ADVERTISEMENT

ವಿದೇಶಿ ಸ್ಟೀಮ್‌ ಬಾತ್‌ರೂಂ, ಅಪಾರ ಚಿನ್ನಾಭರಣ ಪತ್ತೆ

ವಿಜಯಪುರ ಜಿಲ್ಲಾ ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಮನೆ, ಕಚೇರಿ ಮೇಲೆ ಎಸಿಬಿ ದಾಳಿ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2022, 19:07 IST
Last Updated 16 ಮಾರ್ಚ್ 2022, 19:07 IST
ವಿಜಯಪುರ ನಗರದ ಸೋಲಾಪುರ ರಸ್ತೆಯಲ್ಲಿರುವ ಜಿಲ್ಲಾ ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಗೋಪಿನಾಥಸಾ ಮಲಜಿ ಅವರ  ಮನೆ -ಪ್ರಜಾವಾಣಿ ಚಿತ್ರ
ವಿಜಯಪುರ ನಗರದ ಸೋಲಾಪುರ ರಸ್ತೆಯಲ್ಲಿರುವ ಜಿಲ್ಲಾ ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಗೋಪಿನಾಥಸಾ ಮಲಜಿ ಅವರ  ಮನೆ -ಪ್ರಜಾವಾಣಿ ಚಿತ್ರ   

ವಿಜಯಪುರ: ಜಿಲ್ಲಾ ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಗೋಪಿನಾಥಸಾ ಮಲಜಿ ಅವರ ನಗರದ ಸೋಲಾಪುರ ರಸ್ತೆಯಲ್ಲಿರುವ ಮನೆ, ದರ್ಗಾ ಪ್ರದೇಶದಲ್ಲಿರುವ ಕಚೇರಿ ಮೇಲೆಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಬುಧವಾರ ದಾಳಿ ನಡೆಸಿದೆ.

ಗೋಪಿನಾಥ ಸಾ ಮಗಜಿ ಅವರ ನಿವಾಸದಲ್ಲಿ ವಿದೇಶಿ ಸ್ಟೀಮ್‌ ಬಾತ್ ರೂಂ ನಿರ್ಮಿಸಿಕೊಂಡಿರುವುದು ದಾಳಿ ವೇಳೆ ಬೆಳಕಿಗೆ ಬಂದಿದೆ. ₹ 2 ಲಕ್ಷದಿಂದ ₹ 3 ಲಕ್ಷ ಬೆಲೆ ಬಾಳುವ ವಿದೇಶಿ ಬಾತ್ ಟಬ್ ಸಹ ಇರುವುದು ಖಚಿತವಾಗಿದೆ. ಐಷಾರಾಮಿ ವಸ್ತುಗಳು, ಬೆಲೆ ಬಾಳುವ ಪೀಠೋಪಕರಣಗಳು, ಚಿನ್ನಾಭರಣಗಳು, 10ಕ್ಕೂ ಅಧಿಕ ಬ್ಯಾಂಕ್ ಪಾಸ್‌ಬುಕ್‌ಗಳು ಹಾಗೂ ಇತರೆ ದಾಖಲಾತಿ ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ.

ಗೋಪಿನಾಥ ಅವರ ಪತ್ನಿ, ಪುತ್ರಿಯ ಬ್ಯಾಂಕ್ ದಾಖಲಾತಿಗಳನ್ನು ಸಹ ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ.

ADVERTISEMENT

ಬಾಗಲಕೋಟೆಯಲ್ಲಿ ಇರುವ ಗೋಪಿನಾಥ ಸಂಬಂಧಿಗಳ ಎರಡು ಮನೆಗಳ ಮೇಲೆಯೂ ದಾಳಿ ನಡೆದಿದೆ.

ನಿರ್ಮಿತಿ ಕೇದ್ರದ ಅಕೌಟೆಂಟ್ ಮಲ್ಲಮ್ಮ ಅವರ ರಾಮದೇವ ನಗರದಲ್ಲಿರುವ ನಿವಾಸದ ಮೇಲೂ ಎಸಿಬಿ ದಾಳಿ ನಡೆದಿದ್ದು, ದಾಖಲಾತಿಗಳ ಪರಿಶೀಲನೆ ನಡೆದಿದೆ.

ಎಸಿಬಿ ಡಿವೈಎಸ್ಪಿ ಮಂಜುನಾಥ ಗಂಗಲ್ ಹಾಗೂ ತಂಡ ಸಂಜೆವರೆಗೂ ದಾಖಲೆಗಳ ಪರಿಶೀಲನೆ ನಡೆಸಿದರು. ಅಕ್ರಮ ಆಸ್ತಿ ಬಗ್ಗೆ ನಿಖರ ಮಾಹಿತಿ ತಿಳಿದುಬಂದಿಲ್ಲ.

