ವಿಜಯಪುರ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ನೌಕರರ ಸಂಘ ವಿಜಯಪುರ ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾ ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಸಂಘದ ರಾಜ್ಯ ಉಪಾಧ್ಯಕ್ಷ ಭೀಮಶಿ ಕಲಾದಗಿ ಮಾತನಾಡಿ,15 ನೇ ಹಣಕಾಸು ಯೋಜನೆಯಡಿ ಗ್ರಾಮ ಪಂಚಾಯ್ತಿ ಸಿಬ್ಬಂದಿಗೆ ವೇತನ ಪಾವತಿಸಲು ಸರ್ಕಾರದ ಆದೇಶವಿದ್ದರೂ ಪಾಲಿಸದ ಪಿಡಿಓಗಳ ಮೇಲೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
15ನೇ ಹಣಕಾಸು ಯೋಜನೆಯ ಕ್ರಿಯಾಯೋಜನೆ ಆಗಿಲ್ಲ. ಜಲ ಜೀವನ ಮಿಷನ್‍ಗೆ ಹಣ ತುಂಬಬೇಕು ಎಂದು ವೇತನ ಕೊಡಲು ಪಿಡಿಓಗಳು ಸಬೂಬು ಹೇಳುತ್ತಾರೆ. ಕೆಲವು ಕಡೆ ಪಂಚಾಯ್ತಿ ಅಧ್ಯಕ್ಷರು ಸಹಿ ಮಾಡದೆ ಸಿಬ್ಬಂದಿ ವೇತನ ಆಗುತ್ತಿಲ್ಲ ಎಂದು ದೂರಿದರು.
2018 ರಿಂದ ಎಲ್ಲ ಗ್ರಾಮ ಪಂಚಾಯ್ತಿ ಸಿಬ್ಬಂದಿಗೆ ಸರ್ಕಾರವೇ ಕನಿಷ್ಠ ವೇತನ ನೀಡುತ್ತಿದೆ. ಪಂಚಾಯ್ತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳ ಸಂಖ್ಯೆಗೆ ಅನುಗುಣವಾಗಿ ವೇತನ ಬಿಡುಗಡೆ ಆಗದೆ ಇರುವುದರಿಂದ ಹಲವರು ನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಘಟನೆಗಳು ನಡೆಯುತ್ತಿವೆ. ಈ ಬಗ್ಗೆ ಸರ್ಕಾರ ತಕ್ಷಣ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.
ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಸುರೇಖಾ ರಜಪೂತ ಮಾತನಾಡಿ, ಕೊಲ್ಹಾರ ತಾಲ್ಲೂಕಿನ ಮಲಘಾಣ ಗ್ರಾಮದ ವಾಟರ್‌ಮನ್ ಪ್ರಕಾಶ ಚಂದ್ರಪ್ಪ ಗುಲಗುರ್ಕಿ ಅವರು ಮೂರು ತಿಂಗಳ ಸಂಬಳ ಕೇಳಲು ಹೋದಾಗ ಅವರನ್ನು ಕೆಲಸದಿಂದ ತೆಗೆದು ಹಾಕಿದ್ದು ಖಂಡನೀಯ. ಸಂಬಂಧಪಟ್ಟ ಅಧಿಕಾರಿಗಳು ಇವರಿಗೆ ನ್ಯಾಯ ಒದಗಿಸಬೇಕು ಎಂದರು.
ಮುಖಂಡರಾದ ಈರಣ್ಣ ಬೆಳ್ಳುಂಡಗಿ, ಸುಜಾತಾ ಪ್ರಭು ಶಿಂಧೆ, ಚಂದ್ರಶೇಖರ ವಾಲೀಕಾರ, ಚಂದ್ರಶೇಖರ ಹಚಡದ, ಗಂಗಾಧರ ಗೌಡರ, ಶರಣಗೌಡ ಬಿರಾದಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.