ADVERTISEMENT

ಡೋಣಿ ನದಿ ಪುನರುಜ್ಜೀವನಕ್ಕೆ ಆಗ್ರಹ

ಸಾರವಾಡದಲ್ಲಿ ರೈತರ ಜಾಗೃತಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 13 ಮೇ 2022, 13:59 IST
Last Updated 13 ಮೇ 2022, 13:59 IST
ಸಾರವಾಡ ಗ್ರಾಮದ ಬಸವೇಶ್ವರ ಕಟ್ಟೆಯಲ್ಲಿ ನಡೆದ ಡೋಣಿ ನದಿ ಪುನರುಜ್ಜೀವನ ಮತ್ತು ಪ್ರವಾಹ ನಿಯಂತ್ರಣ ಜನ ಜಾಗೃತಿ ಸಭೆಯಲ್ಲಿ ಛಾಯಪ್ಪಗೌಡ ಬಿರಾದಾರ ಮಾತನಾಡಿದರು
ಸಾರವಾಡ ಗ್ರಾಮದ ಬಸವೇಶ್ವರ ಕಟ್ಟೆಯಲ್ಲಿ ನಡೆದ ಡೋಣಿ ನದಿ ಪುನರುಜ್ಜೀವನ ಮತ್ತು ಪ್ರವಾಹ ನಿಯಂತ್ರಣ ಜನ ಜಾಗೃತಿ ಸಭೆಯಲ್ಲಿ ಛಾಯಪ್ಪಗೌಡ ಬಿರಾದಾರ ಮಾತನಾಡಿದರು   

ವಿಜಯಪುರ:ಉತ್ತಮ ಮಳೆಯಾದಾಗ ಡೋಣಿ ನದಿ ತೀರದಲ್ಲಿ ಪ್ರವಾಹ ಉಂಟಾಗಿ, ಸಾಕಷ್ಟು ಬೆಳೆ ಹಾನಿಯಾಗುತ್ತಿರುವುದರಿಂದ ಈ ನದಿಯು ರೈತರಿಗೆ ವರವಾಗುವ ಬದಲು ಶಾಪವಾಗುತ್ತಿದೆ. ನದಿಯಲ್ಲಿನ ಹೂಳು ಮತ್ತು ಕಂಟಿ ತೆಗೆಯಲು ಜಿಲ್ಲಾಡಳಿತ, ಸರ್ಕಾರ ಕ್ರಮಕೈಗೊಳ್ಳಬೇಕು‌ ಎಂದುಸಾರವಾಡ ಗ್ರಾಮದ ಹಿರಿಯರಾದ ಛಾಯಪ್ಪಗೌಡ ಬಿರಾದಾರ ಒತ್ತಾಯಿಸಿದರು.

ಸಾರವಾಡ ಗ್ರಾಮದ ಬಸವೇಶ್ವರ ಕಟ್ಟೆಯಲ್ಲಿ ನಡೆದ ಡೋಣಿ ನದಿ ಪುನರುಜ್ಜೀವನ ಮತ್ತು ಪ್ರವಾಹ ನಿಯಂತ್ರಣಜನ ಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು.

ಜಲ ಬಿರಾದರಿ ಸಂಘಟನೆಯ ಅಧ್ಯಕ್ಷ ಪೀಟರ್ ಅಲೆಕ್ಸಾಂಡರ್ ಮಾತನಾಡಿ, 70ರ ದಶಕದಲ್ಲಿ ನದಿಯಲ್ಲಿ ನೀರು ತುಂಬಿ ಹರಿಯುತ್ತಿತ್ತು. ಆದರೆ, ಈಗ ನದಿಯ ಸುತ್ತಮತ್ತಲೂ ಬಳ್ಳಾರಿ ಜಾಲಿ ಬೆಳೆದು ಹತ್ತಾರು ಅಡಿ ಹೂಳು ತುಂಬಿಕೊಂಡಿದೆ. ಹಾಗಾಗಿ ಈಗ ನದಿಯ ಪಾತ್ರವೇ ಎಲ್ಲಿದೆ ಎಂದು ಹುಡುಕುವಂತಹ ಪರಿಸ್ಥಿತಿ ಎದುರಾಗಿದೆ ಎಂದರು.

ADVERTISEMENT

ಪ್ರವಾಹ ಬಂದಾಗ ತಾತ್ಕಾಲಿಕಪರಿಹಾರ, ಪುನರ್ವಸತಿ ಕಲ್ಪಿಸಿ, ಸೇತುವೆ ನಿರ್ಮಾಣ ಮಾಡಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ರಾಜಕಾರಣಿಗಳು, ಗುತ್ತಿಗೆದಾರರು ಮನೆ ತುಂಬಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.

ಈಗಾಗಲೇ ನದಿ ಪಾತ್ರವನ್ನು ಸರ್ವೇ ಮಾಡಿಸಿ ಹೂಳೆತ್ತಿ ಪುನರುಜ್ಜೀವನ ಮಾಡುವಂತೆ ಜಿಲ್ಲಾಡತಕ್ಕೆ ಮನವಿ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.

