ADVERTISEMENT

ಆಲಮೇಲ | ಅಪಾಯದ ಅಂಚಿನಲ್ಲಿ ದೇವಣಗಾಂವ ಸೇತುವೆ: ಕುಸಿಯುವ ಭೀತಿ

ಇಂದೋ, ನಾಳೆಯೋ ಕುಸಿಯುವ ಭೀತಿ: ಕಣ್ಮುಚ್ಚಿ ಕುಳಿತ ಲೋಕೋಪಯೋಗಿ ಇಲಾಖೆ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2025, 4:03 IST
Last Updated 11 ಆಗಸ್ಟ್ 2025, 4:03 IST
ಆಲಮೇಲ ತಾಲ್ಲೂಕಿನ ದೇವಣಗಾಂವ ಸೇತುವೆ ರಸ್ತೆಯು ಗುಂಡಿಗಳ ಆಗರವಾಗಿದೆ
ಆಲಮೇಲ ತಾಲ್ಲೂಕಿನ ದೇವಣಗಾಂವ ಸೇತುವೆ ರಸ್ತೆಯು ಗುಂಡಿಗಳ ಆಗರವಾಗಿದೆ   

ಆಲಮೇಲ: ವಿಜಯಪುರ ಮತ್ತು ಕಲಬುರಗಿ ಜಿಲ್ಲೆಗಳನ್ನು ಒಂದುಗೂಡಿಸುವ, ಕರ್ನಾಟಕ ಮಹಾರಾಷ್ಟ್ರ ರಾಜ್ಯಗಳ ಗಡಿ ಸಂಪರ್ಕ ಕೊಂಡಿಯಾಗಿರುವ ತಾಲ್ಲೂಕಿನ ದೇವಣಗಾಂವ ಹಾಗೂ ಕಲಬುರ್ಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಸೊನ್ನ ಗ್ರಾಮಗಳ ಮಧ್ಯೆ ನಿರ್ಮಿಸಿರುವ ದೇವಣಗಾಂವ ಸೇತುವೆ ಅಪಾಯದ ಅಂಚಿನಲ್ಲಿದೆ.

ಈ ಸೇತುವೆ ಯಾವಾಗ ಬೇಕಾದರೂ ಕುಸಿಯುವ ಸಾಧ್ಯತೆ ಇದೆ. ದುರಂತದ ಲಕ್ಷಣಗಳಿದ್ದರೂ ಲೋಕೋಪಯೋಗಿ ಇಲಾಖೆ ಮಾತ್ರ ಕಣ್ಣುಮುಚ್ಚಿ ಕುಳಿತಿದೆ.

ಔರಾದ್‌ - ಸದಾಶಿವಘಢ ರಾಜ್ಯ ಹೆದ್ದಾರಿ 34 ಇದಾಗಿದ್ದು, ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಬೇಕೆಂಬ ಕೂಗು ಅನೇಕ ವರ್ಷಗಳಿಂದ ಈ ಭಾಗದ ಜನರಲ್ಲಿ ಕೇಳಿ ಬರುತ್ತಿದೆ. ಆದರೆ, ಜನಪ್ರತಿನಿಧಿಗಳ ನಿರ್ಲಕ್ಷಕ್ಕೆ ಒಳಗಾಗಿ ಈ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದೆ.

ADVERTISEMENT

ಕಳೆದ ಮೂರು ವರ್ಷಗಳಿಂದ ದುರಸ್ತಿಯಾಗದೆ ಇರುವುದರಿಂದ ಸೇತುವೆ ಮೇಲ್ಭಾಗದಲ್ಲಿ ಮಳೆಯ ನೀರು ನಿಂತು ದೊಡ್ಡ ದೊಡ್ಡ ಕಂದಕಗಳು ನಿರ್ಮಾಣವಾಗಿವೆ. ಪ್ರತಿನಿತ್ಯ ಎರಡು ಸಾವಿರಕ್ಕೂ ಹೆಚ್ಚು ವಾಹನಗಳು ಈ ಸೇತುವೆಯ ಮೂಲಕ ಸಂಚರಿಸುತ್ತವೆ. ಆದರೆ, ದೊಡ್ಡ ಕಂದಕಗಳಲ್ಲಿ ನೀರು ನಿಂತು ಸೇತುವೆಯ ಮೇಲ್ಭಾಗವು ಸಂಪೂರ್ಣ ಕಿತ್ತು ಹೋಗಿ ಆಳವಾದ ಗುಂಡಿಗಳು ಬಿದ್ದಿವೆ.