ಇನ್‌ಸ್ಪೆಕ್ಟರ್‌ ಆಸ್ತಿ ದಾಖಲೆ ವಶಕ್ಕೆ
* ಮೈಸೂರಿನ ವಿಜಯನಗರ ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್‌ ಎಚ್‌.ಎನ್‌. ಬಾಲಕೃಷ್ಣ ಗೌಡ ಎರಡು ಮನೆ, ಒಂದು ನಿವೇಶನ ಹೊಂದಿದ್ದಾರೆ. ಗುಂಡ್ಲುಪೇಟೆಯ ಅಬಕಾರಿ ಇನ್‌ಸ್ಪೆಕ್ಟರ್‌ ಚಲುವರಾಜು ಬಳಿ ಮೂರು ಮನೆ, ಎರಡು ನಿವೇಶನ ಇದೆ. ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಎ. ಶ್ರೀನಿವಾಸ ಬೆಂಗಳೂರಿನಲ್ಲಿ ಒಂದು ಮನೆ, ತುಮಕೂರಿನಲ್ಲಿ ಪಾಲಿಹೌಸ್‌ ಹೊಂದಿದ್ದಾರೆ.

* ಕಾರ್ಯನಿರ್ವಾಹಕ ಎಂಜಿನಿಯರ್‌ ಬಿ.ಎಚ್‌. ಗವಿರಂಗಪ್ಪ ಮನೆಯಲ್ಲಿ ಐಷಾರಾಮಿ ಹೋಂ ಥಿಯೇಟರ್‌ ನಿರ್ಮಿಸಿಕೊಂಡಿದ್ದಾರೆ.

* ಮಂಗಳೂರಿನ ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ದಯಾಳು ಸುಂದರ್ ರಾಜ್‌ ಎರಡು ಮನೆ, ಮೂರು ನಿವೇಶನ, ಒಂದು ಫ್ಲ್ಯಾಟ್‌, 1 ಎಕರೆ 20 ಗುಂಟೆ ಕೃಷಿ ಜಮೀನು ಹೊಂದಿದ್ದಾರೆ. ಯಲಬುರ್ಗ ರಾಷ್ಟ್ರೀಯ ಹೆದ್ದಾರಿ ಉಪ ವಿಭಾಗದ ಸಹಾಯಕ ಎಂಜಿನಿಯರ್‌ ಗಿರೀಶ್‌ ಬಳಿ ಒಂದು ಮನೆ, ಒಂದು ವಾಣಿಜ್ಯ ಸಂಕೀರ್ಣ ಇದೆ.

ಎಸಿಬಿ ದಾಳಿ
ರಾಮನಗರ:
ಇಲ್ಲಿನ ಉಪ ವಿಭಾಗಾಧಿಕಾರಿ ಮಂಜುನಾಥ್‌ ಅವರ ಕಚೇರಿ ಹಾಗೂ ನಿವಾಸದ ಮೇಲೆ ಬುಧವಾರ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆಗಳನ್ನು ಪರಿಶೀಲಿಸಿದರು.

ಬೆಳಿಗ್ಗೆ 7 ಗಂಟೆಗೆ ನಗರದ ಮಿನಿ ವಿಧಾನಸೌಧದಲ್ಲಿ ಇರುವ ಉಪ ವಿಭಾಗಾಧಿಕಾರಿ ಕಚೇರಿಗೆ ಐವರು ಅಧಿಕಾರಿಗಳ ತಂಡ ಧಾವಿಸಿತು. ಆದರೆ ಕಚೇರಿಗೆ ಬೀಗ ಹಾಕಿತ್ತು. 9.30ರ ಸುಮಾರಿಗೆ ತಾ.ಪಂ. ಸಿಬ್ಬಂದಿ ಕಚೇರಿ ಬಾಗಿಲುತೆರೆದರು. 6 ಗಂಟೆ ಕಾಲ ದಾಖಲೆಗಳ ಪರಿಶೀಲನೆ ನಡೆಸಿತು.

ಐದು ತಾಸು ಕಾಯ್ದ ಅಧಿಕಾರಿಗಳು (ಕೊಡಿಗೇನಹಳ್ಳಿ ವರದಿ): ಮಧುಗಿರಿ ತಾಲ್ಲೂಕಿನ ಪುರವರ ಹೋಬಳಿಯ ಗಾಳಿಹಳ್ಳಿ ಗ್ರಾಮದಲ್ಲಿರುವ ಬೆಂಗಳೂರಿನ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಶ್ರೀನಿವಾಸ್ ಅವರ ತೋಟದ ಮನೆ ಪರಿಶೀಲನೆಗೆ ಬಂದ ಎಸಿಬಿ ಅಧಿಕಾರಿಗಳ ಐದು ತಾಸು ಕಾಯಬೇಕಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.