‘ಡೋಣಿ ಹರಿದರೆ ಓಣಿಯಲ್ಲಾ ಜೋಳ’ ಎನ್ನುವ ಗಾಧೆ ಈಗ ಸುಳ್ಳಾಗಿದೆ. ಡೋಣಿಯ ನೀರು ಉಪ್ಪು, ಅದು ಅನುಪಯುಕ್ತ ಎನ್ನುವ ಅವೈಜ್ಞಾನಿಕ ನಂಬಿಕೆ ಎಲ್ಲರ ತಲೆಯಲ್ಲಿ ತುಂಬಿದ್ದಾರೆ. ವೈಜ್ಞಾನಿಕವಾಗಿ ನದಿ ನೀರು ತನ್ನ ವ್ಯಾಪ್ತಿ ಬಿಟ್ಟು ಬಹುತೇಕ ಕಪ್ಪು ಮಣ್ಣಿನಲ್ಲಿ ವಿಸ್ತಾರವಾಗಿ ಹರಿಯುವುದರಿಂದ ಆ ಮಣ್ಣಿನಲ್ಲಿರುವ ಲವಣಾಂಶ, ಖನಿಜಾಂಶ ಹೆಚ್ಚುವರಿಯಾಗಿ ಮಿಶ್ರಣವಾಗುವುದರಿಂದ ಆ ನೀರಿನ ರುಚಿ ಉಪ್ಪುಆಗುತ್ತಿದೆ ಎನ್ನುವುದು ತಜ್ಞರ ಅಬಿಪ್ರಾಯ ಎಂದು ಹೇಳಿದರು.

ಡೋಣಿ ನದಿಯಲ್ಲಿ ತುಂಬಿರುವ ಹೂಳು ತೆಗೆದು ನೀರು ಹರಿದು ಹೋಗುವಂತೆ ಮಾಡಿದರೆ ಕಂಡಿತವಾಗಿಯೂ ಆ ನೀರು ಸಿಹಿಯಾಗುವುದರಲ್ಲಿ ಸಂದೇಹವಿಲ್ಲ ಎಂದು ಹೇಳಿದರು.

ಹೂಳು ತೆಗೆಯುವ ಕಾಮಗಾರಿಗೆ ಹೆಚ್ಚುವರಿಯಾಗಿ ವಿಪತ್ತು ನಿರ್ವಹಣಾ ಹಣವನ್ನು ಖರ್ಚು ಮಾಡುವಂತೆ ಜಿಲ್ಲಾಡಳಿಕ್ಕೆ ಮನವಿ ಮಾಡಿಕೊಳ್ಳಲಾಗಿದೆ ಎಂದರು.

ಪಿಡಿಓ ಎಂ. ಎಸ್. ಪಾಟೀಲ ಮಾತನಾಡಿ, ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಹೂಳು ತೆಗೆಯುವ ಕಾಮಗಾರಿ ಆರಂಭಿಸಲು ಅಂದಾಜು ₹ 5 ಲಕ್ಷ ಮೀಸಲಿಟ್ಟಿದ್ದೇವೆ ಅವರು ಹೇಳಿದರು.

ಡೋಣಿ ನದಿ ಹೋರಾಟ ಸಮಿತಿ ಸಂಘಟಕಆಕಾಶ್ ಬಿರಾದಾರ, ಡಾ.ಬಾಬು ಸಜ್ಜನ, ಡಾ. ರಿಯಾಜ್‌ ಪಾರುಕಿ, ಎಸ್.ಜಿ.ಬಳಲಗಿ, ಬಾಳು ಜೇವೂರ, ಬಾವಿ ಕುಮಟೆ, ಗ್ರಾಮದ ಹಿರಿಯರಾದ ಮುಚ್ಚಪ್ಪ ಹಿಟ್ನಳ್ಳಿ, ಪಿಕೆಪಿಎಸ್ ಅಧ್ಯಕ್ಷರಾದ ಪರೆಣ್ಣವರ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾಂತಾಬಾಯಿ ಎನ್. ಪಾತ್ಯಾಪೂರ,ಸದಸ್ಯರಾದ ಚಂದ್ರಕಾಂತ ವಾಲಿ,ಹೋರಾಟಗಾರರಾದ ಮಹಾಂತೇಶ ಕೆರೂಟಗಿ, ಮಹಾದೇವ ಲಿಗಾಡೆ, ಆಕಾಶ್ ರಾಮತೀರ್ಥ, ಶಂಕರ ಹಾಲಳ್ಳಿ, ಶಂಕರ ಆಸಂಗಿ, ಶಿವು ದೇಸಾಯಿ, ಬೀರಣ್ಣ ಸೊಡ್ಡಿಸೇರಿದಂತೆ ರೈತರು ಭಾಗವಹಿಸಿದ್ದರು.

***

ದಕ್ಷಿಣ ಕರ್ನಾಟದ ರೈತರು ನೀರಿಗಾಗಿ ಮಾಡುವ ಹೋರಾಟದ ಸ್ಫೂರ್ತಿಯನ್ನು ಪಡೆದು ಉತ್ತರ ಕರ್ನಾಟಕದ ರೈತರು ನಾವು ನಮ್ಮ ನದಿಗಳು ಪುನರುಜ್ಜೀವನಗೋಳಿಸಲು ಪ್ರತಿಜ್ಞೆಕೈಗೊಳ್ಳಬೇಕಾಗಿದೆ

–ಪೀಟರ್ ಅಲೆಕ್ಸಾಂಡರ್, ಅಧ್ಯಕ್ಷ, ಜಲ ಬಿರಾದರಿ ಸಂಘಟನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.