ಸೇತುವೆಯು ದೊಡ್ಡ ದೊಡ್ದ ಕಮಾನುಗಳನ್ನು ಹೊಂದಿದ್ದು, ಆ ಕಮಾನುಗಳ ರೀತಿಯಲ್ಲಿ ಸೇತುವೆ ಮೇಲ್ಭಾಗದಲ್ಲಿ ಉಬ್ಬು ಮತ್ತು ತಗ್ಗು ನಿರ್ಮಾಣಗೊಂಡಿವೆ.

ವಾಹನ ಸವಾರರ ನಿತ್ಯ ಪರದಾಟ

‘ಸೇತುವೆಯ ಮೇಲೆ ಸಂಚರಿಸುವ ವಾಹನ ಸವಾರರು ಗುಂಡಿಯನ್ನು ತಪ್ಪಿಸುವುದಕ್ಕಾಗಿ ಪರದಾಡಬೇಕಾದ ಸ್ಥಿತಿ ಉಂಟಾಗಿದೆ. ಗುಂಡಿಗಳಲ್ಲಿ ಚಕ್ರಗಳು ಸಿಲುಕಿ ಬಿದ್ದು ಅಪಘಾತ ಸಂಭವಿಸಿದ ಅನೇಕ ಉದಾಹರಣೆಗಳು ಇವೆ. ಕಳೆದ ಮೂರು ವರ್ಷಗಳಿಂದ ಇದೇ ರೀತಿಯಾಗಿ ಅಪಘಾತಕ್ಕೆ ಆಹ್ವಾನ ನೀಡುತ್ತಿದೆಯಾದರೂ ಏಕೆ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ತಿಳಿಯದು’ ಎನ್ನುತ್ತಾರೆ ದೇವಣಗಾಂವ ಗ್ರಾಮಸ್ಥರು.

ಐದು ಸಾವಿರ ವಾಹನಗಳು ಸೇತುವೆ ಮೇಲೆ:

‘ಈ ಸೇತುವೆಯ ಮೇಲೆ ನಿತ್ಯ ದ್ವಿಚಕ್ರ,  ತ್ರಿಚಕ್ರ, ಕಾರು, ಜೀಪ್, ಬಸ್,  ಶಾಲಾ ವಾಹನಗಳು, ಲಾರಿಗಳು ಈ ಸೇತುವೆ ಮೂಲಕ ಸಂಚರಿಸುತ್ತವೆ. ಒಂದು ವೇಳೆ ಚಾಲಕನ ನಿಯಂತ್ರಣ ತಪ್ಪಿ ದೊಡ್ಡ ಮಟ್ಟದ ಅಪಾಯ ಆಗುವ ಮುಂಚೆ ಅಧಿಕಾರಿಗಳು ಇತ್ತ ಗಮನ ಹರಿಸಬೇಕಾಗಿದೆ. ಒಂದು ವೇಳೆ ರಿಪೇರಿ ಮಾಡಲು ಆಗದೆ ಇದ್ದರೆ ಇರಲಿ ಕನಿಷ್ಠ ಪಕ್ಷ ಗುಂಡಿಗಳ ಮುಚ್ಚುವುದೂ ಆಗುವುದಿಲ್ಲವೇ’ ಎನ್ನುತ್ತಾರೆ ಆಲಮೇಲದ‌ ಯುವ ಹೋರಾಟಗಾರ ಹರೀಶ ಯಂಟಮಾನ.

