ADVERTISEMENT

ಕೃಷ್ಣಾ ಕಾಲುವೆಗಳಿಗೆ ನೀರು ಹರಿಸಲು ರೈತರ ಬೇಡಿಕೆ

ಬೆಂಗಳೂರಿನಲ್ಲಿ ಐಸಿಸಿ ಸಭೆ ಜುಲೈ 1ಕ್ಕೆ

​ಪ್ರಜಾವಾಣಿ ವಾರ್ತೆ
Published 21 ಜೂನ್ 2025, 6:41 IST
Last Updated 21 ಜೂನ್ 2025, 6:41 IST
ಆಲಮಟ್ಟಿ ಎಡದಂಡೆ ಮುಖ್ಯ ಕಾಲುವೆ 
ಆಲಮಟ್ಟಿ ಎಡದಂಡೆ ಮುಖ್ಯ ಕಾಲುವೆ    

ಆಲಮಟ್ಟಿ: ಆಲಮಟ್ಟಿ ಜಲಾಶಯಕ್ಕೆ ಒಳಹರಿವು ದಿನೇ ದಿನೇ ಹೆಚ್ಚುತ್ತಿದ್ದು, ಕೃಷ್ಣಾ ಅಚ್ಚುಕಟ್ಟು ವ್ಯಾಪ್ತಿಯ ಕಾಲುವೆಗಳಿಗೆ ಕೃಷಿಗಾಗಿ ನೀರು ಹರಿಸುವ ಬೇಡಿಕೆ ಹೆಚ್ಚಿದೆ.

ಮುಂಗಾರು ಪೂರ್ವ‌ ಮಳೆ ಚೆನ್ನಾಗಿ ಆಗಿದೆ. ಆದರೆ, ಮುಂಗಾರು ಬಿತ್ತನೆ ಮಾಡಿದ ನಂತರ ಮಳೆ ಕಡಿಮೆಯಾಗಿದೆ. 

ಮೆಕ್ಕೆಜೋಳ, ತೊಗರಿ, ಹೆಸರು ಸೇರಿದಂತೆ ನಾನಾ ಬೆಳೆ ಬಿತ್ತನೆ ಮಾಡಿದ್ದಾರೆ.‌ ಜತೆಗೆ ಅಚ್ಚುಕಟ್ಟು ಪ್ರದೇಶದಲ್ಲಿ ಕಬ್ಬು ಬೆಳೆ ವ್ಯಾಪಕವಿದ್ದು, ನೀರಿನ ಅಗತ್ಯ ಅಧಿಕವಾಗಿದೆ.

ADVERTISEMENT

ಆಲಮಟ್ಟಿ ಜಲಾಶಯವೂ‌ ಭರ್ತಿಯತ್ತ ಸಾಗಿದೆ, ನಾರಾಯಣಪುರ ಜಲಾಶಯ ಬಹುತೇಕ ಭರ್ತಿಯಾಗಿದೆ.‌ ಎರಡೂ ಜಲಾಶಯಗಳಿಂದ ಗೇಟ್ ತೆರೆದು ನೀರನ್ನು ನದಿಯಿಂದ ಹೊರ ಬಿಡಲಾಗುತ್ತಿದೆ.‌ ಅದರ ಬದಲಾಗಿ ಕಾಲುವೆಗಳಿಗೆ ನೀರು ಹರಿಸಬೇಕು ಎಂಬ ಬೇಡಿಕೆ ಹೆಚ್ಚುತ್ತಿದೆ.

‘ಕೇವಲ ಕೆರೆಗಳ ಭರ್ತಿಗಾಗಿ ಮಾತ್ರ ಸೀಮಿತ ಕಾಲುವೆಗಳಿಗೆ ನೀರು ಬಿಡಲಾಗುತ್ತಿದೆ. ಆದರೆ, ಕೃಷಿಗೆ ನೀರು ಬಿಡಬೇಕಾದರೆ ಕೃಷ್ಣಾ ಮೇಲ್ದಂಡೆ ಯೋಜನೆಯ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ (ಐಸಿಸಿ)ನಿರ್ಣಯ ಆಗಬೇಕು' ಎಂದು ಸೂಪರಿಂಟೆಂಡೆಂಟ್ ಎಂಜಿನಿಯರ್ ವಿ.ಆರ್.ಹಿರೇಗೌಡರ ತಿಳಿಸಿದರು.

