ADVERTISEMENT

ಗೂಡಂಗಡಿ, ತಳ್ಳುಗಾಡಿ ತೆರವು

ಜಿಲ್ಲಾಡಳಿತ, ಮಹಾನಗರ ಪಾಲಿಕೆಯಿಂದ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2019, 16:03 IST
Last Updated 21 ನವೆಂಬರ್ 2019, 16:03 IST
ವಿಜಯಪುರದ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದ ಬೀದಿ ಬದಿ ವ್ಯಾಪಾರಿಗಳೊಂದಿಗೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಮಾತನಾಡಿದರು
ವಿಜಯಪುರದ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದ ಬೀದಿ ಬದಿ ವ್ಯಾಪಾರಿಗಳೊಂದಿಗೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಮಾತನಾಡಿದರು   

ವಿಜಯಪುರ: ಇಲ್ಲಿನ ಗಾಂಧಿ ಚೌಕ್‌ ದಿಂದ ನಾಲಬಂದ್ ಚೌಕ್‌ವರೆಗಿನ 60 ಅಡಿ ರಸ್ತೆಯನ್ನು ಅತಿಕ್ರಮಿಸಿಕೊಂಡಿದ್ದ ಗೂಡಂಗಡಿಗಳು ಹಾಗೂ ತಳ್ಳುವ ಗಾಡಿಗಳನ್ನು ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ವತಿಯಿಂದ ಗುರುವಾರ ತೆರವುಗೊಳಿಸಲಾಯಿತು.

ಬೆಳಿಗ್ಗೆ 6 ಗಂಟೆಗೆ ಕಾರ್ಯಾಚರಣೆ ಆರಂಭಿಸಿದ ಪಾಲಿಕೆ ಸಿಬ್ಬಂದಿ ಜೆಸಿಬಿ, ಟ್ರಾಕ್ಟರ್ ಸಹಾಯದಿಂದ ಒತ್ತುವರಿಯನ್ನು ತೆರವುಗೊಳಿಸಿದರು. ಈ ವೇಳೆ ಸ್ಥಳದಲ್ಲಿ ಕೆಲಹೊತ್ತು ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಲಾಲಬಹದ್ದೂರ್ ಶಾಸ್ತ್ರಿ (ಎಲ್‌ಬಿಎಸ್‌) ಮತ್ತು ನೆಹರೂ ಮಾರುಕಟ್ಟೆಯ ಮಧ್ಯದ ರಸ್ತೆಯ ಎರಡೂ ಬದಿಯಲ್ಲಿನ 200ಕ್ಕೂ ಹೆಚ್ಚು ಗೂಡಂಗಡಿಗಳು ಹಾಗೂ ತಳ್ಳುವ ಗಾಡಿಗಳನ್ನು ತೆರವುಗೊಳಿಸಲಾಯಿತು.

ADVERTISEMENT

ಮಹಿಳೆಯರಿಂದ ಕಣ್ಣೀರು: ಗೂಡಂಗಡಿಗಳ ತೆರವು ಖಂಡಿಸಿ ವ್ಯಾಪಾರಿಗಳು ರಸ್ತೆ ಮೇಲೆ ಕುಳಿತು ಪ್ರತಿಭಟನೆ ಮಾಡಿದರು. ತರಕಾರಿ ಮತ್ತು ಹಣ್ಣು ಮಾರಾಟ ಮಾಡುವ ಮಹಿಳೆಯರು ತೆರವಿಗೆ ವಿರೋಧ ವ್ಯಕ್ತಪಡಿಸಿ, ಕಣ್ಣೀರು ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಇದಾದ ಬಳಿಕ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪಿದ ವ್ಯಾಪಾರಿಗಳು ಪಾಲಿಕೆ ಆಯುಕ್ತ ಹರ್ಷ ಶೆಟ್ಟಿ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು, ಪ್ರತಿಭಟನಾನಿರತರ ಜತೆ ಮಾತುಕತೆ ನಡೆಸಿದರು. ಯಾರಿಗೂ ಅನ್ಯಾಯವಾಗದಂತೆ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.

ನಿಷೇಧಾಜ್ಞೆ ಜಾರಿ: ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಕಲಂ 144ರ ಪ್ರಕಾರ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಇಬ್ಬರು ಡಿವೈಎಸ್‌ಪಿ, ಆರು ಜನ ಇನ್‌ಸ್ಪೆಕ್ಟರ್‌, 12 ಜನ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಹಾಗೂ 120 ಜನ ಕಾನ್‌ಸ್ಟೆಬಲ್‌ಗಳನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.