ಕೈಯಲ್ಲಿ ಜೀವ ಹಿಡಿದು ಸಂಚರಿಸುವ ಸ್ಥಿತಿ ಎದುರಾಗಿದ್ದು, ವಾಹನ ಸವಾರರು ಸಂಕಟಪಡುತ್ತಿದ್ದಾರೆ. ಅನೇಕ ಜನರು ಬಿದ್ದು ಕೈಕಾಲುಗಳಿಗೆ ಗಾಯಗಳನ್ನು ಮಾಡಿಕೊಂಡಿದ್ದಾರೆ.

ಕಳೆದ ವರ್ಷ ದೇವಣಗಾಂವ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಸೇರಿಕೊಂಡು ಸೇತುವೆ ಉಳಿಸಿ ಎಂಬ ಬೃಹತ್ ಪ್ರಮಾಣದ ರಸ್ತೆ ತಡೆದು ಪ್ರತಿಭಟನೆಯನ್ನು ಮಾಡಿ ಸೇತುವೆ ರಿಪೇರಿ ಮಾಡುವಂತೆ ಆಗ್ರಹಿಸಿ ಅಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದರು. ಆದರೆ, ಕೆಲವೇ ದಿನಗಳಲ್ಲಿ ರಿಪೇರಿ ಮಾಡುತ್ತೇವೆ ಎಂದು ಹೇಳಿ ಹೋದ ಅಧಿಕಾರಿಗಳು ಮತ್ತೆ ಸೇತುವೆಯ ಕಡೆಗೆ ಮುಖ ಮಾಡಿಲ್ಲ.

ಸೇತುವೆಯ ಎರಡು ಮಗ್ಗುಲಗಳಲ್ಲಿ ಸಸಿಗಳು ಹುಟ್ಟಿಕೊಂಡು ಗಿಡಗಳಾಗಿ ಬೆಳೆದು ನಿಂತಿವೆ. ಇವುಗಳು ಸೇತುವೆಯ ತಳವನ್ನೇ ಅಲುಗಾಡಿಸುತ್ತಿವೆ. ಅವುಗಳ ನಿರ್ವಹಣೆ ಕೂಡ ಮಾಡುತ್ತಿಲ್ಲ.

ಆರು ದಶಕಗಳ ಹಿಂದೆ ಕಲ್ಲಕಂಬಗಳಿಂದ ನಿರ್ಮಿಸಿರುವ ಸೇತುವೆ
ಇಲ್ಲಿನ ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ಈ ಸೇತುವೆ ಬಗ್ಗೆ ಇಷ್ಟೊಂದು ಅನಾದರ ಏಕೆ? ಇದೊಂದು ಐತಿಹಾಸಿಕ ಸೇತುವೆ. ರಿಪೇರಿ ಮಾಡದಿದ್ದರೂ ಕನಿಷ್ಠ ಮುರುಮ್ ಅಥವಾ ವೈಟ್ ಮಿಕ್ಸ್ ಹಾಕಿ ಸಂಚಾರಕ್ಕೆ ಅನುವು ಮಾಡಿಕೊಡಬೇಕಿತ್ತು
ಬಸವರಾಜ ಹೂಗಾರ. ಸ್ಥಳೀಯ