ಬೆಂಗಳೂರಿನಲ್ಲಿ ‌ಐಸಿಸಿ ಸಭೆ: ಈ ಬಾರಿ ಒಂದು ತಿಂಗಳು‌ ಮೊದಲೇ ‌ಜಲಾಶಯಗಳು‌ ಭರ್ತಿಯತ್ತ ಸಾಗಿವೆ, ಹೀಗಾಗಿ ಕಾಲುವೆಗೆ ನೀರು ಬಿಡಬೇಕೆಂಬ ರೈತರ ಬೇಡಿಕೆಯೂ ಹೆಚ್ಚಿದೆ. ಕಾಲುವೆಗೆ ನೀರು ಹರಿಸುವ ಮಹತ್ವದ ಐಸಿಸಿ ಸಭೆ ಜುಲೈ 1 ಬೆಂಗಳೂರಿನಲ್ಲಿ ಮಧ್ಯಾಹ್ನ 3 ಕ್ಕೆ ನಡೆಯಲಿದೆ. ‌ಐಸಿಸಿ ಅಧ್ಯಕ್ಷರೂ ಆಗಿರುವ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ ಎಂದು ಐಸಿಸಿ ಸದಸ್ಯ ಕಾರ್ಯದರ್ಶಿಯೂ ಆಗಿರುವ, ಭೀಮರಾಯನಗುಡಿ ಕಾಲುವೆ ವಲಯದ ಮುಖ್ಯ ಎಂಜಿನಿಯರ್ ಪ್ರೇಮಸಿಂಗ್ ತಿಳಿಸಿದರು.

ಪ್ರತಿಬಾರಿ ಆಲಮಟ್ಟಿಯಲ್ಲಿ ನಡೆಯುತ್ತಿದ್ದ ಐಸಿಸಿ ಸಭೆ ಈ ಬಾರಿ ಬೆಂಗಳೂರಿನಲ್ಲಿ ನಡೆಯಲಿದೆ.
ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಜನಪ್ರತಿನಿಧಿಗಳು ಸದಸ್ಯರಾಗಿದ್ದು, ಐದು ಅಚ್ಚುಕಟ್ಟು ಜಿಲ್ಲೆಗಳಿಗೆ ಕಾಲುವೆಗೆ ನೀರು ಹರಿಸುವ ದಿನ ನಿಗದಿಗೊಳಿಸಲಿದ್ದಾರೆ.

ಮೆಕ್ಕೆಜೋಳ ಈರುಳ್ಳಿ ನಾಟಿ‌‌ ಮಾಡಲಾಗಿದೆ. ಹೀಗಾಗಿ ಕಾಲುವೆಗೆ ನೀರು ಹರಿಸಿದರೇ ಅನುಕೂಲವಾಗಲಿದೆ.
– ಶಿವಾನಂದ ಮುರನಾಳ, ರೈತ
ಒಳಹರಿವು ಕಡಿಮೆಯಾಗಿದ್ದು ಹೀಗಾಗಿ ಹೊರಹರಿವನ್ನು 50 ಸಾವಿರ ಕ್ಯೂಸೆಕ್ ಗೆ ಇಳಿಸಲಾಗಿದೆ.
– ಡಿ.ಬಸವರಾಜ, ಮುಖ್ಯ ಎಂಜಿನಿಯರ್

ಆರಂಭಗೊಳ್ಳದ ಕ್ಲೋಸರ್ ಕಾಮಗಾರಿ

ಪ್ರತಿ ವರ್ಷ ಕಾಲುವೆಗಳ ದುರಸ್ತಿ ಹೂಳು ತೆಗೆಯುವುದು ಕಾಲುವೆ ಪಕ್ಕದ ಜಂಗಲ್ ಕಟ್ಟಿಂಗ್ ಸೇರಿದಂತೆ ನಾನಾ ಕಾಮಗಾರಿ ಕೈಗೊಂಡ ನಂತರ ಕಾಲುವೆಗೆ ನೀರು ಬಿಡಲಾಗುತ್ತಿತ್ತು. ಆದರೆ ಈ ವರ್ಷ ಕ್ಲೋಸರ್ ಕಾಮಗಾರಿಗೆ ಇನ್ನೂ ಟೆಂಡರ್ ಕರೆದಿಲ್ಲ. ಈ ಬಾರಿ ಕ್ಲೋಸರ್ ಕಾಮಗಾರಿ ನಡೆಯುವುದು ಅನುಮಾನ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.