ವಿಜಯಪುರ: ಮಹಾನಗರ ಪಾಲಿಕೆ ವ್ಯಾಪ್ತಿಯ ಅಲ್ಪಸಂಖ್ಯಾತ ಬಾಹುಳ್ಯವುಳ್ಳ ವಾರ್ಡ್‌ಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳು ಕುಂಠಿತಗೊಂಡಿದ್ದು, ಕೂಡಲೇ ಆದ್ಯತೆ ಮೇರೆಗೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಶಕೀಲ್ ಬಾಗಮಾರೆ ಅವರು ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ಅವರಿಗೆ ಮನವಿ ಸಲ್ಲಿಸಿದರು.
ಸಮಸ್ಯೆ ಕುರಿತು ವಿವರಣೆ ನೀಡಿದ ಬಾಗಮಾರೆ, ‘ಅಲ್ಪಸಂಖ್ಯಾತರು ಹೆಚ್ಚಿರುವ ವಾರ್ಡ್‌ಗಳಲ್ಲಿ ರಸ್ತೆ ಕಾಮಗಾರಿಗಳು ಮರೀಚಿಕೆಯಾಗಿವೆ. ಕಾಮಗಾರಿ ಆರಂಭವಾದರೂ ಅದು ಪೂರ್ಣವಾಗಿಲ್ಲ. ಇನ್ನೂ ಕೆಲವೆಡೆ ಕಾಮಗಾರಿಯೇ ಆರಂಭವಾಗಿಲ್ಲ. ಇದರಿಂದಾಗಿ ಸಾರ್ವಜನಿಕರು ನಿತ್ಯ ತೊಂದರೆ ಎದುರಿಸುವಂತಾಗಿದೆ’ ಎಂದು ದೂರಿದರು.
‘ಅತಾವುಲ್ಲಾ ಸರ್ಕಲ್‌ನಿಂದ ಜಾಮೀಯಾ ಮಸೀದಿ ರಸ್ತೆ ಕಾಮಗಾರಿ ಅನೇಕ ತಿಂಗಳಿಂದ ಸ್ಥಗಿತಗೊಂಡಿದೆ. ದಿನನಿತ್ಯ ಈ ರಸ್ತೆಯಲ್ಲಿ ಸಾವಿರಾರು ಪ್ರಯಾಣಿಕರು ತೊಂದರೆ ಎದುರಿಸುವಂತಾಗಿದೆ. ಆಟೋ ಚಾಲಕರು ಈ ಭಾಗಕ್ಕೆ ಆಟೋ ಓಡಿಸಿದರೆ ಅವರ ಆಟೋಗಳು ಸಹ ಹಾಳಾಗಿ ದೈನಂದಿನ ಉಪಜೀವನಕ್ಕೂ ಹೊಡೆತ ಬೀಳುತ್ತಿದೆ’ ಎಂದರು.
‘ಕೇಂದ್ರ ಬಸ್ ನಿಲ್ದಾಣ ಬಳಿಯ ಚರ್ಚ್‌ನಿಂದ ಎ.ಪಿ.ಜೆ ಅಬ್ದುಲ್ ಕಲಾಂ ರಸ್ತೆ ಸಹ ಅಭಿವೃದ್ಧಿಯಿಂದ ವಂಚಿತವಾಗಿದೆ. ಯಾವುದೇ ಕಾಮಗಾರಿ ಆರಂಭಿಸದೇ ರಸ್ತೆಯನ್ನು ತಿಂಗಳ ಕಾಲ ಅಸ್ಥಿರವಾಗಿ ಬಿಡುವುದರಿಂದ ಸಾರ್ವಜನಿಕರಿಗೆ ನಿರಂತರವಾಗಿ ತೊಂದರೆ ಉಂಟಾಗುತ್ತಿದೆ. ಅರೆಬರೆ ಕಾಮಗಾರಿಗಳಿಂದ ಸಂಚಾರ ಅಡಚಣೆಯ ಜೊತೆಗೆ ಅಪಘಾತಗಳು ಸಂಭವಿಸುತ್ತಿವೆ. ಆದ್ದರಿಂದ ಬಾಕಿ ಉಳಿದಿರುವ ರಸ್ತೆ ಕಾಮಗಾರಿಗಳನ್ನು ತಕ್ಷಣ ಪೂರ್ಣಗೊಳಿಸಬೇಕು’ ಅವರು ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.