ಸೇತುವೆ ಇತಿಹಾಸ 

ಸುಮಾರು ಅರ್ಧ ಕಿ.ಮೀ. ಉದ್ದವಿರುವ ಈ ಸೇತುವೆಯನ್ನು 1960ರಿಂದ 1963ರವರೆಗೆ ನಿರ್ಮಿಸಲಾಗಿದೆ. ಉದ್ದನೆಯ ಕಲ್ಲುಗಳಿಂದ ನಿರ್ಮಿಸಲಾಗಿದೆ. ಕಲ್ಲಿನ ಕಂಬಗಳು ದೊಡ್ಡ ಕಮಾನುಗಳನ್ನು ಹೊಂದಿದೆ. ಈ ಕಂಬಗಳು ಹಾಗೂ ಪಕ್ಕದಲ್ಲಿನ ತಡೆಗೋಡೆ ಇನ್ನೂ ಕೂಡ ಗಟ್ಟಿಮುಟ್ಟಾಗಿ ಇದೆ. ಆದರೆ 2002ರಲ್ಲಿ ಸೇತುವೆ ಮೇಲ್ಭಾಗ ಹಾಳಾಗಿದ್ದ ಪರಿಣಾಮ ಮೇಲ್ಭಾಗವನ್ನು ಮರು ನಿರ್ಮಿಸಲಾಗಿದೆ. ಆದರೆ ಸದ್ಯ ಇದೇ ಮೇಲ್ಭಾಗ ಮತ್ತೆ ಕುಸಿಯುತ್ತಿದ್ದು ಸೇತುವೆ ಅಡಿಪಾಯ ಅಲುಗಾಡುವ ಸಾಧ್ಯತೆ ಹೆಚ್ಚಾಗಿದೆ.

ಸೇತುವೆ ಉಳಿವಿಗೆ ಹೋರಾಟಕ್ಕೆ ನಿರ್ಧಾರ

65 ವರ್ಷಗಳ ಇತಿಹಾಸ ಹೊಂದಿರುವ ಇಂದಿಗೂ ಕೂಡ ಗಟ್ಟಿಮುಟ್ಟಾಗಿರುವ ದೇವಣಗಾಂವ ಸೇತುವೆ ಉಳಿಸಿಕೊಳ್ಳುವುದಕ್ಕಾಗಿ  ದೇವಣಗಾಂವ ಗ್ರಾಮದ ಯುವಕರ ತಂಡವೊಂದು ಹೋರಾಟಕ್ಕೆ ಸಿದ್ಧತೆ ಕೈಗೊಳ್ಳುತ್ತಿದೆ. ಇಷ್ಟು ದಿನಗಳವರೆಗೂ ಅಧಿಕಾರಿಗಳು ಜನಪ್ರತಿನಿಧಿಗಳು ಸೇತುವೆ ರಿಪೇರಿ ಮಾಡಬಹುದು ಎಂದು ಇಲ್ಲಿಯವರೆಗೆ ಕಾಯ್ದು ನೋಡಿದೆವು. ಆದರೆ ಹೀಗೆ ಕೈ ಕಟ್ಟಿ ಕುಳಿತರೆ ಸೇತುವೆ ನಶಿಸಿ ಹೋಗುತ್ತದೆ. ಈ ಭಾಗದ ಜನರಿಗೆ ಸಂಚಾರಕ್ಕೆ ಸಂಚಕಾರ ಬರುವ ಕಾಲ ದೂರವಿಲ್ಲ ಆದ್ದರಿಂದ ಎರಡು ಜಿಲ್ಲೆಗಳ ಸಂಪರ್ಕ ಕೊಂಡಿ ಕಳಚಿ ಬೀಳುವ ಮೊದಲು ಸುತ್ತಮುತ್ತಲಿನ ಗ್ರಾಮಗಳಾದ ಆಲಮೇಲ ದೇವಣಗಾಂವ ಬೊಮ್ಮನಹಳ್ಳಿ ಕುಮಸಗಿ ದೇವರ ನಾದವದಗಿ ಕಡ್ಲೆವಾಡ ಶಂಬೆವಾಡ ಬ್ಯಾಡಗಿಹಾಳ ಕುರುಬತಹಳ್ಳಿ ಹಾಗೂ ಅಫಜಲಪುರ ಸೊನ್ನ ಬಳುಂಡಗಿ ಶಿರವಾಳ ಗೌರ ಅಳ್ಳಗಿ ಕರಜಗಿ ಮಾಶ್ಯಾಳ ಸೇರಿದಂತೆ ಹಲವಾರು ಗ್ರಾಮಸ್ಥರು ಸೇತುವೆ ರಕ್ಷಣೆಗಾಗಿ ಹೋರಾಟಕ್ಕೆ ಮುಂದಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.