಕೃತಿ, ಸಭ್ಯತೆ ಇಲ್ಲ. ಅವರಿಗೆ ಯಾವ ನೈತಿಕ ಮಟ್ಟವೂ ಇಲ್ಲ, ನಾಚಿಕೆ, ಮಾನ, ಮರ್ಯಾದೆ ಕಳೆದು ನಿಂತಿದ್ದಾರೆ’ ಎಂದು ಕಿಡಿಕಾರಿದರು.

‘ಬಸವ ಜಯಂತಿ ದಿನ ಬಸವಣ್ಣನ ಬಗ್ಗೆ, ರಾಮನವಮಿಯಂದು ರಾಮನ ಬಗ್ಗೆ, ಅಂಬೇಡ್ಕರ್‌ ಜಯಂತಿಯಂದು ಅಂಬೇಡ್ಕರ್‌ ಬಗ್ಗೆ ಮಾತನಾಡುವ ಬದಲು ಪಾಕಿಸ್ತಾನ, ಮುಸ್ಲಿಮರ ಬಗ್ಗೆ ಮಾತನಾಡಿದ್ದಾರೆ. ನನ್ನ ಮೈಯಲ್ಲಿ ಅಂಬೇಡ್ಕರ್‌ ರಕ್ತ ಹರಿಯುತ್ತಿದೆ, ಶಿವಾಜಿ ರಕ್ತ ಹರಿಯುತ್ತಿದೆ ಎಂದು ಬೊಗಳೆ ಮಾತನಾಡುತ್ತಾರೆ. ಹಾಗಾದರೆ ಅವರ ಮೈಯಲ್ಲಿ ಲಿಂಗಾಯತ, ಬಸವಣ್ಣನವರ ರಕ್ತ ಹರಿಯುತ್ತಿಲ್ಲವೇ’ ಎಂದು ಪ್ರಶ್ನಿಸಿದರು.

‘ಈ ಹಿಂದೆ ಹಿರೇಬೇವನೂರು ಸಕ್ಕರೆ ಕಾರ್ಖಾನೆ ಆರಂಭಿಸುವಾಗ ಯತ್ನಾಳ ಅವರು ಶಿವಾನಂದ ಪಾಟೀಲರ ಕೈಕಾಲು ಹಿಡಿದು ಡಿಸಿಸಿ ಬ್ಯಾಂಕಿನಲ್ಲಿ ಸಾಲ ಪಡೆದುಕೊಂಡರು. ರೈತರ ಹೊಲದ ಮೇಲೆ ಸಾಲ ಪಡೆದರು. ಆದರೆ, ನೂರಾರು ಕೋಟಿ ಗಳಿಸಿದರೂ ಮರಳಿ ರೈತರಿಗೆ ಕೊಡಲಿಲ್ಲ’ ಎಂದು ಆರೋಪಿಸಿದರು.

‘ರಾಜಕೀಯಕ್ಕೆ ಬರುವ ಮುನ್ನಾ ಲಾರಿ ಕ್ಲೀನರ್‌, ಡ್ರೈವರ್‌ ಆಗಿದ್ದ ಯತ್ನಾಳ ಅವರು ವಿಜಯಪುರದಲ್ಲಿ ಸಾಮ್ರಾಜ್ಯ ಕಟ್ಟಿದ್ದು ಹೇಗೆ? ಭ್ರಷ್ಟಾಚಾರ ಮಾಡದೇ ಕಟ್ಟಿದ್ದಾರಾ? ಇವರೇನು ಸತ್ಯ ಹರಿಶ್ಚಂದ್ರನಾ?‘ ಎಂದು ಪ್ರಶ್ನಿಸಿದರು.

‘ಎಲುಬಿಲ್ಲದ ನಾಲಿಗೆಯಲ್ಲಿ ಮನ ಬಂದಂತೆ ಮಾತನಾಡುತ್ತಿದ್ದಾರೆ. ಪ್ರಜ್ಞೆ ಕಳೆದುಕೊಂಡು ಮಾತನಾಡುತ್ತಾರೆ. ಯತ್ನಾಳ ತಮ್ಮ ಜೀವನ ಪರ್ಯಂತ ಇನ್ನೊಬ್ಬರಿಗೆ ವಿಶ್ವಾಸ ದ್ರೋಹ ಮಾಡುವುದನ್ನೇ ಉದ್ಯೋಗ ಮಾಡಿಕೊಂಡಿದ್ದಾರೆ’ ಎಂದು ಆರೋಪಿಸಿದರು.

‘ರಾಜಕಾರಣಲ್ಲಿ ನಾನೊಬ್ಬನೇ ಸಾಚಾ ಎಂಬಂತೆ ಯತ್ನಾಳ ಮಾತನಾಡುತ್ತಾರೆ. ಯಶವಂತರಾಯಗೌಡ ಅವರಂತ ಬದ್ಧತೆಯುಳ್ಳ ರಾಜಕಾರಣಿ ಬಗ್ಗೆ ಯತ್ನಾಳ ಹೀನಾಯವಾಗಿ ಮಾತನಾಡಿದ್ದಾರೆ. ಅವರ ಕಾಲಿನ ದೂಳಿಗೂ ಇವರು ಸಮನಿಲ್ಲ’ ಎಂದರು.

ಕೆಪಿಸಿಸಿ ವೈದ್ಯಕೀಯ ಘಟಕದ ಪ್ರಧಾನ ಕಾರ್ಯದರ್ಶಿ ರವಿ ಬಿರಾದಾರ, ಮುಖಂಡರಾದ ಎಂ.ಸಿ.ಮುಲ್ಲಾ, ಫಯಾಜ್‌ ಕಲಾದಗಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.